ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಹೃದಯಭಾಗದಲ್ಲಿ ಹಾದು ಹೋಗಿರುವ ಬಿ.ಎಚ್.ರಸ್ತೆಯ ಡಿವೈಡರ್‌ಗೆ ಕಬ್ಬಿಣದ ಬೇಲಿ ಅಳವಡಿಸುವ ಕಾಮಗಾರಿ ಹಾಗೂ ಒಣ ಕಸ, ಹಸಿ ಕಸ ಬೇರ್ಪಡಿಸಿ ಗೊಬ್ಬರ ತಯಾರಿಸುವ ಘಟಕದ ಕಾಮಗಾರಿಯನ್ನು ನಾನೇ ಟೆಂಡರ್ ಮೂಲಕ ಕೈಗೊಂಡಿದ್ದೇನೆ ಎಂದು ಗುತ್ತಿಗೆದಾರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ಕಾಟಿಕೆರೆ ಉಮೇಶ್ ತಿಳಿಸಿದ್ದಾರೆ.ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಗಿರೀಶ್ ಅವರು ಈ ಕಾಮಗಾರಿಗಳನ್ನು ನಗರಸಭೆ ಅಧ್ಯಕ್ಷ ಸಮೀವುಲ್ಲಾ ಬೇರೆಯವರ ಹೆಸರಿನಲ್ಲಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿರುವುದನ್ನು ತಳ್ಳಿ ಹಾಕಿದ ಉಮೇಶ್, ತಮ್ಮ ಹೆಸರಿನ ಟೆಂಡರ್ ದಾಖಲೆಗಳನ್ನು ಪ್ರದರ್ಶಿಸಿ ಇಂತಹ ಸುಳ್ಳು ಆರೋಪಗಳು ಸರಿಯಲ್ಲ ಎಂದರು. ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದವರು ಇಂತಹ ಆಧಾರರಹಿತ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಗಿರೀಶ್ ಅವರನ್ನು ಪರೋಕ್ಷವಾಗಿ ಟೀಕಿಸಿದರು.ಸಮೀವುಲ್ಲಾ ಹಠಾವೋ ಅರಸೀಕೆರೆ ಬಚಾವೋ ಎಂಬ ಕೂಗನ್ನು ಕೊಡುವವರನ್ನು ಜನರು ಈಗಾಗಲೇ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ತೀರ್ಪು ನೀಡುತ್ತಾರೆ. ಶಾಸಕರು ನಾಲ್ಕು ಬಾರಿ ಜನರ ವಿಶ್ವಾಸ ಪಡೆದು ಆಯ್ಕೆಯಾಗಿದ್ದಾರೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ಸಂತೋಷ್ ಅವರನ್ನು ಉದ್ದೇಶಿಸಿ, ಚುನಾವಣೆಯಲ್ಲಿ ನಿಮಗೂ ಸಾಕಷ್ಟು ಮತದಾರರು ಬೆಂಬಲ ನೀಡಿದ್ದಾರೆ. ಅವರಲ್ಲಿ ‘ನಾವು ತಪ್ಪಾಗಿ ಮತ ಹಾಕಿದ್ದೇವೆ’ ಎಂಬ ಪಶ್ಚಾತ್ತಾಪ ಉಂಟಾಗದಂತೆ ನಿಮ್ಮ ನಡೆ ಇರಲಿ. ಪ್ರಚೋದನಕಾರಿ ಮಾತುಗಳನ್ನು ನಿಲ್ಲಿಸಿ. ಕ್ಷೇತ್ರದ ಅಭಿವೃದ್ಧಿಗೆ ಸಲಹೆ ನೀಡಿ, ಸಹಕಾರ ನೀಡಿ ಎಂದು ಸಲಹೆ ನೀಡಿದರು.ಗುತ್ತಿಗೆದಾರ ಲೋಕೇಶ್ ಮಾತನಾಡಿ, ನಗರದ ಪ್ರಮುಖ ರಸ್ತೆಯ ತಿರುವುಗಳಲ್ಲಿ ಫಲಕ ಅಳವಡಿಸಲು 15 ಲಕ್ಷ ರು. ಟೆಂಡರ್ ನನಗೆ ಸಿಕ್ಕಿತ್ತು. ಆ ಕಾಮಗಾರಿಯನ್ನು ನಾನು ಮಾಡಿದ್ದೇನೆ. ನಗರಸಭೆ ಅಧ್ಯಕ್ಷರಿಗೆ ಇದರೊಂದಿಗೆ ಯಾವುದೇ ಸಂಬಂಧವಿಲ್ಲ. ಯಾರದೋ ಹೆಸರಿನಲ್ಲಿ ಅವರು ಕೆಲಸ ಮಾಡಿದ್ದಾರೆ ಎಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದರು.ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಧರ್ಮ ಶೇಖರ್ ಮಾತನಾಡಿ ಭಾನುವಾರ ಕಲಾಭವನದಲ್ಲಿ ಭಾಗ್ಯಲಕ್ಷ್ಮಿ ಬಾಂಡ್‌ಗಳ ವಿತರಣೆ ಹಾಗೂ ನೂತನ ಅಂಗನವಾಡಿ ಶಿಕ್ಷಕಿಯರಿಗೆ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಎಲ್ಲರೂ ಭಾಗವಹಿಸಬೇಕೆಂದು ಕೋರಿದರು.