ಸಾರಾಂಶ
ನಾಸ್ತಿಕವಾದಿಗಳು, ಹಿಂದೂ ಹಾಗೂ ರಾಷ್ಟ್ರ ವಿರೋಧಿಗಳ ಸಲಹೆಯಿಂದಲೇ ಸರ್ಕಾರ ಹೀಗೆ ನಡೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಪ್ರೋತ್ಸಾಹ ನೀಡುತ್ತಿದೆ.
ಹುಬ್ಬಳ್ಳಿ:
ಇಲ್ಲಿಯ ನವನಗರದ ಪೊಲೀಸ್ ಆಯುಕ್ತರ ಕಚೇರಿಗೆ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಭೇಟಿ ನೀಡಿ ಶ್ರೀರಾಮಸೇನೆಯ ಪ್ರಮುಖರ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ಬಂದ್ ಮಾಡಿದ್ದು ಇದನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಕಮಿಷನರ್ ಎನ್. ಶಶಿಕುಮಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್ ವಿರುದ್ಧ ಸಹಾಯವಾಣಿ ಆರಂಭಿಸಿ, ತ್ರಿಶೂಲ ದೀಕ್ಷೆ ನೀಡಿದ್ದರಿಂದ ಕಳೆದ 15 ದಿನಗಳಲ್ಲಿ ಶ್ರೀರಾಮಸೇನೆ 20 ಪ್ರಮುಖರ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ಬಂದ್ ಮಾಡಲಾಗಿದೆ. ಮುಸ್ಲಿಮರು ಹೀಗೆ ಮಾಡಿರುವ ಸಾಧ್ಯತೆ ಇದೆ. ಭಟ್ಕಳ, ಮಂಗಳೂರು ಹಾಗೂ ವಿದೇಶದಲ್ಲಿರುವವರೂ ಇದರಲ್ಲಿ ಪಾಲ್ಗೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದರು.
ನಾಸ್ತಿಕವಾದಿಗಳು, ಹಿಂದೂ ಹಾಗೂ ರಾಷ್ಟ್ರ ವಿರೋಧಿಗಳ ಸಲಹೆಯಿಂದಲೇ ಸರ್ಕಾರ ಹೀಗೆ ನಡೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಪ್ರೋತ್ಸಾಹ ನೀಡುತ್ತಿದೆ. ಹಿಂದೂ ಹೆಣ್ಣುಮಕ್ಕಳು ಹೂವು, ಕುಂಕುಮ, ಬಳೆ ತೆಗೆದು ಬರಬೇಕೆಂಬ ಕ್ರಮ ಶಾಲಾ-ಕಾಲೇಜುಗಳಲ್ಲಿ ಆಗುತ್ತಿದೆ. ಹಿಂದೂ ಸಮಾಜ ಜಾಗೃತವಾಗಿದ್ದು, ಇದೆಲ್ಲ ಬಹಳ ದಿನ ನಡೆಯುವುದಿಲ್ಲ ಎಂದರು.ಒಂದೇ ತಿಂಗಳಲ್ಲಿ 50 ಯೋಧರ ಹತ್ಯೆಯಾಗಿದ್ದನ್ನು ಕೇಂದ್ರ ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಕಿಡಿಗೇಡಿಗಳನ್ನು ಓಡಿಸಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ನಿಗಮದ ಭ್ರಷ್ಟಾಚಾರದ ಪ್ರಶ್ನೆಗೆ, ಭ್ರಷ್ಟ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಪಾಲುದಾರರೇ ಆಗಿದ್ದಾರೆ. ಭ್ರಷ್ಟಾಚಾರ ಭಯಾನಕವಾಗಿ ಬೆಳೆಯುತ್ತಿದೆ. ನಿಗಮದ ಹಣ ಲೂಟಿ ಮಾಡಿದವರಿಗೆ ವಾಲ್ಮೀಕಿ ಸಮಾಜದ ಶಾಪ ತಟ್ಟುತ್ತೆ. ತನಿಖೆಗಾಗಿ ಸಮಿತಿ ರಚನೆ ಮಾಡಿದ್ದು ನಾಟಕ, ಕಣ್ಣೊರೆಸುವ ತಂತ್ರ ಮಾತ್ರ. ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲೂ ಹೀಗೇ ಆಗಿದೆ ಎಂದು ತಿಳಿಸಿದರು.ಈ ವೇಳೆ ಶ್ರೀರಾಮಸೇನೆಯ ಮುಖಂಡರು ಇದ್ದರು.