ಚಿಕ್ಕಂದಿನಿಂದಲೂ ಗರಡಿ ಮನೆಯಲ್ಲಿ ತರಬೇತಿ ಪಡೆದ ಅಪ್ಪಟ ಹುಬ್ಬಳ್ಳಿಯ ಯುವಕನೊಬ್ಬ ಈಚೆಗೆ ಥಾಯ್ಲೆಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನದೊಂದಿಗೆ ವಿಕ್ರಮ್‌ ಚಿಲ್ಲಣ್ಣವರ ಬೆಳ್ಳಿ ಪದಕಕ್ಕೆ ಭಾಜನನಾಗಿದ್ದಾನೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಚಿಕ್ಕಂದಿನಿಂದಲೂ ಗರಡಿ ಮನೆಯಲ್ಲಿ ತರಬೇತಿ ಪಡೆದ ಅಪ್ಪಟ ಹುಬ್ಬಳ್ಳಿಯ ಯುವಕನೊಬ್ಬ ಈಚೆಗೆ ಥಾಯ್ಲೆಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕಕ್ಕೆ ಭಾಜನನಾಗಿದ್ದಾನೆ.

ಇಲ್ಲಿಯ ಉಣಕಲ್ಲನ ವಿಕ್ರಮ್‌ ಚಿಲ್ಲಣ್ಣವರ ಈ ಸಾಧನೆಗೆ ಪಾತ್ರನಾಗಿರುವ ಗ್ರಾಮೀಣ ಪ್ರತಿಭೆ. ಮಿಷನ್ ಒಲಿಂಪಿಕ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ಕಳೆದ ಅ. 23ರಂದು ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ 25ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು. ಇದರಲ್ಲಿ 19ರ ವಯೋಮಾನದ 61 ಕೆಜಿ ವಿಭಾಗದಲ್ಲಿ 10ಕ್ಕೂ ಹೆಚ್ಚು ಕುಸ್ತಿಪಟುಗಳನ್ನು ಮಣಿಸಿದ ವಿಕ್ರಮ್, ದ್ವಿತೀಯ ಸ್ಥಾನದೊಂದಿಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಜ. 16ರಂದು ಥಾಯ್ಲೆಂಡಿನಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ನಾಲ್ಕು ದೇಶಗಳ ಕುಸ್ತಿ ಪಟುಗಳಲ್ಲಿ ಮೂವರು ಪ್ರತಿಸ್ಪರ್ಧಿಗಳನ್ನು ಸೋಲಿಸಿ, ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ನಾಲ್ಕು ತಲೆಮಾರುಗಳಿಂದ ಕುಸ್ತಿ:

ಇವರದ್ದು ಕಳೆದ ನಾಲ್ಕು ತಲೆಮಾರುಗಳಿಂದ ಕುಸ್ತಿ ಪಟುಗಳ ಕುಟುಂಬ. ಇವರ ಮುತ್ತಜ್ಜ ಯಲ್ಲಪ್ಪ ವೆಂಕಪ್ಪ ಚಿಲ್ಲಣ್ಣವರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಖ್ಯಾತ ಕುಸ್ತಿಪಟುವಾಗಿದ್ದರು. ಜತೆಗೆ ವಿಕ್ರಮ್ ಅವರ ಚಿಕ್ಕಪ್ಪ ಅಶೋಕ ಚಿಲ್ಲಣ್ಣವರ ಹಾಗೂ ಅವರ ಇಬ್ಬರು ಪುತ್ರಿಯರು ದೆಹಲಿಯಲ್ಲಿ ಕುಸ್ತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದಲ್ಲದೇ ಇವರ ಕುಟುಂಬದ ಎಲ್ಲ ಸಹೋದರರ ಮಕ್ಕಳು ಬೇರೆ ಬೇರೆಡೆ ಕುಸ್ತಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪ್ರಸ್ತುತ ಈ ಕುಟುಂಬದಲ್ಲಿ 6 ಜನ ಕುಸ್ತಿಪಟುಗಳಿದ್ದಾರೆ.

ಗರಡಿ ಮನೆಯಲ್ಲಿಯೇ ತರಬೇತಿ:

ಮೊದಲು ಹಳ್ಳಿಯಾಗಿದ್ದ ಉಣಕಲ್‌ ಇದೀಗ ಮಹಾನಗರ ವ್ಯಾಪ್ತಿಯಲ್ಲೇ ಇದೆ. ಇಲ್ಲಿನ ಪ್ರದೇಶ ಗರಡಿ ಮನೆಗಳಿಗೆ ಪ್ರಸಿದ್ಧಿ. ವಿಕ್ರಮ್‌ 5 ವರ್ಷದವನಿದ್ದಾಗಲೇ ಕಲ್ಮೇಶ್ವರ ಗರಡಿ ಮನೆಯಲ್ಲಿ ತಾಲೀಮು ಮಾಡಿಕೊಂಡು ಬಂದವನು. ಕುಸ್ತಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದನ್ನು ಅರಿತ ಅವರ ತಂದೆ ಮಂಜುನಾಥ ಅವರು ಮಗನಿಗೆ ಸ್ವತಃ ಕುಸ್ತಿ ತರಬೇತಿ ನೀಡಿದ್ದಾರೆ. ಜತೆಗೆ ಗ್ರಾಮದ ವಾಯುಪುತ್ರ ಸ್ಪೋರ್ಟ್ಸ್ ಫೌಂಡೇಶನ್‌ನಲ್ಲೂ ತರಬೇತಿ ನೀಡಿದ್ದಾರೆ. ಇದಾದ ಬಳಿಕ ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಪ್ರಶಸ್ತಿ ಪಡೆದಿದ್ದಾನೆ. 2 ವರ್ಷಗಳಿಂದ ಪುಣೆಯ ಸಂಹ್ಯಾದ್ರಿ ಕುಸ್ತಿ ಸಂಕುಲದಲ್ಲಿ ವಿಕ್ರಮ್‌ಗೆ ಕುಸ್ತಿ ತರಬೇತಿ ನೀಡಲಾಗುತ್ತಿದೆ.ನನ್ನ ಸಾಧನೆಗೆ ಕುಟುಂಬದವರ ಸಹಕಾರವೇ ಕಾರಣ. ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಸ್ಪರ್ಧಿಸಿರುವುದು ತುಂಬಾ ಸಂತಸ, ಹುಮ್ಮಸ್ಸು ತಂದಿದೆ. ಮುಂದೆಯೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಇಚ್ಛೆ ಹೊಂದಿರುವೆ. ಒಲಿಂಪಿಕ್‌ನಲ್ಲಿ ಸ್ಪರ್ಧಿಸುವ ಇಚ್ಛೆಯಿದೆ.

ವಿಕ್ರಮ್ ಚಿಲ್ಲಣ್ಣವರ, ಅಂತಾರಾಷ್ಟ್ರೀಯ ಕುಸ್ತಿಪಟುಮಗನ ಸಾಧನೆ ನೋಡಿದರೆ ಹರ್ಷವೆನಿಸುತ್ತಿದೆ. ಗರಡಿ ಮನೆಯಲ್ಲಿ ಅಭ್ಯಾಸ ಮಾಡಿ ದೊಡ್ಡ ಮಟ್ಟದಲ್ಲಿ ಸಾಧನೆ ತೋರಿರುವುದು ನಿಜಕ್ಕೂ ಮಾದರಿ. ವಿಕ್ರಮ್‌ಗೆ ಚಿಕ್ಕಂದಿನಿಂದಲೂ ಕುಸ್ತಿಯಲ್ಲೇ ಆಸಕ್ತಿ ಇತ್ತು. ಅದನ್ನು ಗಮನಿಸಿ ಸೂಕ್ತ ತರಬೇತಿ ನೀಡಿದ್ದೇವೆ. ಈ ಯಶಸ್ಸಿಗೆ ಅವನ ಕಠಿಣ ಪರಿಶ್ರಮವೇ ಕಾರಣ.

ಮಂಜುನಾಥ ಚಿಲ್ಲಣ್ಣವರ, ಕುಸ್ತಿಪಟು ವಿಕ್ರಮ್‌ ತಂದೆ