ಕೊಪ್ಪಳ: ಮೇ 28 ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅನಧಿಕೃತ ಜಾನುವಾರುಗಳ ವಧೆ,ಸಾಗಣೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಬಕ್ರೀದ್ ಆಚರಣೆ ಸಂದರ್ಭದಲ್ಲಿ ಅನಧಿಕೃತ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆ ತಡೆಗಟ್ಟುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಮತ್ತು ಸಂರಕ್ಷಣೆ ಅಧಿನಿಯಮ-2020ರ ಅನ್ವಯ ಗೋಹತ್ಯೆ ನಿಷೇಧಿಸಲಾಗಿದೆ.ಎಲ್ಲ ವಯಸ್ಸಿನ ಆಕಳು,ಆಕಳು ಕರು, ಹೋರಿ, ಗೂಳಿ ಮತ್ತು 13ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳ ಹತ್ಯೆ ನಿಷೇಧಿಸಲಾಗಿದೆ. ಹದಿಮೂರು ವರ್ಷ ಮೇಲ್ಪಟ್ಟ ಎಮ್ಮೆ ಅಥವಾ ಕೋಣ ಸಕ್ಷಮ ಪ್ರಾಧಿಕಾರಿಯ ಶಿಫಾರಸ್ಸಿನ ಮೇರೆಗೆ ವಧೆಗೆ ಅವಕಾಶ ನೀಡಲಾಗಿದೆ. ಉಳಿದ ಎಲ್ಲ ಜಾನುವಾರುಗಳ ವಧೆ ಸಂಪೂರ್ಣ ನಿಷೇಧಿಸಲಾಗಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಅತ್ಯವಶ್ಯಕತೆ ಇದೆ.ಈ ಕುರಿತು ಪಶುಪಾಲನಾ ಇಲಾಖೆ,ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಂಡ ರಚಿಸಿ ಸೂಕ್ತ ನಿಗಾ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರವು ನಿಯಮಿಸಿದ ವಿಧಾನದಲ್ಲಿ ಕೃಷಿ ಅಥವಾ ಪಶುಸಂಗೋಪನೆಯ ಉದ್ದೇಶಕ್ಕಾಗಿ ಸಕ್ಷಮ ಪ್ರಾಧಿಕಾರಿಯ ಜಾನುವಾರು ಸಾಗಣೆ ಪರವಾನಗಿ ಪಡೆದು ಜಾನುವಾರು ಸಾಗಣೆ ಮಾಡಬೇಕು.ಅಪರಾಧ ಸಾಬೀತಾದಲ್ಲಿ ಮೂರರಿಂದ ಏಳು ವರ್ಷದವರೆಗೆ ಕಾರವಾಸ ಅಥವಾ ಒಂದು ಜಾನುವಾರಿಗೆ ₹50 ಸಾವಿರದಿಂದ ₹5 ಲಕ್ಷಗಳವರೆಗೆ ದಂಡಕ್ಕೆ ಅವಕಾಶವಿರುತ್ತದೆ. ಕೃಷಿ ಅಥವಾ ಪಶುಸಂಗೋಪನೆಯ ಉದ್ದೇಶಕ್ಕೆಂದು ರಾತ್ರಿ ವೇಳೆ ಹಸು, ಕರು,ಎತ್ತು, ಎಮ್ಮೆ, ಕೋಣ ಸಾಗಣೆ ಮಾಡುವಂತಿಲ್ಲ.ಪರವಾನಗಿ ಪಡೆದುಕೊಂಡಾಗ್ಯೂ ಮಾಲೀಕತ್ವದ ದಾಖಲೆ ಮತ್ತು ಪಶುವೈದ್ಯಕೀಯ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹೊಂದಿರಬೇಕು.ಪರವಾನಿಗೆ ಪಡೆದು ಸಾಗಣೆ ಮಾಡುತ್ತಿದ್ದಲ್ಲಿ ಜಾನುವಾರು ಸಂಖ್ಯೆ, ಕಳುಹಿಸಿದವರು ಮತ್ತು ಪಡೆಯುವವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ದೊಡ್ಡ ಅಕ್ಷರಗಳಲ್ಲಿ ವಾಹನದ ಮೇಲೆ ಬರೆಯುವುದು ಹಾಗೂ ಜಾನುವಾರುಗಳ ಮಾಲೀಕರು ಮಾಲೀಕತ್ವದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದರು.ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನಧಿಕೃತ ಜಾನುವಾರುಗಳ ಸಾಗಾಟದ ಮೇಲೆ ನಿಗಾವಹಿಸಲು ಪಶು ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ತಂಡ ರಚಿಸಿ ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ 16 ಕಡೆಗಳಲ್ಲಿ ಚೆಕ್‌ಪೋಸ್ಟ್ ಮಾಡಲಾಗುತ್ತದೆ.ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಿರೇಸಿಂದೋಗಿ ರಸ್ತೆಯ ಶ್ರೀಶೈಲ ನಗರ ಕ್ರಾಸ್ ಹತ್ತಿರ, ಹೊಸಪೇಟೆ ರಸ್ತೆ ಎಸ್.ಎಫ್.ಎಸ್ ಶಾಲೆ ಹತ್ತಿರ, ಗದಗ ರಸ್ತೆಯ ಜಿಲ್ಲಾ ಕ್ರಿಡಾಂಗಣದ ಹತ್ತಿರ ಹಾಗೂ ಕಿನ್ನಾಳ ರಸ್ತೆಯ ಭಾಗ್ಯನಗರ ಕ್ರಾಸ್ ಬಳಿ ಚೆಕ್‌ಪೋಸ್ಟ್ ತೆರೆಯಲಾಗುವುದು. ಅದೇ ರೀತಿ ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಎನ್-ಎಚ್-50ರಲ್ಲಿ ಬರುವ ಹೊಸಲಿಂಗಾಪುರ-ಹುಲಗಿ ಕ್ರಾಸ್ ಹತ್ತಿರ, ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮುಂಡರಗಿ ರಸ್ತೆಯ ಬೆಳಗಟ್ಟಿ, ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಗಜೇಂದ್ರಗಡ ರಸ್ತೆಯಲ್ಲಿನ ಬಂಡಿ ಗ್ರಾಮ ಹಾಗೂ ಗದಗ ರಸ್ತೆಯ ಸಂಕನೂರು ಕ್ರಾಸ್ ಹತ್ತಿರ,ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಆನೆಗೊಂದಿ ರಸ್ತೆಯ ತಹಸೀಲ್ದಾರ್ ಆಫೀಸ್ ಹತ್ತಿರ ಹಾಗೂ ಕೊಪ್ಪಳ ರಸ್ತೆಯ ವಡ್ಡರಹಟ್ಟಿ ಕ್ಯಾಂಪ್ ರಸ್ತೆಯಲ್ಲಿ, ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯ ಗದಗ ರಸ್ತೆಯ ಬನ್ನಿಕೊಪ್ಪ, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಂಪ್ಲಿ ರಸ್ತೆಯಲ್ಲಿನ ಚಿಕ್ಕಜಂತಕಲ್ಲನಲ್ಲಿ ಹಾಗೂ ಹೊಸಪೇಟೆ ರಸ್ತೆಯ ಕಡೇ ಬಾಗಿಲು,ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಧನೂರು ರಸ್ತೆಯ ಚೆನ್ನಳ್ಳಿ ಕ್ರಾಸ್ ಬಳಿ, ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಇಳಕಲ್ಲ ರಸ್ತೆಯಲ್ಲಿನ ಕ್ಯಾದಿಗುಪ್ಪಾ ಕ್ರಾಸ್ ಬಳಿ ಮತ್ತು ತಾವರಗೇರಾ ಠಾಣೆ ವ್ಯಾಪ್ತಿಯಲ್ಲಿ ಬರುವ ಮುದಗಲ್ಲ ರಸ್ತೆಯ ಕಿಲ್ಲಾರ ಹಟ್ಟಿ ಬಳಿ ಸೇರಿ ಜಿಲ್ಲೆಯಲ್ಲಿ ಒಟ್ಟು 16 ಚೆಕ್‌ಪೋಸ್ಟ್ ತೆರೆಯಲಾಗುತ್ತಿದೆ. ಪ್ರಾಣಿ ಬಲಿ ನಿಷೇದ ಕಾಯ್ದೆ-1959 ಕಾಯ್ದೆಯ ಸೆಕ್ಷನ್ (3) ರನ್ವಯ ಸಾರ್ವಜನಿಕ ಸ್ಥಳಗಳಲ್ಲಿ, ಪೂಜಾ ಸ್ಥಳಗಳಲ್ಲಿ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಜಿಲ್ಲೆಯ ವಿವಿಧ ತಾಲೂಕಿನ ಪಶುವೈದ್ಯಾಧಿಕಾರಿಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಇತರೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.