ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ, ಕೃಷಿಕರ ಪ್ರತಿಭಟನೆ

| Published : Jul 11 2025, 12:32 AM IST

ಸಾರಾಂಶ

ಉಮೇಶಪ್ಪ ಹವಳಪ್ಪ ತಳವಾರ(49) ಆತ್ಮಹತ್ಯೆಗೆ ಶರಣಾದ ರೈತ.

ರಾಣಿಬೆನ್ನೂರು: ಸಾಲಬಾಧೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.ಉಮೇಶಪ್ಪ ಹವಳಪ್ಪ ತಳವಾರ(49) ಆತ್ಮಹತ್ಯೆಗೆ ಶರಣಾದ ರೈತ. ಮೃತ ಉಮೇಶಪ್ಪ ಹಾಗೂ ಸಹೋದರರ ಹೆಸರಿನಲ್ಲಿ 1.12 ಎಕರೆ ಜಮೀನಿದ್ದು, ಅದರಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಕೃಷಿಗಾಗಿ ಖಾಸಗಿ ಫೈನಾನ್ಸ್ ಹಾಗೂ ಕೈಗಡವಾಗಿ ₹6 ಲಕ್ಷ ಸಾಲ ಮಾಡಿದ್ದರು. ಬೆಳೆ ಸರಿಯಾಗಿ ಬಾರದೇ ಮನನೊಂದು ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹಲಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.ರೈತರ ಪ್ರತಿಭಟನೆ: ಪ್ರಕೃತಿವಿಕೋಪ ಹಾಗೂ ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾಗಿದೆ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ನಗರದ ಸರ್ಕಾರಿ ಆಸ್ಪತ್ರೆಯ ಶವಗಾರದ ಎದುರು ಪ್ರತಿಭಟನೆ ನಡೆಸಿ ಮಾತನಾಡಿ, ಕೃಷಿ ಸಾಲಮನ್ನಾ ಯೋಜನೆಯ ಕನಸು ನನಸಾಗದೆ ಉಳಿದಿದ್ದರಿಂದ ದೇಶದಲ್ಲಿ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಜರುಗುತ್ತಿದ್ದು, ಇದರ ಮಧ್ಯೆ ರೈತರ ಬದುಕಿಗೆ ಮುಳ್ಳುಸಜ್ಜೆ ಮಾರಕವಾಗುತ್ತಿದೆ. ಕೂಡಲೇ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಕೃಷಿ ತಜ್ಞರು ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದರು. ಚಂದ್ರಣ್ಣ ಬೇಡರ, ನಾಗಪ್ಪ ಸಣ್ಮನಿ, ಕರಬಸಪ್ಪ ಕೂಲಾರ, ಪರಮೇಶಪ್ಪ ತಳವಾರ, ಬ್ಯಾಡಗಿ ಶಾಸಕರ ಆಪ್ತ ಸಹಾಯಕ ಮಂಜುನಾಥ ಹೂಗಾರ, ಗುರುರಾಜ ಕೊಂಡಜ್ಜಿ, ರಾಮಪ್ಪ ಬೆನ್ನೂರು, ಹನುಮಂತಪ್ಪ ಹೊಸಳ್ಳಿ, ಬಸವಂತಪ್ಪ ಬೆನ್ನೂರು, ಹನುಮಂತಪ್ಪ ಬೆನ್ನೂರು, ರಾಮಪ್ಪ ಓಲೇಕಾರ ಮುಂತಾದವರು ಭಾಗವಹಿಸಿದ್ದರು.ಹರಿದುಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಕುರಿಗಾಹಿ ಸಾವು

ಹಾವೇರಿ: ಅಡವಿಯಲ್ಲಿ ಹರಿದುಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಕುರಿಗಾಹಿಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಬುಧವಾರ ತಾಲೂಕಿನ ನೆಗಳೂರ ಗ್ರಾಮದಲ್ಲಿ ನಡೆದಿದೆ.ಸವಣೂರು ತಾಲೂಕು ಕುರುಬರಮಲ್ಲೂರ ಗ್ರಾಮದ(ಹಾಲಿವಸ್ತಿ ನೆಗಳೂರು) ನಿವಾಸಿ ಫಕ್ಕಿರೇಶ ತಿಪ್ಪಣ್ಣ ಜಕ್ಕಣ್ಣನವರ(42) ಮೃತ ಕುರಿಗಾಹಿ.

ಇವರು ಕುರಿ ಕಾಯುತ್ತಾ ನೆಗಳೂರ ಗ್ರಾಮದಲ್ಲಿ ವಾಸವಿದ್ದು, ಕುರಿಗಳಿಗೆ ಹುಲ್ಲು ತರಲೆಂದು ಹೋದಾಗ ಹರಿದುಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಸಾವಿಗೀಡಾಗಿದ್ದಾರೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.