ಗಂಗಾವತಿ ನಗರದ ಗಂಗಾವತಿ-ರಾಯಚೂರು ಮಾರ್ಗದಲ್ಲಿರುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ವಿತರಣಾ ಕಾಲುವೆ ರಸ್ತೆ ಮೇಲೆ ಮಿಲ್ ಮಾಲೀಕರರೊಬ್ಬರು ಅನಧಿಕೃತವಾಗಿ ನಾಲ್ಕಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣದ ಕಾಮಗಾರಿ ನಡೆಸಿದ್ದಾರೆ.

ರಾಮಮೂರ್ತಿ ನವಲಿ

ಗಂಗಾವತಿ: ನಗರದ ಗಂಗಾವತಿ-ರಾಯಚೂರು ಮಾರ್ಗದಲ್ಲಿರುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ವಿತರಣಾ ಕಾಲುವೆ ರಸ್ತೆ ಮೇಲೆ ಮಿಲ್ ಮಾಲೀಕರರೊಬ್ಬರು ಅನಧಿಕೃತವಾಗಿ ನಾಲ್ಕಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣದ ಕಾಮಗಾರಿ ನಡೆಸಿದ್ದಾರೆ.

ವಿತರಣಾ ಕಾಲುವೆ 17/4ರ ಕಾಲುವೆ ರಸ್ತೆಯ ಸರ್ವೆ ನಂ. 150ರಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತವೆ. ಶ್ರೀ ಲಕ್ಷ್ಮೀ ರಾಮ ಇಂಡಸ್ಟ್ರೀಸ್‌ ಮಾಲೀಕರ ವಿರುದ್ಧ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಡ್ಡರಹಟ್ಟಿ ಕ್ಯಾಂಪಿನಲ್ಲಿರುವ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಲವಾರು ಬಾರಿ ಮೌಖಿಕವಾಗಿ ಸೂಚನೆ ನೀಡಿದ್ದರೂ ಮಿಲ್ ಮಾಲೀಕರು ನಿರ್ಲಕ್ಷಿಸಿ ಕಾಮಗಾರಿ ಮುಂದುವರಿಸಿದ್ದರು.

15 ದಿನಗಳ ಹಿಂದೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಕೆಲವರು ಅನಧಿಕೃತವಾಗಿ ನೀರು ಬಳಕೆ ಮಾಡುತ್ತಿದ್ದಾರೆಂಬ ಕಾರಣದಿಂದ ಅಧಿಕಾರಿಗಳೇ ಪಂಪ್‌ಸೆಟ್ ಮತ್ತು ಪೈಪ್ ಕಿತ್ತು ಹಾಕಿದ್ದರು. ಈಗ ಕಟ್ಟಡ ಮಾಲೀಕರ ವಿರುದ್ಧ ದೂರು ನೀಡಿದ್ದಾರೆ.

ಇಲಾಖೆ ವ್ಯಾಪ್ತಿ ಜಾಗದಲ್ಲಿ ಮನೆ ನಿರ್ಮಾಣ: ಸಮೀಪದ ವಡ್ಡರಹಟ್ಟಿ ಕ್ಯಾಂಪ್‌ನಲ್ಲಿರುವ ಜಲ ಸಂಪನ್ಮೂಲ ಇಲಾಖೆಯ ವ್ಯಾಪ್ತಿಯಲ್ಲಿರುವ 105 ಎಕರೆ ಪ್ರದೇಶದಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಇಲಾಖೆ ನಿರ್ಮಿಸಿರುವ ಮನೆಗಳಲ್ಲಿ ಕೆಲವು ನಿವೃತ್ತಿ ಹೊಂದಿದ ನೌಕರರು ಇದ್ದು, ಪ್ರಸ್ತುತ ಕೆಲಸ ಮಾಡುವವರಿಗೆ ಮನೆ ಇಲ್ಲದಂತಾಗಿದೆ. 75 ವರ್ಷಗಳಿಂದ ಇಲಾಖೆಯ ಜಾಗ ಕಬ್ಜಾ ಮಾಡಿರುವ ವ್ಯಕ್ತಿಗಳು ಇಲಾಖೆಗೆ ಬಿಟ್ಟು ಕೊಡಲು ನಿರಾಕರಿಸುತ್ತಿದ್ದಾರೆ.

ಶಾಸಕರಿಂದ ಸೂಚನೆ: ವಡ್ಡರಹಟ್ಟಿ ಕ್ಯಾಂಪಿನ ಜಲಸಂಪನ್ಮೂಲ ಇಲಾಖೆಯ ಜಾಗದಲ್ಲಿ ಖಾಸಗಿಯವರು ನಿರ್ಮಿಸಿದ ಮನೆ ತೆರವುಗೊಳಿಸುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸೂಚಿಸಿದ್ದಾರೆ. ನಿತ್ಯ ಕೆಲಸ ಮಾಡುವ ನೌಕರರಿಗೆ ವಸತಿ ಸೌಕರ್ಯ ಇಲ್ಲದಂತಾಗಿದೆ, ಕೂಡಲೆ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ, ನೌಕರರಿಗೆ ಅನುಕೂಲ ಮಾಡಿಕೊಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದರು.

ತುಂಗಭದ್ರಾ ಎಡದಂಡೆ ಮುಖ್ಯಕಾಲುವೆಯ ವಿತರಣಾ ಕಾಲುವೆ 17/4ರ ಕಾಲುವೆ ರಸ್ತೆಯ ಸರ್ವೆ ನಂ. 150ರಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವ ಶ್ರೀ ಲಕ್ಷ್ಮೀ ರಾಮ ಇಂಡಸ್ಟ್ರೀಸ್‌ ವಿರುದ್ಧ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೂ ಕಾಮಗಾರಿ ಮುಂದುವರಿದಿದೆ.

ದೂರು ಸಲ್ಲಿಸಲಾಗಿದೆ: ತುಂಗಭದ್ರಾ ಎಡದಂಡೆ ಮುಖ್ಯಕಾಲುವೆಯ ವಿತರಣಾ ಕಾಲುವೆ 17/4ರ ಕಾಲುವೆ ರಸ್ತೆಯ ಸರ್ವೆ ನಂ. 150ರಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವ ಶ್ರೀ ಲಕ್ಷ್ಮೀ ರಾಮ ಇಂಡಸ್ಟ್ರೀಸ್‌ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಅಲ್ಲದೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ತಿಳಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಎಇಇ ನಾಗರಾಜ್ ಹೇಳಿದರು.