ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಆಲಮಟ್ಟಿ ಲಾಲಬಹಾದ್ದೂರ ಜಲಾಶಯದ ಎತ್ತರ ಹೆಚ್ಚಿಸುವ ಕುರಿತು ಸುಪ್ರೀಂಕೋರ್ಟ್‌ ಅಂಗಳದಲ್ಲಿದ್ದು, ನ್ಯಾಯಾಲಯದ ಆದೇಶದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ಆರ್ಥಿಕ ಇಲಾಖೆ ಸಲಹೆ ಹಾಗೂ ಅನುಮೋದನೆ ಪಡೆದು ಅಲ್ಲಿಯವರೆಗೂ ಈಗಾಗಲೇ ಈ ಭಾಗದ ನೀರಾವರಿ ಯೋಜನೆಗಳ ಪೂರ್ಣಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಪಟ್ಟಣದ ಸಾಯಿನಗರ, ಸಂಗಮೇಶ ನಗರ ಹಾಗೂ ಬಸವ ನಗರದಲ್ಲಿ ಕೆಬಿಜೆಎನ್‌ಎಲ್‌ ಇಲಾಖೆಯಿಂದ ನಿರ್ಮಿಸಿದ ನೂತನ ಉದ್ಯಾನಗಳನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಈ ಬಾರಿ ಎಲ್ಲೆಡೆ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಆಲಮಟ್ಟಿ ಜಲಾಶಯದಲ್ಲಿ ಅಗತ್ಯ ನೀರು ಭರ್ತಿಯಾಗಿಲ್ಲ. ಆದರೂ ಈ ಭಾಗದ ರೈತರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರು ಒದಗಿಸಲು ಕೆರೆಗಳಿಗೆ ನೀರು ಹರಿಬಿಡಲು ಚಿಂತನೆ ನಡೆಸಲಾಗಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಈ ಭಾಗದಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿರುವ ಕೀರ್ತಿ ಶಾಸಕ ಸಿ.ಎಸ್.ನಾಡಗೌಡರಿಗೆ ಸಲ್ಲುತ್ತದೆ. ಒಳ್ಳೆಯ ಸುಸಂಸ್ಕೃತ ಮನೆತನದಿಂದ ಬೆಳೆದು ಬಂದಿರುವ ಇವರು ಮತಕ್ಷೇತ್ರದ ಎಲ್ಲ ವರ್ಗದವರನ್ನು ಅತ್ಯಂತ ಗೌರವದಿಂದ ಕಾಣುವುದರೊಂದಿಗೆ ಉತ್ತಮ ಆಡಳಿತ ನೀಡಿದ್ದಾರೆ. ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕಾರ್ಮಿಕ ಸಚಿವರಾಗಿ ಉತ್ತಮ ಜನರಪರ ಆಡಳಿತ ನಿರ್ವಹಿಸಿದ ಹಿರಿಯ ಅನುಭವಿಗಳಾಗಿದ್ದಾರೆ. ಮತಕ್ಷೇತ್ರವೂ ಸೇರಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಸಚಿವರಾಗುವ ಯೋಗ ಕೂಡಿಬರಲಿ ಎಂದು ಹಾರೈಸುತ್ತೇನೆಂದರು.ಸರ್ಕಾರದ ಯಾವುದೇ ಯೋಜನೆಗಳು ಸಾರ್ವಜನಿಕರ ಅನುಕೂಲಕ್ಕಾಗಿ ಅನುಷ್ಠಾನಗೊಳ್ಳುತ್ತವೆ. ಅವುಗಳನ್ನು ಕಾಪಾಡಿಕೊಂಡು ಹೋಗುವ ಜವಾವ್ದಾರಿ ಸಾರ್ವಜನಿಕರ ಮೇಲಿದೆ. ಉದ್ಯಾನ ನಿರ್ಮಿಸುತ್ತಿರುವುದು ಒಳ್ಳೆಯ ಬೆಳವಣಿಗೆ, ಈ ಭಾಗದ ಜನರು ಇಲ್ಲಿರುವ ವಸ್ತುಗಳನ್ನು ಹಾಳು ಮಾಡದೆ ಜಾಗರೂಕತೆಯಿಂದ ನೋಡಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಂಡು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾಗರಬೆಟ್ಟ ಏತ ನೀರಾವರಿ ಯೋಜನೆಯ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಅತ್ಯಲ್ಪ ಕಾಮಗಾರಿ ಬಾಕಿ ಉಳಿದಿದೆ. ಅದನ್ನು ಪೂರ್ಣಗೊಳಿಸುವ ಮೂಲಕ ಮುಂಬರುವ ಅಗಸ್ಟ್‌-ಸೆಪ್ಟೆಂಬರ್‌ ತಿಂಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.


ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಮಾತನಾಡಿ, ಸರ್ಕಾರ ಜನಪ್ರತಿನಿಧಿಗಳಿಗೆ ನೀಡುವ ಸೌಲಭ್ಯಗಳನ್ನು ವೈಯಕ್ತಿಕವಾಗಿ ಎಂದಿಗೂ ದುರುಪಯೋಗಪಡಿಸಿಕೊಳ್ಳದ ರಾಜಕಾರಣಿಗಳಲ್ಲಿ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಅವರು ಒಬ್ಬರು. ಸರಳತೆ ಮತ್ತು ಸಜ್ಜನಿಕೆಯಲ್ಲಿ ಎಚ್.ಕೆ.ಪಾಟೀಲ್‌ ಅವರ ನಂತರ ರಾಮಲಿಂಗಾರೆಡ್ಡಿ ಅವರು ಮಾದರಿ ರಾಜಕಾರಣಿಯಾಗಿದ್ದಾರೆ. ನನ್ನ ಕ್ಷೇತ್ರದ ಜನರಿಗೆ ಸುಂದರ ಉದ್ಯಾನವನ ನಿರ್ಮಿಸಲು ಸಚಿವರ ಇಲಾಖೆಯಾದ ಕೆಬಿಜೆಎನ್‌ಎಲ್‌ನಿಂದ ಸಾಕಷ್ಟು ಅನುದಾನ ದೊರೆತಿದೆ. ಈ ಯೋಜನೆಯನ್ನು ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ವಿಸ್ತರಿಸಬೇಕು. ಪ್ರತಿಗ್ರಾಮ ಪಂಚಾಯತಿಗೂ ಕನಿಷ್ಠ ಒಂದು ಉದ್ಯಾನವನ ನಿರ್ಮಾಣವಾಗಬೇಕು ಎಂಬುದು ನನ್ನ ಆಶಯ ಎಂದವರು ಹೇಳಿದರು.

ಈ ವೇಳೆ ಮಾತನಾಡಿದ ನೀರಾವರಿ ಸಚಿವರಾಮಲಿಂಗಾರೆಡ್ಡಿ ಅವರು, ರಾಜ್ಯ ಸರ್ಕಾರದಲ್ಲಿ ನನಗಿಂತಲೂ ಮೊದಲು ನಾಡಗೌಡ ಅವರು ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಸರಳ, ಸಜ್ಜನಿಕೆಯ ರಾಜಕಾರಣ ಮೂಲಕ ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮುದ್ದೇಬಿಹಾಳ ಕ್ಷೇತ್ರದ ಅಭಿವೃದ್ಧಿಗೆ ನನ್ನ ಇಲಾಖೆಯಿಂದ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ಮತ್ತು ನೆರವು ನೀಡುತ್ತೇನೆಂದು ಭರವಸೆ ನೀಡಿದರು.

ಸಸಿಗೆ ನಿರುಣಿಸುವ ಮೂಲಕ ಸಚಿವರಾಮಲಿಂಗಾರೆಡ್ಡಿ ಅವರು ಉದ್ಯಾನವನಗಳನ್ನು ಲೋಕಾರ್ಪಣೆ ಮಾಡಿದರು. ಕೆಬಿಜೆಎನ್ಎಲ್ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ, ಮುಖ್ಯ ಕಾರ್ಯನಿರ್ವಾಹಕಅಧಿಕಾರಿ ಡಿ. ಬಸವರಾಜ, ಆಲಮಟ್ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಕೆ. ಬಗಾಯತ್, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ವಿಜಯಪುರ ಜಿಲ್ಲಾ ನಗರಾಭಿವೃದ್ಧಿ ಕೋಶ ಇಲಾಖೆಯ ಬಿ.ಎ. ಸೌದಾಗರ, ತಹಸೀಲ್ದಾರ ಕೀರ್ತಿ ಚಾಲಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ ಚವ್ಹಾಣ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಗಣ್ಯರಾದ ಬಿ.ಎಸ್. ಪಾಟೀಲ,(ಯಾಳಗಿ) ಶರಣು ಸಜ್ಜನ, ಸಂಗನಗೌಡ ಅಸ್ಕಿ, ಪ್ರಭುಗೌಡ ಮದರಕಲ್ಲ, ಶರಣುಧನಿ ನಾಡಗೌಡ, ಪ್ರಭುರಾಜ ಕಲಬುರ್ಗಿ, ಸಂಗನಗೌಡ ಬಿರಾದಾರ (ಜಿಟಿಸಿ), ಸಂಗನಗೌಡ ಪಾಟೀಲ (ಕರೆಕಲ್ಲ) ರಾಜುಗೌಡ ಕರಡ್ಡಿ, ರಾಹುಲಗೌಡ ಪಾಟೀಲ, ಬಾಲಾಜಿ ಶುಗರ್ಸ್‌ ನ ಎಂಡಿ ಹಣಮಂತ್ರಾಯಗೌಡ ಪಾಟೀಲ, ಸುರೇಶಗೌಡ ಪಾಟೀಲ, ರುದ್ರಗೌಡ ಅಂಗಡಗೇರಿ, ಆಶೋಕ ನಾಡಗೌಡ, ಕಾಮರಾಜ ಬಿರಾದಾರ, ಮೈಬೂಬ ಗೊಳಸಂಗಿ, ಪಿಂಟು ಸಾಲಿಮನಿ, ಸದು ಮಠ, ಹುಸೇನ ಮುಲ್ಲಾ, ಪುರಸಭೆ ಸದಸ್ಯರಾದ ಪ್ರಿಭಾ ಅಂಗಡಗೇರಿ, ಶಾಹಾಜದಬಿ ಹುಣಸಗಿ, ಸಹನಾ ಬಡಿಗೇರ, ಮಹಿಳಾ ಮುಖಂಡರಾದ ಅಕ್ಷತಾ ಚಲವಾದಿ, ರೇಣುಕಾ ಹೂಗಾರ ಸೇರಿದಂತೆ ಹಲವರು ಇದ್ದರು.