ಕುವೆಂಪು, ದ.ರಾ. ಬೇಂದ್ರೆ, ಗೋಕಾಕ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಅವರಂತಹ ವ್ಯಕ್ತಿಗಳು ಸಿಗುವುದು ಕಷ್ಟ. ನಮ್ಮ ನಾಡಿಗೆ ಇವರಿಂದಾಗಿ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಇಂತಹವರ ಮೆದುಳು ಕಂಪ್ಯೂಟರ್‌ ನಂತೆ ಕೆಲಸ ಮಾಡುತ್ತಿತ್ತು. ಆದರೆ ಈಗಿನ ವಿದ್ಯಾರ್ಥಿಗಳ ಮೆದುಳು ಕ್ರಿಯಾಶೀಲವಾಗಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಹಿಂದಿನ ಸಾಹಿತಿಗಳು, ಲೇಖಕರ ಮೆದುಳೆಂಬ ಕಂಪ್ಯೂಟರ್ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಇಂದಿನ ವಿದ್ಯಾರ್ಥಿಗಳ ಮೆದುಳೆಂಬ ಕಂಪ್ಯೂಟರ್ ಕೆಲಸ ಮಾಡತ್ತಿಲ್ಲ. ಇದು ತುಂಬಾ ದುರಂತ ಹಾಗೂ ವಿಪರ್ಯಾಸ ಎಂದು ವಿಧಾನ ಪರಿಷತ್‌ ಸದಸ್ಯೆ ಹಾಗೂ ನಟಿ ಉಮಾಶ್ರೀ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಮತ್ತು ನಾಡಗೀತೆ ಶತಮಾನ ಸಂಭ್ರಮದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು, ದ.ರಾ. ಬೇಂದ್ರೆ, ಗೋಕಾಕ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಅವರಂತಹ ವ್ಯಕ್ತಿಗಳು ಸಿಗುವುದು ಕಷ್ಟ. ನಮ್ಮ ನಾಡಿಗೆ ಇವರಿಂದಾಗಿ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಇಂತಹವರ ಮೆದುಳು ಕಂಪ್ಯೂಟರ್‌ ನಂತೆ ಕೆಲಸ ಮಾಡುತ್ತಿತ್ತು. ಆದರೆ ಈಗಿನ ವಿದ್ಯಾರ್ಥಿಗಳ ಮೆದುಳು ಕ್ರಿಯಾಶೀಲವಾಗಿಲ್ಲ ಎಂದರು.

ವಯಸ್ಸಿನ ಕಾರಣದಿಂದ ವಿದ್ಯೆ ನಿಲ್ಲಬಾರದು. ಸಾಯುವವರೆಗೂ ಕಲಿಕೆಗೆ ಅವಕಾಶವಿದೆ. ವಿದ್ಯೆಗೆ ಹಾಗೂ ಕಲಿಕೆಗೆ ಯಾವುದೇ ರೀತಿಯ ವಯಸ್ಸಿಲ್ಲ. ಕುವೆಂಪು, ಬಹೇಂದ್ರೆಯಂತಹ ದೊಡ್ಡ ದೊಡ್ಡ ವ್ಯಕ್ತಿಗಳು ಬಂದು ವಿದ್ಯಾದಾನ ಮಾಡಿ ಹೋಗಿದ್ದಾರೆ. ಇವರ ಮೆದುಳು ಎಷ್ಟು ಕ್ರೀಯಾಶೀಲವಾಗಿತ್ತು, ಕನ್ನಡ ಭಾಷೆ ಹಾಗೂ ಶಿಕ್ಷವಣವನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದು ಅರಿತುಕೊಳ್ಳಬೇಕು ಎಂದರು.

ಇಂದಿನ ವಿದ್ಯಾರ್ಥಿಗಳು ಕಂಪ್ಯೂಟರ್‌ ನಲ್ಲಿ ಟೈಪ್ ಮಾಡಿ ಪ್ರಿಂಟ್ ತೆಗೆದುಕೊಂಡು ಓದುತ್ತಾರೆ. ಇಂತಹ ಕೆಲಸ ಮಾಡಬಾರದು. ಪ್ರತಿಯೊಬ್ಬರೂ ಆಳಕ್ಕೆ ಇಳಿದು ಅಭ್ಯಾಸ ಮಾಡಿ ಮನನ ಮಾಡಿ ತಾವೇ ಸ್ವಂತವಾಗಿ ಮಾತನಾಡುವುದರ ಮೂಲಕ ಜನರಿಗೆ ಹತ್ತಿರವಾಗಬೇಕು. ಇಂತಹ ವಿಶ್ವವಿದ್ಯಾನಿಲಯಗಳಲ್ಲಿ ಓದುವುದು ಹೆಮ್ಮೆಯ ವಿಚಾರ. ಈ ವಿವಿಗೆ ತನ್ನದೇ ಆದ ಇತಿಹಾಸವಿದೆ. ಅನೇಕ ಮಹನೀಯರು ಇಲ್ಲಿಂದ ಕಲಿತು ಹೋಗಿದ್ದಾರೆ. ಮುಕ್ತ ವಿಶ್ವವಿದ್ಯಾನಿಲಯ ಬರುವುದಕ್ಕಿಂತ ಮುಂಚೆ ಮೈಸೂರು ವಿಶ್ವವಿದ್ಯಾನಿಲಯವನ್ನು ಕುವೆಂಪು, ಬಿ.ಎಂ. ಶ್ರೀಕಂಠಯ್ಯ, ದೇ.ಜವರೇಗೌಡ ಸೇರಿದಂತೆ ಅನೇಕ ಶ್ರೇಷ್ಠ ಮಹನೀಯರು ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕನ್ನಡ ಭಾಷೆಗೆ, ಕನ್ನಡ ನಾಡಿಗೆ ಬಹಳಷ್ಟು ಹೋರಾಟಗಳನ್ನು ಮಾಡುತ್ತಾ ಕನ್ನಡಿಗರು ಈ ನೆಲದಲ್ಲಿ ಉಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಮೈಸೂರು ನಗರ ಎಂದ ಕೂಡಲೇ ಎಷ್ಟೋ ಚರಿತ್ರೆಗಳು, ಇತಿಹಾಸಗಳು ಹಾಗೂ ಶ್ರೇಷ್ಟವಾದ ನೆನಪಿನಲ್ಲಿ ಇಡುವಂತಹ ವಿಷಯ ಓದಬಹುದು ಎಂದರು.

ಸ್ವತಂತ್ರ ಪೂರ್ವದಲ್ಲಿ ಮೈಸೂರು ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟರೂ ಸಹ ಇಲ್ಲಿನ ಮಹಾರಾಜರ ಕೊಡುಗೆ ಬಹಳಷ್ಟಿದೆ. ಸಂಗೀತ, ನೃತ್ಯ, ನಾಟಕ ಮತ್ತು ಶಿಕ್ಷಣಕ್ಕೆ ಒತ್ತು ಕೊಟ್ಟಂತಹ ನಗರ ಮೈಸೂರು. ಇಂದಿಗೂ ಬಹಳಷ್ಟು ಜನಕ್ಕೆ ಇಷ್ಟವಾಗುವ ಸಾಂಸ್ಕೃತಿಕ ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರಿನ ಜತೆಗೆ ಧಾರವಾಡವೂ ಕೂಡ ಇರುತ್ತದೆ ಎಂದು ಹೇಳಿದರು.

ಶಿಕ್ಷಣದಿಂದ ವಂಚಿತರಾದವರು ಮತ್ತೆ ವಿದ್ಯೆಯನ್ನು, ಅದರಲ್ಲೂ ಉನ್ನತ ವಿದ್ಯೆ ಗಳಿಸಬಹುದೆಂಬ ಕಾರಣದಿಂದ ಮುಕ್ತ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿದೆ. ನಾನೂ ಸಹ ಎಸ್‌ಎಸ್‌ಎಲ್‌ಸಿ ಮಾಡಿದರೂ ನೇರವಾಗಿ 21 ವರ್ಷಕ್ಕೆ ಮತ್ತೆ ಎಂ.ಎ ಮಾಡುವ ಅವಕಾಶ ಸಿಕ್ಕಿದ್ದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಎಂದರು.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಪ್ರೊ.ಪಿ.ಕೆ. ರಾಜಶೇಖರ, ಮುಕ್ತ ವಿವಿ ಕುಲಸಚಿವ ಪ್ರೊ.ಎಸ್.ಕೆ. ನವೀನ್ ಕುಮಾರ್, ಶೈಕ್ಷಣಿಕ ವಿಭಾಗದ ಡೀನ್ ಪ್ರೊ.ಎಂ. ರಾಮನಾಥಂ ನಾಯುಡು, ಪರಿಕ್ಷಾಂಗ ವಿಭಾಗದ ಕುಲಸಚಿವ ಡಾ.ಸಿ.ಎಸ್. ಆನಂದ ಕುಮಾರ್, ಹಣಕಾಸು ಅಧಿಕಾರಿ ಪ್ರೊ.ಎಸ್. ನಿರಂಜನ್ ರಾಜ್, ಅಧ್ಯಯನ ಕೇಂದ್ರದ ಡೀನ್ ಡಾ.ಎನ್.ಆರ್. ಚಂದ್ರೇಗೌಡ, ಡಾ.ಎಚ್‌. ಬೀರಪ್ಪ, ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.