ಸಾರಾಂಶ
- ಕಲ್ಲು ತೂರಾಟ, ಗಲಭೆ ನೆಪದಲ್ಲಿ ಅಮಾಯಕರ ಬಂಧನ ಸಲ್ಲ:
- - - ಕನ್ನಡಪ್ರಭ ವಾರ್ತೆ ದಾವಣಗೆರೆಶ್ರೀ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ, ಗಲಭೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಿದ್ದು, ಅಂತಹವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ದಾವಣಗೆರೆ ಹೊರವಲಯದ ಬಸಾಪುರ ಗ್ರಾಮಸ್ಥರು ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ವ್ಯಾಪ್ತಿಯ 14ನೇ ವಾರ್ಡ್‌ನ ಬಸಾಪುರ ವಾಸಿ ವಿಶಾಲಮ್ಮ ಸೇರಿದಂತೆ ಗ್ರಾಮದ ಮಹಿಳೆಯರು, ಮುಖಂಡರು, ಪೊಲೀಸರು ಗಲಭೆ ಸೃಷ್ಟಿಸಿದವರನ್ನು ಬಿಟ್ಟು, ಅಮಾಯಕರ ಬಂಧಿಸುತ್ತಿದ್ದಾರೆ ಎಂದೂ ಬೇಸರ ವ್ಯಕ್ತಪಡಿಸಿದರು.ಮಗ ಉಮೇಶ ಹಾಗೂ ಆತನ ಸ್ನೇಹಿತ ಕೃಷ್ಣ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಟ್ಯಾಕ್ಸಿ ಡ್ರೈವರ್ ಆಗಿರುವ ಮಗ ಉಮೇಶ ಸೆ.19ರಂದು ಗಲಭೆ ನಡೆದ ವೇಳೆ ಮನೆಯಲ್ಲೇ ಇದ್ದ. ಸೆ.20ರಂದು ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಮೈಸೂರಿಗೆ ಟ್ಯಾಕ್ಸಿ ಬಾಡಿಗೆ ಇದ್ದ ಕಾರಣ, ಮಾಲೀಕರ ಬಳಿ ಹೋಗಿ ಕಾರು ತರಲು ಹೋಗಿದ್ದನು ಎಂದು ತಿಳಿಸಿದರು.
ದಾವಣಗೆರೆ ಬಿಟಿ ಪೆಟ್ರೋಲ್ ಬಂಕ್ ಬಳಿ ಅಶೋಕ ಟಾಕೀಸ್ ಹಿಂಭಾಗದಲ್ಲಿ ಉಮೇಶ ಹಾಗೂ ಆತನ ಸ್ನೇಹಿತ ಕೃಷ್ಣನನ್ನು ಪೊಲೀಸರು ತಡೆದು, ಸಹಿ ಮಾಡುವಂತೆ ಬಾ ಅಂತಾ ಕರೆದೊಯ್ದು ಬಂಧಿಸಿದ್ದಾರೆ. ನನ್ನ ಮಗ ಟ್ಯಾಕ್ಸಿ ಚಾಲನೆ ಮಾಡಿ, ದುಡಿದು ತಂದರಷ್ಟೇ ಕುಟುಂಬ ನಿರ್ವಹಣೆಯಾಗುತ್ತದೆ. ಇಲ್ಲದಿದ್ದರೆ ಕಷ್ಟ. ಉಮೇಶ, ಕೃಷ್ಣ ಇಬ್ಬರೂ ಅಮಾಯಕರಾಗಿದ್ದು, ತಕ್ಷಣವೇ ಬಂಧಮುಕ್ತಗೊಳಿಸಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದರು.ಬಂಧಿತ ಕೃಷ್ಣನ ಪಾಲಕರಾದ ಮಂಜುಳಾ, ಮಲ್ಲಿಕಾರ್ಜುನ ಮಾತನಾಡಿ, ಪೊಲೀಸರು ಸಿಕ್ಕ ಸಿಕ್ಕವರನ್ನಲ್ಲಾ ಹಿಡಿದುಕೊಂಡು ಹೋದರೆ, ತಪ್ಪನ್ನೇ ಮಾಡದ ಅಮಾಯಕರ ಕಥೆ ಏನಾಗಬೇಕು. ಈ ಬಗ್ಗೆ ಕನಿಷ್ಠ ಆಲೋಚನೆಯೂ ಇಲ್ಲವೇ ಇಲಾಖೆ ಕಾರ್ಯವೈಖರಿಯನ್ನು ಪ್ರಶ್ನಿಸಿದರು. ಕಲ್ಲು ತೂರಾಟ ಮಾಡಿ, ಗಲಭೆಗೆ ಕಾರಣರಾದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ. ಅಮಾಯಕರನ್ನು ಬಂಧಿಸಿ, ಕೇಸ್ ಮಾಡುವುದಲ್ಲ ಎಂದರು.
ಗ್ರಾಮಸ್ಥರಾದ ಮಂಜಮ್ಮ, ಮಲ್ಲೇಶ, ಬಸಮ್ಮ, ವಿಶಾಲ, ಅನುಸೂಯ, ಎಸ್.ಹನುಮಂತ, ಬಸಮ್ಮ, ರೇಣುಕಮ್ಮ, ಬಸಮ್ಮ, ಆರ್.ಸುಮ, ಜಯಮ್ಮ, ಮಂಜುಳ, ಹನುಮಕ್ಕ, ನಿಂಗಮ್ಮ, ಸುಶೀಲಮ್ಮ, ಎನ್.ಸಂತೋಷ, ರಂಗಮ್ಮ, ಮಂಜಮ್ಮ, ಎಚ್.ರಾಜಪ್ಪ, ಭಾಗ್ಯಮ್ಮ ಇತರರು ಇದ್ದರು.- - -
ಬಾಕ್ಸ್ * ಅಮಾಯಕ ಬಂಧಿತರೇ ಕುಟುಂಬಗಳಿಗೆ ಆಧಾರ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆಯ ಮಂಜು ನಾಯ್ಕ ಮಾತನಾಡಿ, ಕಲ್ಲು ತೂರಾಟ, ಗಲಭೆ ಪ್ರಕರಣ ಕಾನೂನು ಪ್ರಕಾರ ತನಿಖೆ ಮಾಡಿ, ಅಮಾಯಕರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಬಸಾಪುರದ ಉಮೇಶ, ಕೃಷ್ಣ ತಮ್ಮ ಕುಟುಂಬಗಳಿಗೆ ಆಧಾರವಾಗಿದ್ದಾರೆ. ಇವರ ಮೇಲೆ ಪೊಲೀಸರು 11 ವಿವಿಧ ಪ್ರಕರಣಗಳ ದಾಖಲಿಸಿದ್ದಾರೆ. ಈಗ ಇವರ ಬಡ ಪಾಲಕರಿಗೆ ಕಾನೂನು ಹೋರಾಟ ನಡೆಸುವ ಆರ್ಥಿಕ ಶಕ್ತಿಯೂ ಇಲ್ಲ. ಅಮಾಯಕರಾದ ಉಮೇಶ, ಕೃಷ್ಣನನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.- - - -26ಕೆಡಿವಿಜಿ1:
ದಾವಣಗೆರೆಯಲ್ಲಿ ಬಸಾಪುರ ಗ್ರಾಮಸ್ಥರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಧಿತ ಕೃಷ್ಣ, ಉಮೇಶ ಅವರನ್ನು ಬಿಡುಗಡೆಗೊಳಿಸಲು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.