ರಾಣಿಬೆನ್ನೂರಿನಲ್ಲಿ ಅನಧಿಕೃತ ಗೂಡಂಗಡಿ ತೆರವು ಕಾರ್ಯಾಚರಣೆ

| Published : Mar 06 2025, 12:32 AM IST

ಸಾರಾಂಶ

ಈಗಾಗಲೇ ಕೆಲವೊಂದು ಭಾಗದಲ್ಲಿ ಅನಧಿಕೃತ ಶೆಡ್ ತೆರವುಗೊಳಿಸಲಾಗಿದೆ. ರಸ್ತೆಯ ಫುಟ್‌ಪಾತ್‌ನಲ್ಲಿ ಕಾಯಂ ಶೆಡ್ ನಿರ್ಮಾಣ ಮಾಡಿ ಸರಿಯಾಗಿ ಸ್ವಚ್ಚತೆ ಮಾಡಿಕೊಳ್ಳದ ಕಾರಣ ಅವರಿಗೆ ಸಾಕಷ್ಟು ಬಾರಿ ನೋಟಿಸ್ ನೀಡಿ ಎಚ್ಚರಿಸಲಾಯಿತು.

ರಾಣಿಬೆನ್ನೂರು: ನಗರದ ಹಳೇ ಪಿ.ಬಿ. ರಸ್ತೆಯ ಕೆಇಬಿ ಗಣೇಶ ದೇವಸ್ಥಾನ ಬಳಿ ಫುಟ್‌ಪಾತ್‌ನಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು ಬುಧವಾರ ಬೆಳಗಿನ ಜಾವ ನಗರಸಭೆ ಪೌರಾಯುಕ್ತ ಪಕ್ಕೀರಪ್ಪ ಇಂಗಳಗಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.ಈ ಕುರಿತು ಪೌರಾಯುಕ್ತ ಪಕ್ಕೀರಪ್ಪ ಇಂಗಳಗಿ ಮಾತನಾಡಿ, ನಗರದಲ್ಲಿ ವಿವಿಧ ಕಡೆ ರಸ್ತೆಯ ಫುಟ್‌ಪಾತ್ ಮೇಲೆ ಹಣ್ಣಿನ ಅಂಗಡಿ, ಎಗ್‌ರೈಸ್, ಬೀಡಿ ಅಂಗಡಿ, ಚಹಾ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದರೂ ಇದರಿಂದ ರಸ್ತೆಯ ಮೇಲೆ ಸಂಚಾರ ಮಾಡುವರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯವಿರುವುದರಿಂದ ಸಾರ್ವಜನಿಕರ ಪ್ರಾಣಹಾನಿ ತಪ್ಪಿಸುವ ನಿಟ್ಟಿನಲ್ಲಿ ಫುಟ್‌ಪಾತ್ ಅಂಗಡಿ ಮಾಲೀಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು.

ಈಗಾಗಲೇ ಕೆಲವೊಂದು ಭಾಗದಲ್ಲಿ ಅನಧಿಕೃತ ಶೆಡ್ ತೆರವುಗೊಳಿಸಲಾಗಿದೆ. ರಸ್ತೆಯ ಫುಟ್‌ಪಾತ್‌ನಲ್ಲಿ ಕಾಯಂ ಶೆಡ್ ನಿರ್ಮಾಣ ಮಾಡಿ ಸರಿಯಾಗಿ ಸ್ವಚ್ಚತೆ ಮಾಡಿಕೊಳ್ಳದ ಕಾರಣ ಅವರಿಗೆ ಸಾಕಷ್ಟು ಬಾರಿ ನೋಟಿಸ್ ನೀಡಿ ಎಚ್ಚರಿಸಲಾಯಿತು. ಆದರೆ ಶೆಡ್ ಮಾಲೀಕರು ಇದಕ್ಕೆ ಸ್ಪಂದಿಸದ ಕಾರಣ ಶೆಡ್‌ಗಳನ್ನು ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಆಕ್ರಮವಾಗಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡರೆ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಿ ನಗರದ್ಯಾಂತ ದಂಡ ಹಾಕಲಾಗುವುದು ಎಂದರು.ನಗರದ ಪ್ರಮುಖ ರಸ್ತೆಗಳಲ್ಲಿರುವ ಬೇಕರಿ, ಬಿರಿಯಾನಿ, ಬಟ್ಟೆ ಅಂಗಡಿ ಮಾಲೀಕರಿಗೆ ತಿಳಿವಳಿಕೆ ನೀಡಿ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ. ಸಾರ್ವಜನಿಕರು ಫುಟ್‌ಪಾತ್‌ನಲ್ಲಿ ಓಡಾಡಲು ಅನುವು ಮಾಡಿಕೊಡಿ. ನಿಮ್ಮ ವ್ಯಾಪಾರ ಕೂಡ ವೃದ್ಧಿಯಾಗಲಿದೆ ಎಂದು ಅಂಗಡಿ ಮಾಲೀಕರಿಗೆ ತಿಳಿವಳಿಕೆ ನೀಡಿದರು.ಎಇಇ ಎಸ್.ಬಿ. ಮರಿಗೌಡ್ರ, ಪರಿಸರ ಎಂಜಿನಿಯರ್ ಮಹೇಶ ಕೊಡಬಾಳ, ಆರೋಗ್ಯ ನಿರೀಕ್ಷಕರಾದ ಮಧುರಾಜ ಕಂಬಳಿ, ರಾಘವೇಂದ್ರ ಗಾವಡೆ, ಶೃತಿ ಮಾರಣ್ಣನವರ, ಸಿಬ್ಬಂದಿಗಳಾದ ಯಲ್ಲಪ್ಪ, ನಿಂಗಪ್ಪ, ನಾಗಪ್ಪ ಮತ್ತಿತರರು ಇದ್ದರು.ಬಾಲ್ಯವಿವಾಹ ಆರೋಪ: ಅಧಿಕಾರಿಗಳಿಂದ ಪರಿಶೀಲನೆ

ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮದಲ್ಲಿ ಬಾಲ್ಯವಿವಾಹವಾಗಿರುವ ಕುರಿತು ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಸದಸ್ಯರು ಬಾಲಕಿಯನ್ನು ಪಟ್ಟಣದ ಸಿಡಿಪಿಒ ಕಚೇರಿಗೆ ಕರೆಸಿ ಆಕೆಯೊಂದಿಗೆ ಮುಕ್ತವಾಗಿ ಸಮಾಲೋಚನೆ ಮಾಡಿದ್ದಾರೆ.ಬಳಿಕ ಬಾಲಕಿಯನ್ನು ಹೆಚ್ಚಿನ ಸಮಾಲೋಚನೆಗಾಗಿ ೩ ದಿನ ಅಭಿರಕ್ಷಣೆಗೆ ಒಳಪಡಿಸಿದ್ದು, ರಾಣಿಬೆನ್ನೂರಿನ ಸರ್ಕಾರಿ ಬಾಲಕಿಯರ ಮಂದಿರಕ್ಕೆ ಕಳಿಸಲಾಗಿದೆ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಗೀತಾ ಪಾಟೀಲ ಮಾತನಾಡಿ, ಬಾಲಕಿಯೊಂದಿಗೆ ಇನ್ನೂ ಹೆಚ್ಚಿನ ಸಮಾಲೋಚನೆ ಮಾಡುವ ಅವಶ್ಯಕತೆ ಇದ್ದು, ಕಾನೂನಿನ ಇತರ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಅಪರಾಧ ಸಾಬೀತಾದರೆ ಅಪರಾಧಿಗಳಿಗೆ ಸೂಕ್ತ ಕಾನೂನು ಕ್ರಮ ಆಗುತ್ತದೆ ಎಂದರು.