ಯುಕೆಪಿ ಸಂತ್ರಸ್ತರ ಈಡೇರಿಕೆಗೆ ಯಾವ ತ್ಯಾಗಕ್ಕೂ ಸಿದ್ಧ

| Published : Nov 05 2024, 01:38 AM IST / Updated: Nov 05 2024, 01:39 AM IST

ಯುಕೆಪಿ ಸಂತ್ರಸ್ತರ ಈಡೇರಿಕೆಗೆ ಯಾವ ತ್ಯಾಗಕ್ಕೂ ಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಸಂತ್ರಸ್ತರು ಒಗ್ಗಟ್ಟಾಗಿ ಹೋರಾಟದ ರೂಪರೇಷೆಗಳನ್ನು ಹಾಕಿಕೊಂಡು ಸರ್ಕಾರದ ಗಮನ ಸೆಳೆಯೋಣ. ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಸಮಸ್ಯೆಗಳ ಈಡೇರಿಕೆಗೆ ನಾನು ಯಾವ ತ್ಯಾಗಕ್ಕೂ ಸದಾಸಿದ್ಧ, ಹೋರಾಟಕ್ಕೆ ಎಲ್ಲ ಸಹಕಾರ ನೀಡುವೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಸಂತ್ರಸ್ತರು ಒಗ್ಗಟ್ಟಾಗಿ ಹೋರಾಟದ ರೂಪರೇಷೆಗಳನ್ನು ಹಾಕಿಕೊಂಡು ಸರ್ಕಾರದ ಗಮನ ಸೆಳೆಯೋಣ. ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಸಮಸ್ಯೆಗಳ ಈಡೇರಿಕೆಗೆ ನಾನು ಯಾವ ತ್ಯಾಗಕ್ಕೂ ಸದಾಸಿದ್ಧ, ಹೋರಾಟಕ್ಕೆ ಎಲ್ಲ ಸಹಕಾರ ನೀಡುವೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು. ತಾಲೂಕಿನ ಅಮಲಝರಿ ಗ್ರಾಮದಲ್ಲಿ ನಡೆದ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ಆಯೋಜಿಸಿದ ಸಂತ್ರಸ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಉತ್ತರ ಕರ್ನಾಟಕದ ನೀರಾವರಿಯ ಬಗ್ಗೆ ಸಾಕಷ್ಟು ಸಲ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿರುವೆ. ತಾವು ಯಾವ ಸಮಯದಲ್ಲಿ ಕರೆದರೂ ಬರುತ್ತೇನೆ ಎಂದು ಭರವಸೆ ನೀಡಿದರು.

ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಅದೃಶಪ್ಪ ದೇಸಾಯಿ ಮಾತನಾಡಿ, 6ನೇ ಗ್ಯಾರಂಟಿಯಂತೆ ಸರ್ಕಾರ ಪ್ರತಿ ವರ್ಷ ನೀರಾವರಿಗೆ ₹40 ಸಾವಿರ ಕೋಟಿ ತೆಗೆದಿಡಬೇಕು. ದಕ್ಷಿಣ ಕರ್ನಾಕಟದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ಮುಗಿದಿವೆ. ಆದರೆ, ಉತ್ತರ ಕರ್ನಾಟಕದಲ್ಲಿ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಆರೋಪಿಸಿದರು.ಕಾತರಕಿಯ ಮಲ್ಲಪ್ಪ ಕೌಜಲಗಿ ಮಾತನಾಡಿ, ಸರ್ಕಾರಗಳ ನಿರ್ಲಕ್ಷ್ಯ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆ ವಿಳಂಬವಾಗುತ್ತ ನಡೆದಿದೆ. ಡಿಸಿಎಂ ಡಿ.ಕೆ.ಶಿವಕುಮಾರ ಉತ್ತರ ಕರ್ನಾಟಕದ ನೀರಾವರಿಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.ಗಲಗಲಿಯ ಹೊಳಬಸು ಬಾಳಶೆಟ್ಟಿ ಮಾತನಾಡಿ, ಕಾವೇರಿಯಂತೆ ಕೃಷ್ಣಾ ನದಿಗೆ ಏಕೆ? ಚಿಂತೆನೆ ನಡೆಯುತ್ತಿಲ್ಲ. ಸರ್ಕಾರಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ಯೋಜನೆ ಪೂರ್ಣವಾದರೆ ಸಾಕಷ್ಟು ನೀರಾವರಿಯಾಗಲಿದೆ ಎಂದರು.ಗುಲಗಾಲ ಜಂಬಗಿಯ ನಾಗಪ್ಪ ಸೊರಗಾವಿ ಮಾತನಾಡಿ, ನಮ್ಮ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೇಳಿದವರು ಈಗ ಮೌನವಾಗಿದ್ದಾರೆ. ಉತ್ತರ ಕರ್ನಾಟಕದ ಎಲ್ಲ ಶಾಸಕ, ಸಚಿವರನ್ನು ಒಗ್ಗೂಡಿಸಿ ಸರ್ಕಾರದ ಗಮನ ಸೆಳೆಯುವಂತೆ ಮಾಡೋಣ ಎಂದು ಕೋರಿದರು. ಮಾಜಿ ಸಚಿವ, ಸಮಿತಿಯ ಗೌರವಾಧ್ಯಕ್ಷ ಅಜಯಕುಮಾರ ಸರನಾಯಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿ ಮುಖಂಡ ಪ್ರಕಾಶ ಅಂತರಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ವನ್ಯಜೀವಿ ಪರಿಪಾಲಕ ಎಂ.ಆರ್.ದೇಸಾಯಿ, ಎಸ್.ಟಿ.ಪಾಟೀಲ, ವೆಂಕಣ್ಣ ಗಿಡ್ಡಪ್ಪನವರ, ಈಶ್ವರ ಕಾಡಪ್ಪನವರ, ಎಂ.ಎಲ್.ಕೆಂಪಲಿಂಗನ್ನವರ, ಪಂಡೀತಪ್ಪ ಅಮಲಝರಿ, ಐ.ಜಿ.ಪುರಾಣಿಕ, ಶ್ರೀಶೈಲ ಸೂಳಿಕೇರಿ, ಗೋವಿಂದಪ್ಪಗೌಡ ಪಾಟೀಲ, ಅಶೋಕ ಲೆಂಕೆನ್ನವರ, ಮುದಕಪ್ಪ ರಾಘಾ, ಪಿ.ಎಸ್.ಬಿರಾದಾರ, ಗೌಡಪ್ಪಗೌಡ ಪಾಟೀಲ, ಎಂ.ಎಸ್.ಕಾಳಗಿ, ದೊಡ್ಡಣ್ಣ ದೇಸಾಯಿ, ಎಚ್.ಪಿ.ಸೊನ್ನದ ಮತ್ತಿತರಿದ್ದರು.

ಯುಕೆಪಿ 3ನೇ ಹಂತದ ಯೋಜನೆ ಪೂರ್ತಿಯಾದರೇ ಉತ್ತರ ಕರ್ನಾಟಕದ 7 ಜಿಲ್ಲೆಗಳ ಸುಮಾರು 15 ಲಕ್ಷ ಹೇಕ್ಟರ್ ಪ್ರದೇಶ ಭೂಮಿ ನೀರಾವರಿಯಾಗಲಿದೆ. ದಕ್ಷಿಣ ಕರ್ನಾಟಕದಲ್ಲಿ 3 ಟಿಎಂಸಿ ನೀರಿಗೆ ಹೋರಾಟ ನಡೆಯುತ್ತಿದೆ. ಆದರೆ, ಪ್ರತಿ ವರ್ಷ ಕೃಷ್ಣಾ ನದಿಯಿಂದ 137 ಟಿಎಂಸಿ ನೀರು ಕೆಳಗಡೆ ಹರಿದು ಹೋಗುತ್ತಿದೆ. ಈಗಾಗಲೇ ಶೇ.75 ರಷ್ಟು ಈ ಯೋಜನೆ ಅನುಷ್ಠಾನಗೊಂಡಿದ್ದು, ಕೇವಲ ಶೇ.25 ರಷ್ಟು ಬಾಕಿ ಉಳಿದಿದೆ. ಹೀಗಾಗಿ ರಾಜ್ಯ ಸರ್ಕಾರವೇ ಯೋಜನೆ ಪೂರ್ಣಗೊಳಿಸಬೇಕು. ಇದಕ್ಕಾಗಿ 1.33 ಲಕ್ಷ ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.

-ಎಸ್.ಆರ್.ಪಾಟೀಲ,

ಮಾಜಿ ಸಚಿವರು.

ವಿಜಯಪುರದ ಭಾಗದಲ್ಲಿ ಭೂಮಿಯ ಮಾರ್ಗಸೂಚಿ ದರಪಟ್ಟಿ ಸರಿಯಾಗಿಲ್ಲ. ಸರ್ಕಾರ ಸರಿಪಡಿಸಿಬೇಕು. ಶೀಘ್ರ ನಾವೆಲ್ಲರೂ ಸಂಘಟನೆಯಾಗುವುದರೊಂದಿಗೆ ಉತ್ತರ ಕರ್ನಾಟಕದ ಎಲ್ಲ ಶಾಸಕರನ್ನು ಕರೆದುಕೊಂಡು ಸರ್ಕಾರದ ಗಮನ ಸೆಳೆಯುವುದರೊಂದಿಗೆ ಬೆಳಗಾವಿಯ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಮಾಡೋಣ.

-ಅದೃಶಪ್ಪ ದೇಸಾಯಿ,

ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷರು.