ಸಾರಾಂಶ
ರಾಜ್ಯಾದ್ಯಂತ ಇರುವ ಸುಮಾರು 432 ಸರ್ಕಾರಿ ಪದವಿ ಕಾಲೇಜುಗಳು ಕಳೆದ 22 ದಿನಗಳಿಂದ ಅಘೋಷಿತ ರಜೆಯಲ್ಲಿವೆ. ಉಪನ್ಯಾಸಕರು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ನಿತ್ಯವೂ ಕಾಲೇಜಿಗೆ ಬಂದು, ಹರಟೆ ಹೊಡೆದು ಮನೆಗೆ ವಾಪಸಾಗುವಂತಾಗಿದೆ. ಇನ್ನೇನು ತಿಂಗಳು ಕಳೆದರೆ ಪರೀಕ್ಷೆ ಇರುವ ಹೊತ್ತಲ್ಲಿ ಪದವಿ ಕಾಲೇಜು ತರಗತಿ ನಡೆಯದೇ ಇರುವುದರಿಂದ ವಿದ್ಯಾರ್ಥಿಗಳು ಆಂತಕಗೊಂಡಿದ್ದಾರೆ. ರಾಜ್ಯದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ 11,500 ಅತಿಥಿ ಉಪನ್ಯಾಸಕರು ಪಾಠ ಮಾಡುವ ಬದಲು ತಮ್ಮ ಸೇವಾ ಕಾಯಮಾತಿಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ನವೆಂಬರ್ 23ರಿಂದ ನಿರಂತರವಾಗಿ ಧರಣಿ ಪ್ರಾರಂಭಿಸಿದ್ದಾರೆ. 22 ದಿನಕ್ಕೆ ಹೋರಾಟ ಕಾಲಿಟ್ಟಿದೆ.
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳರಾಜ್ಯಾದ್ಯಂತ ಇರುವ ಸುಮಾರು 432 ಸರ್ಕಾರಿ ಪದವಿ ಕಾಲೇಜುಗಳು ಕಳೆದ 22 ದಿನಗಳಿಂದ ಅಘೋಷಿತ ರಜೆಯಲ್ಲಿವೆ.
ಉಪನ್ಯಾಸಕರು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ನಿತ್ಯವೂ ಕಾಲೇಜಿಗೆ ಬಂದು, ಹರಟೆ ಹೊಡೆದು ಮನೆಗೆ ವಾಪಸಾಗುವಂತಾಗಿದೆ. ಇನ್ನೇನು ತಿಂಗಳು ಕಳೆದರೆ ಪರೀಕ್ಷೆ ಇರುವ ಹೊತ್ತಲ್ಲಿ ಪದವಿ ಕಾಲೇಜು ತರಗತಿ ನಡೆಯದೇ ಇರುವುದರಿಂದ ವಿದ್ಯಾರ್ಥಿಗಳು ಆಂತಕಗೊಂಡಿದ್ದಾರೆ.ರಾಜ್ಯದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ 11,500 ಅತಿಥಿ ಉಪನ್ಯಾಸಕರು ಪಾಠ ಮಾಡುವ ಬದಲು ತಮ್ಮ ಸೇವಾ ಕಾಯಮಾತಿಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ನವೆಂಬರ್ 23ರಿಂದ ನಿರಂತರವಾಗಿ ಧರಣಿ ಪ್ರಾರಂಭಿಸಿದ್ದಾರೆ. 22 ದಿನಕ್ಕೆ ಹೋರಾಟ ಕಾಲಿಟ್ಟಿದೆ.ಅತಿಥಿ ಉಪನ್ಯಾಸಕರೇ ಗತಿ:ಸರ್ಕಾರಿ ಪದವಿ ಕಾಲೇಜುಗಳು ಶೇ.90ರಷ್ಟು ಅತಿಥಿ ಉಪನ್ಯಾಸಕರ ಮೇಲೆಯೇ ನಿಂತಿವೆ. ಬಹುತೇಕ ಪದವಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರು ಇರುವುದು ಕೇವಲ ನಾಲ್ಕಾರು ಮಾತ್ರ. ಹೀಗಾಗಿ, ಸರ್ಕಾರಿ ಪದವಿ ಕಾಲೇಜುಗಳು ನಿಂತಿರುವುದೇ ಅತಿಥಿ ಉಪನ್ಯಾಸಕರ ಸೇವೆಯ ಮೇಲೆ.ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 120 ಉಪನ್ಯಾಸಕರು ಇದ್ದು, ಇವರಲ್ಲಿ ಅತಿಥಿ ಉಪನ್ಯಾಸಕರ ಸಂಖ್ಯೆ 110. ಸರ್ಕಾರಿ ಕಾಲೇಜುಗಳ ಶಿಕ್ಷಣ ವ್ಯವಸ್ಥೆ ಅತಿಥಿ ಉಪನ್ಯಾಸಕರ ಮೇಲೆಯೇ ನಂತಿದೆ ಎಂಬುದು ಇದರಿಂದ ಯಾರಿಗಾದರೂ ಅರ್ಥವಾದೀತು. ಇದೀಗ ಇವರೆಲ್ಲರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇವಲ 10 ಕಾಯಂ ಉಪನ್ಯಾಸಕರು ಸಾವಿರಾರು ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡಲು ಸಾಧ್ಯ. ಇದು ಕೇವಲ ಕೊಪ್ಪಳ ಸರ್ಕಾರಿ ಪದವಿ ಕಾಲೇಜಿನ ಪರಿಸ್ಥಿತಿ ಅಲ್ಲ, ರಾಜ್ಯದ 432 ಸರ್ಕಾರಿ ಪದವಿ ಕಾಲೇಜಿನಲ್ಲಿಯೂ ಇದೇ ಗೋಳು ಇದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಳೆದ 22 ದಿನಗಳಿಂದ ಅಘೋಷಿತ ರಜೆ ಇದ್ದಂತಿದೆ.ಸರ್ಕಾರ ಕೂಡಲೇ ಸಮಸ್ಯೆ ಇತ್ಯರ್ಥಪಡಿಸಿ ಸರ್ಕಾರಿ ಪದವಿ ಕಾಲೇಜು ತರಗತಿಗಳು ನಡೆಯುವಂತೆ ಮಾಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. ಪಾಠವೇ ಇಲ್ಲದಿದ್ದರೆ ನಾವು ಕಾಲೇಜಿಗೆ ಬಂದು ಏನು ಮಾಡುವುದು ಎಂದು ಪ್ರಶ್ನಿಸುತ್ತಿದ್ದಾರೆ.ಬೆಳಗಾವಿ ಅಧಿವೇಶನದ ವೇಳೆ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ನಡೆಸಿದ ಮಾತುಕತೆ ವಿಫಲವಾಗಿದೆ. ಬೇಡಿಕೆ ಈಡೇರಿಸಲು ಸರ್ಕಾರ ಒಂದಷ್ಟು ಸಮಯಾವಕಾಶ ಕೇಳಿತ್ತು. ಆದರೆ, ಅದಕ್ಕೆ ಒಪ್ಪದ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಆಯಾ ಕಾಲೇಜಿನ ಮುಂಭಾಗ ಧರಣಿ ಮುಂದುವರೆಸಿದ್ದಾರೆ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಈ ಬಾರಿ ಹೆಚ್ಚೇನೂ ಬೇಡಿಕೆ ಕೇಳುತ್ತಿಲ್ಲ. ಸೇವಾ ಕಾಯಂ ಆಗಲಿ ಎನ್ನುವುದೇ ಪ್ರಮುಖ, ಏಕೈಕ ಬೇಡಿಕೆಯಾಗಿದೆ.ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ. ಕಳೆದ 22 ವರ್ಷಗಳಿಂದ ಇದೇ ಗೋಳಾಗಿದೆ. ನಮ್ಮ ಜೀವನ ಅಭದ್ರವಾಗಿದೆ. ಹೀಗಾಗಿ, ಕಾಯಂ ಮಾಡಲೇಬೇಕು ಎಂದು ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವೀರೇಶ ಸಜ್ಜನ ಹೇಳಿದ್ಧಾರೆ.