ಸಿಗದ ವೈದ್ಯರು; ರೋಗಿಗಳ ನಿತ್ಯ ಪರದಾಟ!

| Published : Sep 21 2024, 02:06 AM IST

ಸಾರಾಂಶ

ವೈದ್ಯರು ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ಸಂಬಳ ಪಡೆದುಕೊಂಡು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣಕ್ಕೆ ರೋಗಿಗಳು ಪರದಾಟ ಅನುಭವಿಸುತ್ತಿದ್ದಾರೆ. ಹೀಗಾಗಿ ಲೋಕಾಪುರ ಸರ್ಕಾರಿ ಆಸ್ಪತ್ರೆ ಹೆಸರಿಗಷ್ಟೇ ಆಸ್ಪತ್ರೆ ಎನ್ನುವಂತಾಗಿದೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ವೈದ್ಯರು ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ಸಂಬಳ ಪಡೆದುಕೊಂಡು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣಕ್ಕೆ ರೋಗಿಗಳು ಪರದಾಟ ಅನುಭವಿಸುತ್ತಿದ್ದಾರೆ. ಹೀಗಾಗಿ ಲೋಕಾಪುರ ಸರ್ಕಾರಿ ಆಸ್ಪತ್ರೆ ಹೆಸರಿಗಷ್ಟೇ ಆಸ್ಪತ್ರೆ ಎನ್ನುವಂತಾಗಿದೆ.

ಹೆಸರಿಗೆ ಮಾತ್ರ ಆಸ್ಪತ್ರೆ ಸ್ಥಾಪಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ವೈದ್ಯರು ಇಲ್ಲದೇ ಪಟ್ಟಣದ ಸಾರ್ವಜನಿಕರು ಸುತ್ತಮುತ್ತಲಿನ ಗ್ರಾಮಸ್ಥರು ಅದರಲ್ಲಿಯೂ ಬಡವರು ಎಲ್ಲಿ ಚಿಕಿತ್ಸೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬ ಆಲೋಚನೆಯಲ್ಲಿದ್ದಾರೆ. ಹೀಗಾಗಿ ಜನರು ಅನಾರೋಗ್ಯಕ್ಕೆ ತುತ್ತಾದರೆ ಖಾಸಗಿ ಆಸ್ಪತ್ರೆ ಇಲ್ಲವೇ ದೂರದ ಊರುಗಳ ಕಡೆ ಮುಖ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ.

ಅನಾಥ ಪ್ರಜ್ಞೆ:

ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸರ್ಕಾರ ಆಸ್ಪತ್ರೆ ನಿರ್ಮಿಸಿದೆ. ಆಸ್ಪತ್ರೆಗೆ ಬೇಕಾದ ಸೌಲಭ್ಯ ಸಿಬ್ಬಂದಿ ಒದಗಿಸಿ ವೈದ್ಯರ ನೇಮಕ ಮಾಡಿದೆ. ಅದೆಕೋ ಗೊತ್ತಿಲ್ಲ ಅನಾಥ ಪ್ರಜ್ಞೆ ಕಾಡತೊಡಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಸಿಬ್ಬಂದಿ ಇರುವುದೇ ಅಪರೂಪ ಎನ್ನುವಂತಾಗಿದೆ. ಕಾಯಿಲೆಗೆ ಒಳಗಾದ ರೋಗಿಗಳ ಆರೋಗ್ಯ ತಪಾಸಣೆ ಪ್ರಥಮ ಚಿಕಿತ್ಸೆ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಮೇಲ್ದರ್ಜೆ ಆಸ್ಪತ್ರೆಗೆ ಕಳಿಸುವುದು ಸೇರಿದಂತೆ ಹಲವಾರು ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಕಾರ್ಯವೇ ಸ್ಥಗಿತವಾದಂತೆ ಭಾಸವಾಗುತ್ತಿದೆ.ಹಿರಿಯ ವೈದ್ಯರು ಸರಿಯಾಗಿ ಬರದೇ ಇರುವುದರಿಂದ ಸಹಾಯಕ ಸಿಬ್ಬಂದಿ ಕೂಡ ಕರ್ತವ್ಯ ಪ್ರಜ್ಞೆ ಮರೆತು ಬಿಟ್ಟಿದ್ದಾರೆ ಎಂದು ಸಾರ್ವಜನಿಕರೇ ಆರೋಪಿಸುತ್ತಿದ್ದಾರೆ. ಆದಷ್ಟೂ ಬೇಗ ಸಂಬಂಧಿಸಿದ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ರಜೆ, ಗೊತ್ತಿಲ್ಲ ಎಂಬ ಉತ್ತರ:

ಆರೋಗ್ಯ ತಪಾಸಣೆಗೆಂದು ಹೋದ ರೋಗಿಯು ಯಾವ ಸಿಬ್ಬಂದಿಯೂ ಕಾಣದಿದ್ದಾಗ ವೈದ್ಯರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಒಂದು ವೇಳೆ ಕರೆ ಸ್ವೀಕರಿಸಿದರೆ ನಾನು ರಜೆಯಲ್ಲಿದ್ದೇನೆ ಎಂದು ಹೇಳುವುದು ಮಾಮೂಲಾಗಿದೆ. ಸಿಬ್ಬಂದಿ ವಿಚಾರಿಸಿದರೆ ನಮಗೆ ಗೊತ್ತಿಲ್ಲ, ವೈದ್ಯರು ಬಂದ ಮೇಲೆ ಬನ್ನಿ ಎಂದು ರೋಗಿಗಳನ್ನು ಸಾಗಹಾಕುತ್ತಿದ್ದಾರೆ.

ಪ್ರತಿಯೊಬ್ಬ ನಾಗರಿಕನಿಗೂ ಆರೋಗ್ಯ ಭಾಗ್ಯ ದೊರೆಯಬೇಕೆಂಬ ಉದ್ದೇಶದಿಂದ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಪ್ರತಿವರ್ಷ ಕೋಟ್ಯಂತರ ರುಪಾಯಿ ಮೀಸಲಿಡುತ್ತಿದೆ. ಆದರೆ, ಆರೋಗ್ಯ ಇಲಾಖೆಯ ವೈದ್ಯರು ಮಾತ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಕಾರ್ಯನಿರ್ವಹಣೆ ಮಾಡದೇ ಇರುವ ಕಾರಣಕ್ಕೆ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೆಲವು ಸಾರಿ ಬೇರೆ ದಾರಿ ಇಲ್ಲದೇ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿ ಹೆಚ್ಚು ದುಡ್ಡು ಕೊಟ್ಟು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಲೋಕಾಪುರ ಸರ್ಕಾರಿ ಆಸ್ಪತ್ರೆ ಕಡೆಗೆ ಗಮನ ಹರಿಸಿ ಆಸ್ಪತ್ರೆಗೆ ಸರ್ಜರಿ ಮಾಡಬೇಕಿದೆ.

---------

ಕೋಟ್‌.....

ನಮ್ಮ ಪಟ್ಟಣದ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ವೈದ್ಯರು, ಸಿಬ್ಬಂದಿ ಇರುವುದಿಲ್ಲ. ಯಾವುವಾದರೂ ರೋಗಕ್ಕೆ ಚಿಕಿತ್ಸೆ ದೊರೆಯುತ್ತದೆ ಎನ್ನುವ ನಂಬಿಕೆ ಹೊರಟು ಹೋಗಿದೆ. ತಪಾಸಣೆಗೆಂದು ಹೋದ ರೋಗಿಗಳಿಗೆ ಚಿಕಿತ್ಸೆ ದೊರೆಯದೇ ಮತ್ತೆ ರೋಗಕ್ಕೆ ತುತ್ತಾಗುವ ಪರಿಸ್ಥಿತಿ ಬಂದಿದೆ. ಯಾರು ಯಾವಾಗ ಬರ್ತಾರೋ, ಯಾವಾಗ ಹೋಗ್ತಾರೋ ಅನ್ನೋದೇ ತಿಳಿಯದಾಗಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಲು ಮೇಲಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

-ಅನೀಲ ಹಂಚಾಟೆ, ಸ್ಥಳೀಯ

---

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರು ನೇಮಿಸಿಲ್ಲ. ಒಂದು ವಾರದೊಳಗೆ ಕೌನ್ಸೆಲಿಂಗ್‌ ಆಗುತ್ತವೆ. ಆದ ನಂತರ ಗುತ್ತಿಗೆ ಆಧಾರದಲ್ಲಾದರೂ ವೈದ್ಯರನ್ನು ನೇಮಿಸಲು ಕ್ರಮಕೈಗೊಳ್ಳಲಾಗುವುದು.

-ಡಾ.ಸುವರ್ಣಾ ಕುಲಕರ್ಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು