ಉಮ್ಮಚಗಿಯ ಶ್ರೀಮಾತಾ ಸಂಘ ವಿವಿಧ ಸೇವೆಗೆ ಚಾಲನೆ: ಜಿ.ಎನ್. ಹೆಗಡೆ

| Published : Jun 03 2024, 12:31 AM IST

ಉಮ್ಮಚಗಿಯ ಶ್ರೀಮಾತಾ ಸಂಘ ವಿವಿಧ ಸೇವೆಗೆ ಚಾಲನೆ: ಜಿ.ಎನ್. ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿ.ಎನ್. ಹೆಗಡೆ ಅವರಂಥ ವ್ಯಕ್ತಿಗಳ ಪ್ರಯೋಗಶೀಲತೆ ಯಶಸ್ವಿಯಾಗುತ್ತಿದೆ ಎಂಬುದಕ್ಕೆ ಶ್ರೀಮಾತಾ ಸಂಸ್ಥೆಯೇ ಉತ್ತಮ ಉದಾಹರಣೆಯಾಗಿದೆ.

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯಾಲಯದ ಸಭಾಭವನದಲ್ಲಿ ಶಿರಸಿಯ ಅರಾ ಕನ್ಸಲ್ಟೆನ್ಸಿ ಸರ್ವಿಸ್ ಸಹಯೋಗದಲ್ಲಿ ಗ್ರಾಹಕರು ಮತ್ತು ಸಂಘದ ಸದಸ್ಯರಿಗಾಗಿ ಆರಂಭಿಸಿದ ವಿವಿಧ ಸೇವೆಗಳ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.

ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ ಮಾತನಾಡಿ, ಇಂದಿನ ಸವಾಲು ಮತ್ತು ಸ್ಪರ್ಧಾತ್ಮಕ ಸಂಕೀರ್ಣತೆಯ ಸನ್ನಿವೇಶದಲ್ಲಿ ಗ್ರಾಹಕರು ಬಯಸುವ ವಿವಿಧ ಬಗೆಯ ಸೇವಾ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ, ರಿಯಾಯತಿ ಶುಲ್ಕದೊಂದಿಗೆ ನೀಡುವ ನಮ್ಮ ಬಹುದಿನಗಳ ಕನಸು ಇಂದು ಸಾಕಾರಗೊಳ್ಳುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಮ್ಮಚಗಿಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ, ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಕೊರತೆಯಿಂದ ಸಂಘ-ಸಂಸ್ಥೆಗಳ ನಿರ್ವಹಣೆ ಇತ್ತೀಚೆಗೆ ಕಷ್ಟದಾಯಕವಾಗಿದೆ. ಈ ನಡುವೆ ಜಿ.ಎನ್. ಹೆಗಡೆ ಅವರಂಥ ವ್ಯಕ್ತಿಗಳ ಪ್ರಯೋಗಶೀಲತೆ ಯಶಸ್ವಿಯಾಗುತ್ತಿದೆ ಎಂಬುದಕ್ಕೆ ಶ್ರೀಮಾತಾ ಸಂಸ್ಥೆಯೇ ಉತ್ತಮ ಉದಾಹರಣೆಯಾಗಿದೆ ಎಂದರು.

ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಶೇರೂಗಾರ ಮಾತನಾಡಿ, ಶ್ರೀಮಾತಾ ಬ್ಯಾಂಕಿನ ವಿವಿಧ ಸೇವೆಗಳ ಉದ್ಘಾಟನೆ ಜನಸಾಮಾನ್ಯರಿಗೆ ಅತ್ಯಂತ ಉಪಯುಕ್ತವೆನಿಸಬಹುದಾಗಿದ್ದು, ಸಂಘದ ನಿರ್ಣಯ ಶ್ಲಾಘನೀಯ ಎಂದರು.

ಶಿರಸಿಯ ಶ್ರೀಮಾತಾ ಸೌ.ಸ. ಸಲಹಾ ಸಮಿತಿಯ ಅಧ್ಯಕ್ಷ ಕೆ.ವಿ. ಭಟ್ಟ ಮಾತನಾಡಿ, ಈ ಪ್ರದೇಶದಲ್ಲಿ ಬಹುತೇಕ ಜನಸಾಮಾನ್ಯರಾದಿಯಾಗಿ ಎಲ್ಲರೂ ಸಹಕಾರಿ ಸಂಸ್ಥೆಗಳನ್ನೇ ನೆಚ್ಚಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಆ ಸಂಘಗಳು ಗ್ರಾಹಕರ ನಂಬಿಕೆಯನ್ನು ಹುಸಿಗೊಳಿಸದೇ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಅರಾ ಕನ್ಸಲ್ಟೆನ್ಸಿಯ ಮಾಲೀಕ ಅರವಿಂದ ಹೆಗಡೆ, ಶ್ರೀಮಾತಾ ಸೌಹಾರ್ದ ಸಹಕಾರಿಯ ನಡುವಿನ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿ, ಯೋಜನೆಗಳ ಮಾಹಿತಿ ನೀಡುವ ಕರಪತ್ರ ಬಿಡುಗಡೆಗೊಳಿಸಿದರು. ಆನಂತರ ಮಾತನಾಡಿದ ಅವರು, ಇಲ್ಲಿ ಉದ್ಘಾಟನೆಗೊಂಡ ವಿವಿಧ ಸೇವೆಗಳು ಕೇವಲ ಹಣದಾಸೆಗಾಗಿ ನಿರ್ವಹಣೆಯಾಗದೇ ಸಾಮಾಜಿಕ ತುಡಿತವನ್ನೂ ಒಳಗೊಂಡಿದೆ. ಟ್ರಾವೆಲಿಂಗ್ ಮತ್ತು ಟೂರಿಸಂ ಸೇವೆಗಳು, ವಿಮಾ ಯೋಜನೆಯ ಸೇವೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಖ್ಯ ನಾಗರಿಕ ಸವಲತ್ತುಗಳಿಗೆ ಸಂಬಂಧಿಸಿದ ಸೇವೆಗಳು, ಅಟೋ ಕನ್ಸಲ್ಟೆನ್ಸಿ ಸೇವೆಗಳು ಮತ್ತು ಹೊರದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಅಗತ್ಯವಿರುವ ಸೇವೆಗಳು ಅತ್ಯಂತ ಸೂಕ್ತ ಸೇವಾ ಶುಲ್ಕ ಪಡೆದು ಒದಗಿಸುವುದಾಗಿ ವಿವರಿಸಿದರು.

ಶಿರಸಿ ಶಾಖೆಯ ವ್ಯವಸ್ಥಾಪಕಿ ಸುನೀತಾ ಭಟ್ಟ ಪ್ರಾರ್ಥಿಸಿದರು. ಉಪಾಧ್ಯಕ್ಷ ಎಸ್.ಎಸ್. ಭಟ್ಟ ಈರಾಪುರ ಸ್ವಾಗತಿಸಿದರು. ಗೌರವ ಸಲಹೆಗಾರ ಜಿ.ಕೆ. ಹೆಗಡೆ ಕನೇನಹಳ್ಳಿ ನಿರ್ವಹಿಸಿದರು. ಯಲ್ಲಾಪುರ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಕೆ.ಎಸ್. ಭಟ್ಟ ವಂದಿಸಿದರು.