ಸಾರಾಂಶ
ಮಹಿಳೆಯರನ್ನು ಮುಖ್ಯ ಫಲಾನುಭವಿಗಳನ್ನಾಗಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮನ್ ಯಾಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಮಹಿಳೆಯರನ್ನು ಮುಖ್ಯ ಫಲಾನುಭವಿಗಳನ್ನಾಗಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮನ್ ಯಾಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆ ತರುವಲ್ಲಿ ಈ ಯೋಜನೆಗಳ ಪಾತ್ರ ಮಹತ್ವದ್ದು ಎಂದು ಶ್ಲಾಘಿಸಿದ್ದಾರೆ.
ಫಿಲೆಮನ್ ಯಾಂಗ್ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅವರು ಪಂಚಗ್ಯಾರಂಟಿಗಳ ಕುರಿತು ಅಭಿನಂದನೆ ಸಲ್ಲಿಸಿದ್ದಾರೆ.
ಗ್ಯಾರಂಟಿ ಯೋಜನೆಗಳು ಮಹಿಳೆಯರ ಕೈಗೆ ಹಣ ನೀಡುತ್ತಿವೆ. ಜತೆಗೆ ಶಕ್ತಿ ಯೋಜನೆಯಡಿಯ ಉಚಿತ ಬಸ್ ಪ್ರಯಾಣ, ಹಸಿವು ಮತ್ತು ಅಪೌಷ್ಟಿಕತೆ ತಡೆಗಟ್ಟುವ ಅನ್ನಭಾಗ್ಯ, ಗೃಹಜ್ಯೋತಿ ಅಡಿ ಉಚಿತ ವಿದ್ಯುತ್ ಸೇರಿ ಎಲ್ಲಾ ಗ್ಯಾರಂಟಿ ಯೋಜನೆಗಳೂ ಮಹಿಳೆಯರಿಗೆ ಉಪಯುಕ್ತವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾಗಿ ಮುಖ್ಯಮಂತ್ರಿ ಕಚೇರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಉತ್ತೇಜಿಸಲು ಮಹಿಳಾ ಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಕ್ಕಾಗಿ ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಭಿನಂದಿಸಿದ ಯಾಂಗ್, ಭವಿಷ್ಯದ ವಿಶ್ವಸಂಸ್ಥೆಯ ಕಾರ್ಯಾಗಾರಗಳಲ್ಲಿ ಕರ್ನಾಟಕದ ಯಶಸ್ಸಿನ ಕುರಿತು ಮಾಹಿತಿ ಹಂಚಿಕೊಳ್ಳಲಾಗುವುದು. ಇದರಿಂದ ಇತರ ದೇಶಗಳೂ ಈ ಅತ್ಯುತ್ತಮ ಯೋಜನೆಗಳನ್ನು ಅಳವಡಿಸಿಕೊಳ್ಳಬಹುದೆಂದು ಅಭಿಪ್ರಾಯಪಟ್ಟಿದ್ದಾಗಿ ಹೇಳಲಾಗಿದೆ.
ಒಟ್ಟು ಇಂಧನ ಉತ್ಪಾದನೆಯಲ್ಲಿ ಶೇ.40ರಷ್ಟು ಪಾಲನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುವ ಮೂಲಕ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ರಾಜ್ಯವು ದೇಶದಲ್ಲೇ ಅಗ್ರ ಸ್ಥಾನದಲ್ಲಿದೆ. ಅದೇ ರೀತಿ ಮಾಹಿತಿ ತಂತ್ರಜ್ಞಾನ, ತಂತ್ರಾಂಶ ಅಭಿವೃದ್ಧಿ, ಕೃತಕ ಬುದ್ಧಿ ಮತ್ತೆ (AI), ಸಂಶೋಧನೆ ಮತ್ತು ನಾವೀನ್ಯತೆಗಾಗಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆ ವಿಷಯದಲ್ಲೂ ಕರ್ನಾಟಕ ಸಾಧಿಸಿರುವ ಪ್ರಗತಿಯನ್ನು ಯಾಂಗ್ ಪ್ರಶಂಸಿಸಿದರು.
ಫಿಲೆಮನ್ ಯಾಂಗ್ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸ್ವಸಹಾಯ ಗುಂಪಿನ ಮಹಿಳೆಯರು ರೇಷ್ಮೆ ಗೂಡುಗಳಿಂದ ತಯಾರಿಸಿದ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.