ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಖಾಸಗಿ ಶಾಲೆಗಳಲ್ಲಿ ಅಧಿಕೃತ ಶುಲ್ಕಕ್ಕಿಂತ ಅನಧಿಕೃತವಾಗಿ ಹೆಚ್ಚುವರಿ ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಹೆಚ್ಚು ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳ ಮೇಲೆ ಕ್ರಮ ಜರುಗಿಸುವಂತೆ ಸದೃಢ ಫೌಂಡೇಶನ್‌ನ ಪದಾಧಿಕಾರಿಗಳು ಒತ್ತಾಯಿಸಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸದೃಢ ಫೌಂಡೇಶನ್ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಬಿ.ಜಿ. ಭೋಜರಾಜ ಮಾತನಾಡಿ, ಸರ್ಕಾರದ ಅಧಿನಿಯಮವನ್ನು ಇಲ್ಲಿನ ಖಾಸಗಿ ಶಾಲೆಗಳು ಪಾಲಿಸುತ್ತಿಲ್ಲ. ತಮಗೆ ಬೇಕಾದಂತೆ ನೀತಿ ನಿಯಮಗಳನ್ನು ಮಾಡಿಕೊಂಡಿವೆ. ಒಬ್ಬ ವಿದ್ಯಾರ್ಥಿಗೆ ಒಂದು ರೀತಿ ಶುಲ್ಕ ಇನ್ನೊಬ್ಬ ವಿದ್ಯಾರ್ಥಿಗೆ ಇನ್ನೊಂದು ರೀತಿ ಶುಲ್ಕ ವಸೂಲಿ ಮಾಡುತ್ತಾ ತಾರತಮ್ಯ ಮಾಡುತ್ತಿವೆ. ಸರ್ಕಾರ ಖಾಸಗಿ ಶಾಲೆಗಳಿಗೂ ಕೆಲ ನೀತಿ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಅದು ನೆಪಮಾತ್ರಕ್ಕೆಂಬತಾಗಿದೆ. ಖಾಸಗಿ ಶಾಲೆಗಳು ಅನುಮೋದಿತ ಅಧಿಕೃತ ಶುಲ್ಕದ ವಿವರವನ್ನು ಶಾಲೆಯ ಫಲಕದಲ್ಲಿ ಪ್ರಕಟಿಸದೆ ಪೊಷಕರಿಂದ ಮಿತಿ ಮೀರಿ ವಸೂಲಿ ಮಾಡುತ್ತಿದ್ದಾರೆ. ಪೋಷಕರುಗಳು ಮಧ್ಯಮ ವರ್ಗದವರು, ರೈತರು, ಕೂಲಿ ಕಾರ್ಮಿಕರು, ಆಟೋ ಚಾಲಕರಾಗಿದ್ದು ಇವರಿಗೆ ಆರ್ಥಿಕ ಹೊರೆಯಾಗುತ್ತಿದೆ. ಶಿಕ್ಷಣ ಇಲಾಖೆ ನಿಯಮಾನುಸಾರ ಯಾವುದೇ ಶಾಲೆಯು ದೇಣಿಗೆ ಪಡೆಯುವಂತಿಲ್ಲ. ಅಲ್ಲದೆ ಇಲ್ಲಿನ ಖಾಸಗಿ ಶಾಲೆಗಳು ಪ್ರತಿವರ್ಷವೂ ಶಾಲಾ ಶುಲ್ಕವನ್ನು ಹೆಚ್ಚಳ ಮಾಡಿಕೊಳ್ಳುತ್ತಿವೆ. ದಾಖಲಾತಿಗಳನ್ನು ಕಂತಿನ ರೂಪದಲ್ಲಿ ಪೋಷಕರಿಂದ ಪಡೆಯುತ್ತಿದ್ದಾರೆ. ಈ ಬಗ್ಗೆ ನಾವು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಮನವಿ ಸಲ್ಲಿಸಿ ಹದಿನೈದು ದಿನಗಳಾದರೂ ಇಲ್ಲಿನ ಶಿಕ್ಷಣಾಧಿಕಾರಿಗಳು ನಮಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದು, ಖಾಸಗಿ ಶಾಲೆಗಳ ಪೋಷಕರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಯಲಿದೆ ಎಂದರು. ಎಪಿಎಂಸಿ ಮಾಜಿ ನಿರ್ದೇಶಕ ಮಲ್ಲೇನಹಳ್ಳಿ ಕಾಂತರಾಜು ಮಾತನಾಡಿ, ಇಲ್ಲಿನ ಕೆಲ ಖಾಸಗಿ ಶಾಲೆಗಳು ಮಕ್ಕಳ ಪಠ್ಯಪುಸ್ತಕದಲ್ಲೂ ಹೆಚ್ಚಿನ ಹಣ ಪೀಕುತ್ತಿದ್ದಾರೆ. ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಇಲ್ಲಿನ ಖಾಸಗಿ ಶಾಲೆಗಳು ಬೇಕಾಬಿಟ್ಟಿಯಾಗಿ ಶುಲ್ಕವನ್ನು ಹೆಚ್ಚಳ ಮಾಡುತ್ತಿದ್ದಾರೆ. ಶುಲ್ಕದಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿದ್ದು ಏಕರೂಪ ಶುಲ್ಕ ಇಲ್ಲ. ಶಿಕ್ಷಣ ವ್ಯವಸ್ಥೆಯೇ ಹಾಳಾಗುತ್ತಿದ್ದು ಕೂಡಲೆ ಸಂಬಂದಪಟ್ಟ ಅಧಿಕಾರಿಗಳು ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪೋಷಕರುಗಳಾದ ಮಧು ಬೆಳಗರಹಳ್ಳಿ, ನಾಗೇಶ್ ಬಿಳಿಗೆರೆಪಾಳ್ಯ, ಪ್ರಮೋದ್, ಸ್ವಾಮಿಗೌಡ, ಪ್ರವೀಣ್, ರೇಣುಕಾಮೂರ್ತಿ, ಪ್ರಸನ್ನ, ಭೈರೇಶ್, ದಯಾನಂದ್, ಕಾಂತರಾಜು, ಯೋಗೇಶ್, ಕಿರಣ್ ತಿಪಟೂರು, ಮಲ್ಲಿಕಾರ್ಜುನ್ ಸದೃಢ ಫೌಂಡೇಶನ್ ನಿರ್ದೇಶಕ ಲೋಕೇಶ್ ಮತ್ತಿತರರಿದ್ದರು.