ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಹೊರವಲಯದ ಉಳಾಯಿಬೆಟ್ಟು ದರೋಡೆ ಘಟನೆಗೆ ಸಂಬಂಧಿಸಿ ಸ್ಥಳೀಯ ಪಂಚಾಯ್ತಿ ಸದಸ್ಯನ ಸಹಿತ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಮೂವರನ್ನು ಹೊರತುಪಡಿಸಿದರೆ ಉಳಿದೆಲ್ಲರೂ ಅಂತಾರಾಜ್ಯದವರು. ಇನ್ನೂ ನಾಲ್ಕೈದು ಮಂದಿಗೆ ಹುಡುಕಾಟ ಮುಂದುವರಿದಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ವಿವರ ನೀಡಿದರು. 10 ಮಂದಿ ಆರೋಪಿಗಳು: ನೀರುಮಾರ್ಗ ಒಂಟೆಮಾರ್ ನಿವಾಸಿ ವಸಂತ ಕುಮಾರ್ ಯಾನೆ ವಸಂತ ಪೂಜಾರಿ (೪೨), ರಮೇಶ್ ಪೂಜಾರಿ (೪೨), ಪೆರುವಾಯಿ ಮುಕುಡಾಪು ನಿವಾಸಿ ರೈಮಂಡ್ ಡಿಸೋಜ (೪೭), ಪೈವಳಿಕೆ ಕುರುಡುಪದವು ನಿವಾಸಿ ಬಾಲಕೃಷ್ಣ ಶೆಟ್ಟಿ ಯಾನೆ ಬಾಲಣ್ಣ (೪೮), ಕೇರಳ ತ್ರಿಶೂರ್‌ನವರಾದ ಜಾಕೀರ್ ಯಾನೆ ಶಾಕೀರ್ ಹುಸೈನ್ (೫೬), ವಿನೋಜ್ ಪಿ.ಕೆ ಯಾನೆ ವಿನ್ನು(೩೮), ಸಜೀಶ್ ಎಂ.ಎಂ ಯಾನೆ ಮಣಿ (೩೨), ಬಿಜು ಜಿ. (೪೧), ಸತೀಶ್ ಬಾಬು (೪೪) ಮತ್ತು ಶಿಜೋ ದೇವಸ್ಸಿ (೩೮) ಬಂಧಿತರು.ಜೂ.21ರಂದು ಉಳಾಯಿಬೆಟ್ಟು ಬಳಿಯ ಪೆರ್ಮಂಕಿ ಎಂಬಲ್ಲಿನ ನಿವಾಸಿ ಗುತ್ತಿಗೆದಾರ, ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್ ಎಂಬವರ ಮನೆಯಲ್ಲಿ ದರೋಡೆ ನಡೆದಿತ್ತು. ರಾತ್ರಿ ವೇಳೆ ಮನೆಗೆ ನುಗ್ಗಿದ ತಂಡ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿ ನಗದು ಸೇರಿದಂತೆ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿತ್ತು. ಭಾರಿ ಕುತೂಹಲ ಮೂಡಿಸಿದ್ದ ಈ ಪ್ರಕರಣವನ್ನು ಪೊಲೀಸರು 13 ದಿನಗಳಲ್ಲಿ ಪತ್ತೆಹಚ್ಚಿದ್ದಾರೆ.
ಯಾವುದೇ ಸುಳಿವು ಕೊಡದೆ ಪರಾರಿಯಾಗಿದ್ದ ಆರೋಪಿಗಳ ಪತ್ತೆಗಾಗಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಕಂಕನಾಡಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಿವಕುಮಾರ್, ಎಸಿಪಿ ಗೀತಾ ಮತ್ತು ಸಿಸಿಬಿ ತಂಡಗಳು ಪ್ರತ್ಯೇಕವಾಗಿ ತನಿಖೆ ನಡೆಸಿದ್ದವು. ಆರಂಭದಲ್ಲಿ ಬಂಟ್ವಾಳ ಮೂಲಕ ಕಾರು ತೆರಳಿರುವುದು ಪತ್ತೆಯಾಗಿತ್ತು. ಆನಂತರ ತನಿಖೆ ವೇಳೆ ತಲಪಾಡಿ ಮೂಲಕ ಆರೋಪಿಗಳು ಪರಾರಿಯಾಗಿದ್ದು ತಿಳಿದುಬಂದಿತ್ತು. ಈ ಮೂಲಕ ಕೇರಳದ ಸಂಪರ್ಕ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದರಂತೆ ಕಾರ್ಯಾಚರಣೆ ನಡೆಸಿ ಇನ್ನೋವಾ ಕಾರು ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ.ಪದ್ಮನಾಭ ಕೋಟ್ಯಾನ್ ಮಲಗುತ್ತಿದ್ದ ಬೆಡ್ ಅಡಿಭಾಗದಲ್ಲಿ ಅಪಾರ ನಗದು ಹಣ ಇದೆ ಎಂಬ ಶಂಕೆಯಲ್ಲಿ ತಂಡ ದರೋಡೆಗೆ ಸಂಚು ರೂಪಿಸಿತ್ತು. ಜೂನ್ ೧೮ರಂದು ಆರೋಪಿಗಳು ದರೋಡೆಗೆ ಯತ್ನಿಸಿದ್ದರು. ಕೊನೆ ಕ್ಷಣದಲ್ಲಿ ಕೈ ಬಿಟ್ಟು ಬಳಿಕ ಎರಡು ದಿನ ಬಿಟ್ಟು ೨೧ರಂದು ಸಂಜೆಯೇ ಮನೆ ಹೊಕ್ಕಿದ್ದರು.ಜಾಕೀರ್ ಹುಸೇನ್ ತನಿಖೆಯ ದಿಕ್ಕು ತಪ್ಪಿಸಲು ಹಿಂದಿ ಭಾಷೆ ಮಾತನಾಡುತ್ತಾ ಪದ್ಮನಾಭ ಕೋಟ್ಯಾನ್ ಮೇಲೆ ಹಲ್ಲೆ ಮಾಡಿದ್ದ. ಇತರರು ಮನೆಯವರನ್ನು ಬೆದರಿಸಿ ಹಣ ಎಲ್ಲಿದೆ ಎಂದು ಹುಡುಕಾಟ ನಡೆಸಿದ್ದರು. ಆರೋಪಿಗಳ ಪೈಕಿ ಸ್ಥಳೀಯ ನಾಲ್ಕು ಮಂದಿಯನ್ನು ಬುಧವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಗುರುವಾರ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಅನುಪಮ್ ಅಗರ್‌ವಾಲ್ ಮಾಹಿತಿ ನೀಡಿದ್ದಾರೆ.ಪಂಚಾಯತ್ ಸದಸ್ಯನೇ ಸೂತ್ರಧಾರ!: ಈ ಪ್ರಕರಣದ ಪ್ರಮುಖ ರೂವಾರಿ ಪದ್ಮನಾಭ ಕೋಟ್ಯಾನ್ ಅವರ ಕಾರು ಮತ್ತು ಲಾರಿ ಚಾಲಕನಾಗಿದ್ದ ವಸಂತ ಪೂಜಾರಿ. ಈತ ಕೂಡ ಕಾಂಗ್ರೆಸ್ ಸದಸ್ಯನಾಗಿದ್ದು, ನೀರುಮಾರ್ಗ ಗ್ರಾಮಪಂಚಾಯತ್ ಸದಸ್ಯನಾಗಿದ್ದಾನೆ. ತನ್ನ ಧನಿಯ ಬಳಿ ಸಾಕಷ್ಟು ಹಣ ಇದೆ ಎಂದು ಈತ ಇನ್ನೋರ್ವ ಆರೋಪಿ ರಮೇಶ್ ಪೂಜಾರಿಗೆ ತಿಳಿಸಿದ್ದು, ಅಲ್ಲಿಂದ ದರೋಡೆಗೆ ಸಂಚು ನಡೆದಿತ್ತು. ಬಳಿಕ ರೇಮಂಡ್ ಡಿಸೋಜಾ ಜೊತೆ ಸೇರಿಕೊಂಡು ಇನ್ನಷ್ಟು ಸ್ಕೆಚ್ ಹಾಕಲಾಗಿತ್ತು. ಕೋಟ್ಯಂತರ ಹಣವನ್ನು ಲೂಟಿ ಮಾಡಲು ರೇಮಂಡ್ ಸ್ಕೆಚ್ ಹಾಕಿದ್ದ. ಇದಕ್ಕಾಗಿ ಕಾಸರಗೋಡು ಜಿಲ್ಲೆಯ ಪೈವಳಿಕೆ ಬಾಲಕೃಷ್ಣ ಶೆಟ್ಟಿ ಮತ್ತು ಕೆಲವು ಕೇರಳ ಮೂಲದ ಆರೋಪಿಗಳನ್ನು ಸಂಪರ್ಕ ಮಾಡಿದ್ದ. ಮನೆ ಹೇಗಿದೆ ಎನ್ನುವುದರ ಬಗ್ಗೆ ಸಂಪೂರ್ಣ ಸ್ಕೆಚ್ ಅನ್ನು ವಸಂತ ಪೂಜಾರಿ ನೀಡಿದ್ದಲ್ಲದೆ, ಮನೆಯಲ್ಲಿ ಯಾರೆಲ್ಲ ಇದ್ದಾರೆ ಎಂಬ ಮಾಹಿತಿಯನ್ನೂ ಆರೋಪಿಗಳಿಗೆ ನೀಡಿದ್ದ.20 ಗೋಣಿಚೀಲ ತಂದಿದ್ದರು!: ಕೇರಳ ದರೋಡೆಕೊರರನ್ನು ಆಕರ್ಷಿಸಲು ದಾಳಿ ನಡೆಸುವ ಮನೆಯಲ್ಲಿ ೧೦೦ ಕೋಟಿ ಇದೆ ಇದೆ ಎಂದು ಕೇರಳ ತಂಡಕ್ಕೆ ರೇಮಂಡ್ ಡಿಸೋಜಾ ಮಾಹಿತಿ ನೀಡಿದ್ದ. ಅದು ಮತ್ತೆ ೩೦೦ ಕೋಟಿ ರು.ಗಳಷ್ಟು ಹಣವಿರಬಹುದು ಎಂಬ ಮಟ್ಟಿಗೆ ಪ್ರಚಾರ ಪಡೆದಿತ್ತು. ಈ ಹಣ ಲೂಟಿಗೆ ಕೇರಳ ಗ್ಯಾಂಗ್ ಉತ್ಸುಕತೆಯಿಂದ ನಗರಕ್ಕೆ ಮೂರು ದಿನ ಮುಂಚೆಯೇ ಬಂದು ಠಿಕಾಣಿ ಹೂಡಿತ್ತು. ಕೋಟ್ಯಂತರ ರು. ಇದೆ ಎಂದು ತಿಳಿದಿದ್ದ ಕೇರಳ ಗ್ಯಾಂಗ್ ಸುಮಾರು ೨೦ ಗೋಣಿ ಚೀಲಗಳನ್ನು ಹಣ ತುಂಬಿಸಲು ತಂದಿತ್ತು. ಅದೆಲ್ಲವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ಅನುಪಮ್ ಅಗರ್‌ವಾಲ್ ವಿವರ ನೀಡಿದ್ದಾರೆ.
ಹಳೆ ಆರೋಪಿಗಳು: ಆರೋಪಿಗಳ ಪೈಕಿ ವಸಂತ ಕುಮಾರ್ ಎಂಬಾತನ ವಿರುದ್ಧ ಈ ಹಿಂದೆ 2011 ಇಸವಿಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣವೊಂದು ದಾಖಲಾಗಿತ್ತು. ಜಾಕೀರ್ ಯಾನೆ ಶಾಕೀರ್ ಹುಸೈನ್ ಎಂಬಾತನ ವಿರುದ್ಧ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ತ್ರಿಶೂರ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಸತೀಶ್ ಬಾಬು ಎಂಬಾತನ ವಿರುದ್ಧ 2006 ನೇ ಇಸವಿಯಲ್ಲಿ ತ್ರಿಶೂರ್ ಜಿಲ್ಲೆಯ ನಡುಪುಯ ಪೊಲೀಸ್ ಠಾಣೆಯಲ್ಲಿ ಶಾಜಿ ಎಂಬಾತನ ಕೊಲೆ ಪ್ರಕರಣ ದಾಖಲಾಗಿದೆ.ಬಿಜು ಎಂಬಾತನ ವಿರುದ್ದ ಈ ಹಿಂದೆ ಕೇರಳ ರಾಜ್ಯದ ಮುವಾಟ್ಟಿಪುರ ಎಕ್ಸೈಸ್ ವಿಭಾಗದಲ್ಲಿ, ಶಾಂತಾಪುರಂ ಪೊಲೀಸ್ ಠಾಣೆಯಲ್ಲಿ, ಕಾಮಾಕ್ಷಿ ಎಕ್ಸೈಸ್ ವಿಭಾಗದಲ್ಲಿ ಒಟ್ಟು 4 ಅಬಕಾರಿ ಕಾಯ್ದೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ.
ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್, ಎಸಿಪಿಗಳಾದ ಧನ್ಯಾ ನಾಯಕ್, ಗೀತಾ ಕುಲಕರ್ಣಿ ಇದ್ದರು.