ಸಾರಾಂಶ
ಕಾರವಾರ: ಯುಪಿಐ ಮೂಲಕ ಹಣ ಪಡೆದ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆ ತೆರಿಗೆ ನೋಟಿಸ್ ನೀಡುತ್ತಿರುವುದು ಜಿಲ್ಲೆಯ ವರ್ತಕರನ್ನು ಕಂಗೆಡಿಸಿದೆ. ಪರಿಣಾಮವಾಗಿ ಹಲವು ವರ್ತಕರು ಯುಪಿಐ ಪೇಮೆಂಟ್ ಬದಲು ಕ್ಯಾಶ್ ಪಡೆಯುತ್ತಿದ್ದಾರೆ.
ಕಾರವಾರ ಹಾಗೂ ಜಿಲ್ಲೆಯ ಇತರೆಡೆ ಕೆಲವು ಹಣ್ಣು, ಬೇಕರಿ ಮತ್ತಿತರ ಅಂಗಡಿಗಳಲ್ಲಿ ಈಗ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಲಾಗಿದೆ. ಹೊರಗಡೆ ಇಟ್ಟಿದ್ದ ಕ್ಯೂಆರ್ ಕೋಡ್‌ಗಳನ್ನು ಅಂಗಡಿ ಮಾಲಕರು ಒಳಗಡೆ ಇಟ್ಟಿದ್ದಾರೆ. ಗ್ರಾಹಕರು ಅನಿವಾರ್ಯವಾಗಿ ಕ್ಯಾಶ್ ನೀಡುವಂತಾಗಿದೆ.ಬೆಂಗಳೂರು ಮತ್ತಿತರ ಕಡೆ ಸಣ್ಣ ವರ್ತಕರು ಕೂಡ ತೆರಿಗೆ ಭಾರದಿಂದ ಕಂಗೆಟ್ಟಿದ್ದರು. ತೆರಿಗೆ ನೀಡುವಂತೆ ನೋಟಿಸ್ ಬಂದಿರುವುದು ವ್ಯಾಪಾರಿಗಳ ವಲಯದಿಂದ ವ್ಯಾಪಕ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿತ್ತು. ಬೆಂಗಳೂರಿನಲ್ಲಿ ₹20ರಿಂದ ₹40 ಲಕ್ಷ ವಹಿವಾಟು ನಡೆಸುವವರಿಗೆ ಜಿಎಸ್‌ಟಿ ನೋಟಿಸ್ ನೀಡಲಾಗಿದ್ದು, ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಜಿಎಸ್‌ಟಿ ವಿನಾಯಿತಿ ಪಡೆದ ಅಂಗಡಿಗಳಿಗೂ ನೋಟಿಸ್ ನೀಡಿದ ಪರಿಣಾಮ ಜಿಲ್ಲೆಯ ಅಂಗಡಿ ಮಾಲಕರಿಗೆ ಗಾಬರಿ ಹುಟ್ಟಿಸಿದೆ.
ಈ ನಡುವೆ ಮೂರು ವರ್ಷದ ತೆರಿಗೆ ಬಾಕಿ ವಸೂಲಿ ಮಾಡುವುದನ್ನು ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರಿಂದ ಸಣ್ಣ ವರ್ತಕರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ. ಆದರೆ ಇನ್ನು ಮುಂದೆ ಜಿಎಸ್‌ಟಿ ಕಡ್ಡಾಯ ಎಂದು ತಿಳಿಸಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ತೆರಿಗೆ ನೀಡಲೇಬೇಕು ಎಂದು ಸಂದೇಶ ನೀಡಿದಂತಾಗಿದೆ.ಜಿಎಸ್‌ಟಿ ನೋಟಿಸ್ ನೀಡುತ್ತಿರುವುದು ನಮಗೂ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಇದುವರೆಗೂ ನಮಗೆ ಯಾವುದೇ ಮಾಹಿತಿ ನೀಡದೇ ಈಗ ಏಕಾಏಕಿ ನೋಟಿಸ್ ನೀಡಿದರೆ ಏನು ಮಾಡಬೇಕು ಎಂದು ತಿಳಿಯದಾಗಿದೆ. ಹೀಗಾಗಿ ಸದ್ಯಕ್ಕೆ ಕ್ಯಾಶ್ ಪಡೆಯುತ್ತಿದ್ದೇವೆ ಎನ್ನುತ್ತಾರೆ ವರ್ತಕ ಮಹಾದೇವ.