ಸಾರಾಂಶ
ಕಾರವಾರ: ಚಿತ್ರರಂಗದ ಹೆಸರಾಂತ ನಟಿ ಉಮಾಶ್ರೀ ಯಕ್ಷರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಹೆಜ್ಜೆ ಹಾಕಿ ರಂಜಿಸಿದರು.
ಹೊನ್ನಾವರದಲ್ಲಿ ಶುಕ್ರವಾರ ರಾತ್ರಿ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಯಕ್ಷಗಾನ ಮೇಳದ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಮಂಥರೆಯಾಗಿ ಸುಮಾರು ಒಂದು ಗಂಟೆ ಕಾಲ ರಂಗದಲ್ಲಿ ಪ್ರಸಂಗಕ್ಕೆ ಪೂರಕವಾಗಿ ವೇಷ ನಿರ್ವಹಿಸಿದರು.ರಾಘವೇಂದ್ರ ಜನ್ಸಾಲೆ ಅವರ "ನಾಳೆ ರಾಮಚಂದ್ರಗೆ ಅಭಿಷೇಕ " ಹಾಡಿಗೆ ಮರೆಯಲ್ಲಿ ನಿಂತು ಮಾತುಕತೆಯನ್ನು ಕೇಳಿಸಿಕೊಳ್ಳುವ ಅಭಿನಯವನ್ನು ಮಾಡುತ್ತಿದ್ದಂತೆ ಪ್ರೇಕ್ಷಕರಿಂದ ಚಪ್ಪಾಳೆ, ಶಿಳ್ಳೆಗಳು ಕೇಳಿಬಂದವು.
ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವ ಕುರಿತು ನಡೆಯುತ್ತಿರುವ ಮಾತುಕತೆಯ ಬಗ್ಗೆ ವಿವರಿಸಿ, ‘ಅಮ್ಮ ಅಮ್ಮನ ನಡುವೆ ಮಾತುಕತೆಯ ವಿಚಾರ ನೋಡುವವರಿಗೆ ಅಮ್ಮಮ್ಮಾ’ ಎಂಬ ಪ್ರಾಸಬದ್ಧ ಪದ ಬಳಕೆಯ ಕಸರತ್ತನ್ನೂ ಮಾಡಿದರು.ಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರ ಕೈಕೇಯಿ ಅವರೊಂದಿಗೆ ಮಂಥರೆಯಾಗಿ ಉಮಾಶ್ರೀ ನಡೆಸಿದ ಮಾತುಕತೆ ಪ್ರೇಕ್ಷಕರನ್ನು ಸೆಳೆಯಿತು. ಮಂಥರೆಯ ಚಾಕಚಕ್ಯತೆ, ಕುಟಿಲತನ, ರಾಮನಿಗೆ ಪಟ್ಟಾಭಿಷೇಕ ತಪ್ಪಿಸಲು ನಡೆಸಿದ ಪ್ರಯತ್ನ ಎಲ್ಲವನ್ನೂ ಉಮಾಶ್ರೀ ಚೆನ್ನಾಗಿ ಪ್ರಸ್ತುತ ಪಡಿಸಿದರು.
ಯಕ್ಷಗಾನದ ಹೆಜ್ಜೆಯ ಕೊರತೆ, ಸಂಭಾಷಣೆಯಲ್ಲಿ ಎದ್ದುಕಂಡ ನಾಟಕೀಯತೆಯಿಂದ ಅಪ್ಪಟ ಯಕ್ಷಗಾನ ಪ್ರಿಯರ ನಿರೀಕ್ಷೆಯನ್ನು ಈಡೇರಿಸುವಲ್ಲಿ ಉಮಾಶ್ರೀ ಸಂಪೂರ್ಣವಾಗಿ ಸಫಲರಾಗಲಿಲ್ಲ. ಮೊದಲ ಬಾರಿಗೆ ಯಕ್ಷರಂಗದಲ್ಲಿ ವೇಷ ಮಾಡುತ್ತಿರುವುದರಿಂದ ಸಹಜವಾಗಿ ಜನರಲ್ಲಿ ಕುತೂಹಲ ಉಂಟಾಗಿತ್ತು. ಉಮಾಶ್ರಿ ಅವರ ಯಕ್ಷಗಾನದ ವೇಷದ ವಿಡಿಯೋ ವೈರಲ್ ಆಗಿದೆ.ಹೊನ್ನಾವರದ ಅಪ್ಪಿ ಹೆಗಡೆ ಸಾಣ್ಮನೆ ಈ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಿದ್ದರು. ಉಮಾಶ್ರೀ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಕ್ಷಗಾನ ಯಶಸ್ವಿಯಾಯಿತು.
ಸಮಾಧಾನದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ನನ್ನನ್ನು ಮಂಥರೆಯ ಪಾತ್ರದಲ್ಲಿ ನೋಡಲು ಬಯಸಿದ್ದರು ಎಂದು ಅವರ ಪುತ್ರ ಸುಬ್ರಹ್ಮಣ್ಯ ಚಿಟ್ಟಾಣಿ ಗಮನಕ್ಕೆ ತಂದಿದ್ದರು. ಆಗ ವೇಷ ಮಾಡಲು ಸಾಧ್ಯವಾಗಲಿಲ್ಲ. ಈಗ ವೇಷ ಮಾಡುವ ಮೂಲಕ ದಿ. ಚಿಟ್ಟಾಣಿ ಅವರ ಮಾತನ್ನು ಈಡೇರಿಸಿದ ಸಮಾಧಾನ ಇದೆ ಎಂದು ಚಿತ್ರನಟಿ ಉಮಾಶ್ರೀ ತಿಳಿಸಿದರು.