ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಜಿಲ್ಲಾ ವಕೀಲರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಒಮ್ಮತದಿಂದ ಹಕ್ಕೊತ್ತಾಯಿಸಿಸಲಾಗಿದೆ. ನೆರೆಹೊರೆಯ ಜಿಲ್ಲೆ ಹಾಗೂ ತಾಲೂಕುಗಳ ವಕೀಲರ ಸಂಘದ ಪ್ರತಿಧಿಗಳು, ವಕೀಲರು ಸಹ ಪಾಲ್ಗೊಳ್ಳುವ ಮೂಲಕ ಹೈಕೋರ್ಟ್ ಪೀಠದ ಕೂಗಿಗೆ ಶಕ್ತಿ ತುಂಬಿದ್ದಾರೆ.

- ವಕೀಲರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನೆರೆ ಜಿಲ್ಲೆಗಳ ವಕೀಲರು ಭಾಗಿ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಜಿಲ್ಲಾ ವಕೀಲರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಒಮ್ಮತದಿಂದ ಹಕ್ಕೊತ್ತಾಯಿಸಿಸಲಾಗಿದೆ. ನೆರೆಹೊರೆಯ ಜಿಲ್ಲೆ ಹಾಗೂ ತಾಲೂಕುಗಳ ವಕೀಲರ ಸಂಘದ ಪ್ರತಿಧಿಗಳು, ವಕೀಲರು ಸಹ ಪಾಲ್ಗೊಳ್ಳುವ ಮೂಲಕ ಹೈಕೋರ್ಟ್ ಪೀಠದ ಕೂಗಿಗೆ ಶಕ್ತಿ ತುಂಬಿದರು.

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಜಿಲ್ಲಾ ವಕೀಲರ ಸಂಘದ ಸಭಾ ಭ‍ವನದಲ್ಲಿ ಸೋಮವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೈ ಕೋರ್ಟ್ ಪೀಠ ಸ್ಥಾಪಿಸಬೇಕೆಂಬ ಒಕ್ಕೊರಲಿನ ಕೂಗು ಕೇಳಿಬಂದಿತಲ್ಲದೇ, ಈ ಬಗ್ಗೆ ಸಂಘದಿಂದ ಹಕ್ಕೊತ್ತಾಯಿಸಲಾಯಿತು.

ಸಂಘದ ಪದಾಧಿಕಾರಿಗಳು ಮಾತನಾಡಿ, ಹಿರಿಯ ವಕೀಲರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹೈಕೋರ್ಟ್ ಪೀಠ ರಚನೆ ಕುರಿತಂತೆ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿ ರಚಿಸಿ, ಅಧಿಸೂಚನೆ ಹೊರಡಿಸಿದ್ದಾರೆ. ಈ ಕಾರಣಕ್ಕೆ ನಾಡಿನ ಕೇಂದ್ರ ಬಿಂದುವಾದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂಬ ಒತ್ತಾಯ ನಮ್ಮದು ಎಂದರು.

ಹೈಕೋರ್ಟ್ ಪೀಠ ಸ್ಥಾಪನೆಗೆ ಭೌಗೋಳಿಕವಾಗಿ ನಾಡಿನ ಕೇಂದ್ರ ಸ್ಥಾನದಲ್ಲಿ ದಾವಣಗೆರೆ ಇದೆ. ಈ ಜಿಲ್ಲೆಗೆ ಹೊಂದಿಕೊಂಡಂತೆ ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ವಿಜಯ ನಗರ, ಹಾವೇರಿ, ಗದಗ ಜಿಲ್ಲೆಗಳ ಕಕ್ಷಿದಾರರು, ವಕೀಲರಿಗೆ ಹಾಗೂ ಬೆಂಗಳೂರು- ಧಾರವಾಡದಿಂದ ಬರುವಂತಹ ನ್ಯಾಯಮೂರ್ತಿಗಳಿಗೆ ಸಂಚಾರ ದೃಷ್ಟಿಯಿಂದಲೂ ಈ ಊರು ಅತ್ಯುತ್ತಮವಾಗಿದೆ ಎಂದು ವಿವರಿಸಿದರು.

ಅಲ್ಲದೇ, ಈಗಾಗಲೇ ಜಿಲ್ಲಾ ಕೇಂದ್ರದ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಹೊಸ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಿದೆ. ಅದೇ ಕಟ್ಟಡವನ್ನು ಹೈಕೋರ್ಟ್ ಪೀಠ ಸ್ಥಾಪಿಸಿ, ಬಳಸಿಕೊಳ್ಳಬಹುದು. ಹೈಕೋರ್ಟ್ ಪೀಠ ಸ್ಥಾಪಿಸಲು ಸರ್ಕಾರಕ್ಕೆ ಹೊಸದಾಗಿ ಜಮೀನು ಸ್ವಾಧೀನಪಡಿಸಿಕೊಂಡು, ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತಹ ಯಾವುದೇ ಹೊರತೆಯಾಗಲೀ, ಸಮಸ್ಯೆಯಾಗಲೀ ಉದ್ಭವಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಸರ್ಕಾರಕ್ಕೆ ಆರ್ಥಿಕ ಹೊರೆಯ ಭಾರವೂ ತಪ್ಪಲಿದೆ. ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಲು ಜಿಲ್ಲೆಯ ಇಬ್ಬರೂ ಮಂತ್ರಿಗಳು, ಸಂಸದರು, ಹಾಲಿ-ಮಾಜಿ ಸಚಿವರು, ಹಾಲಿ-ಮಾಜಿ ಶಾಸಕರು, ನೆರೆ ಹೊರೆಯ ಜಿಲ್ಲೆಗಳ ಜನಪ್ರತಿನಿಧಿಗಳು, ಅಲ್ಲಿನ ಜಿಲ್ಲಾ ಮತ್ತು ತಾಲೂಕು ವಕೀಲರ ಸಂಘಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಕಾನೂನು ಕಾಲೇಜು, ಛೇಂಬರ್ ಆಫ್ ಕಾಮರ್ಸ್ ಸೇರಿದಂತೆ ಎಲ್ಲರ ಸಹಕಾರ ಪಡೆದು, ಹೋರಾಟ ನಡೆಸಬೇಕೆಂಬ ಸಲಹೆಗೆ ಒಕ್ಕೊರಲಿನಂದ ಸಮ್ಮತಿ ವ್ಯಕ್ತವಾಯಿತು.

ಸಭೆ ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ಕೆ.ಜಿ.ಕೆ. ಸ್ವಾಮಿ ಮಾತನಾಡಿ, ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಿರಂತರವಾಗಿ ಹಂತ ಹಂತವಾಗಿ ಹೋರಾಟ ನಡೆಸಲು ಅ.6ರಂದು ಮಧ್ಯಾಹ್ನ 12.30ಕ್ಕೆ ಹಿರಿಯ ವಕೀಲರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು. ಸರ್ಕಾರದ ಮೇಲೆ ಒತ್ತಡ ಹೇರಲು ನಾಳೆ ರಚನೆಯಾಗುವ ಸಮಿತಿಯೊಂದಿಗೆ ನಮ್ಮ ಹೋರಾಟಕ್ಕೆ ವಿದ್ಯುಕ್ತ ಚಾಲನೆ ನೀಡಿದಂತಾಗಲಿದೆ. ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಜನಪ್ರತಿನಿಧಿಗಳೂ ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಬೇರಬೇಕು ಎಂದು ಮನವಿ ಮಾಡಿದರು.

ವಕೀಲರಾದ ದಸ್ತಗೀರ್, ವೆಂಕಟೇಶ, ಬಸವರಾಜ ಉಚ್ಚಂಗಿದುರ್ಗ, ಲಕ್ಕಪ್ಪ, ದೀಕ್ಷಿತ್, ರಜ್ವಿ ಖಾನ್, ಎಸ್.ಬಸವರಾಜ, ಅನಿತಾ, ಎಲ್.ಎಚ್.ಅರುಣಕುಮಾರ, ಲೋಕಿಕೆರೆ ಸಿದ್ದಪ್ಪ, ಶಿವಲಿಂಗಪ್ಪ, ಹರಿಹರ ವಕೀಲರ ಸಂಘದ ಅಧ್ಯಕ್ಷ ಗಣೇಶ ದುರ್ಗದ್, ಜಗಳೂರು ವಕೀಲರ ಸಂಘದ ಬಸವರಾಜ, ತಿಪ್ಪೇಶ್ ರಾಥೋಡ್, ಎನ್.ಎಂ.ಆಂಜನೇಯ ಗುರೂಜಿ, ಬಿ.ಎಂ.ಹನುಮಂತಪ್ಪ, ಅನೀಸ್ ಪಾಷ, ಸೈಯದ್ ಖಾದರ್, ಎ.ಎಂ.ಹೆಗಡೆ, ಎನ್.ಶಿವಲಿಂಗಪ್ಪ, ಶ್ರೀನಿವಾಸ, ಕುಮಾರಸ್ವಾಮಿ, ಮಂಜುಳಮ್ಮ ಇದ್ದರು.

- - -

(ಫೋಟೋ ಇದೆ.)