ಬೋಧಕೇತರ ಕಾರ್ಯಗಳಿಂದ ಶಿಕ್ಷಕರ ಹೊರೆಯಿಳಿಸಿ

| Published : Dec 09 2024, 12:47 AM IST

ಸಾರಾಂಶ

ಇತ್ತೀಚಿಗೆ ಶಿಕ್ಷಕರಿಗೆ ಪ್ರತಿದಿನ ಬೋಧನೆಗಿಂತ ಬೋಧಕೇತರ ಕಾರ್ಯಗಳ ಹೊರೆ ಹೆಚ್ಚಾಗುತ್ತಲಿದೆ. ಇದು ಶಿಕ್ಷಕರ ಮನೋಸ್ಥೈರ್ಯದ ಮೇಲೆ ಹಾಗೂ ಮಕ್ಕಳ ಕಲಿಕಾ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ

ಕನ್ನಡಪ್ರಭ ವಾರ್ತೆ ಬಾದಾಮಿ

ಶಿಕ್ಷಕರಿಗೆ ಬೋಧಕೇತರ ಕಾರ್ಯಗಳಿಂದ ಮುಕ್ತಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಘಟಕದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಉಜ್ವಲಕಾಂತ ಬಸರಿ ಮತ್ತು ದೇವರಾಜ ಅಡ್ಡಿ ಮಾತನಾಡಿ, ಶಿಕ್ಷಕರಾಗಿ ನೇಮಕಗೊಂಡು ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ನಿರಂತರ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಮಕ್ಕಳ ಪ್ರಗತಿಗಾಗಿ ಇಲಾಖೆ ಕಾರ್ಯಗಳನ್ನು ಚಾಚು ತಪ್ಪದೇ ಮಾಡುತ್ತಿದ್ದೇವೆ. ಆದರೆ ಇತ್ತೀಚಿಗೆ ಶಿಕ್ಷಕರಿಗೆ ಪ್ರತಿದಿನ ಬೋಧನೆಗಿಂತ ಬೋಧಕೇತರ ಕಾರ್ಯಗಳ ಹೊರೆ ಹೆಚ್ಚಾಗುತ್ತಲಿದೆ. ಇದು ಶಿಕ್ಷಕರ ಮನೋಸ್ಥೈರ್ಯದ ಮೇಲೆ ಹಾಗೂ ಮಕ್ಕಳ ಕಲಿಕಾ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿರುವದರಿಂದ ಬೋಧಕೇತರ ಕಾರಣಗಳಿಂದ ಮುಕ್ತಗೊಳಿಸಬೇಕು ಆಗ್ರಹಿಸಿದ್ದಾರೆ.

ಎಸ್ಎಸ್ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ 3 ಹಂತದ ಬದಲು ಈ ಹಿಂದಿನಂತೆ ಪರೀಕ್ಷೆ ಆಯೋಜನೆ. ಸಿಬಿಎಸ್‌ಸಿ, ಐಸಿಎಸ್ಇ ಪರೀಕ್ಷಾ ಫಲಿತಾಂಶ ಮಾದರಿಯಂತೆ ಆಂತರಿಕ ಅಂಕ ಪರಿಗಣಿಸಿ ಫಲಿತಾಂಶ ನೀಡುವುದು. ಎಸ್ಎಸ್ಎಲ್‌ಸಿ ಪ್ರಶ್ನೆ ಪತ್ರಿಕೆ ಸರಳೀಕರಣ. ಖಾಸಗಿ ಅನುದಾನಿತ ಶಾಲೆಗಳಲ್ಲಿ 2016 ಜ.1ರಿಂದ 2020 ಡಿ.31ರವರೆಗಿನ ಖಾಲಿ ಹುದ್ದೆಗಳನ್ನು ತುಂಬಲು ಅನುಮತಿ ನೀಡುವ ಪ್ರಕ್ರಿಯೆ ಪ್ರಾರಂಭಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿಯ ಕೆಕೆಆರ್‌ಡಿ ಮಂಡಳಿಯಿಂದ ನಡೆಯುವ ಪ್ರೌಢಶಾಲೆಗಳ ಸಿಬ್ಬಂದಿಗೆ ನಿಗದಿತ ಸಮಯದಲ್ಲಿ ವೇತನ ಪಾವತಿಸುವುದು. ರಾಜ್ಯದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆ ಮತ್ತು ಆರ್‌ಎಮ್ಎಸ್ಎ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನಿಯಮಿತವಾಗಿ ವೇತನ ನೀಡುವುದು. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರಿಗೆ 15.20, 25.30 ವರ್ಗಗಳ ಕಾಲಮಿತಿ ವೇತನ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳಿಗೆ ಬಡ್ತಿ ನೀಡಲು ಈಗಾಗಲೇ ಇರುವ ನಿಯಮಗಳಿಗೆ ತಿದ್ದುಪಡಿ ತಂದು ಈ ಹಿಂದೆ ಇದ್ದಂತೆ ಯಾವುದೇ ನಿಯಮ ಷರತ್ತುಗಳಿಲ್ಲದೇ 50:50ರ ಅನುಪಾತದಲ್ಲಿ ಸಹ ಶಿಕ್ಷಕರಿಗೆ ಬಡ್ತಿ ನೀಡಬೇಕು. ಪ್ರೌಢಶಾಲಾ ಶಿಕ್ಷಕರು ರಜೆ ಸಹಿತ ನೌಕರರಾಗಿದ್ದು, ಈ ಹಿಂದೆ ಜಾರಿಯಲ್ಲಿದ್ದಂತೆ ದಸರಾ ರಜೆ ಅ.2ರಿಂದ 29ರವರೆಗೆ ಮತ್ತು ಬೇಸಿಗೆ ರಜೆಯನ್ನು ಏ.10ರಿಂದ ಮೇ.30ರವರೆಗೆ ನಿಗದಿಗೊಳಿಸುವುದು. ರಜೆಯ ಅವಧಿಯಲ್ಲಿ ತರಬೇತಿ. ಮೌಲ್ಯಮಾಪನ ಇನ್ನಿತರ ಕೆಲಸಗಳನ್ನು ನಿರ್ವಹಿಸಿದ್ದಲ್ಲಿ ಅದಕ್ಕೆ ಸಮಾನವಾಗಿ ಗಳಿಕೆ ರಜೆ ನೀಡುವುದು. ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಿಕ್ಷಣ ನೌಕರರಿಗೆ ಓಪಿಎಸ್ ಜಾರಿ. ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ ಶಿಕ್ಷಕರಿಗೆ ಮುಖ್ಯ ಶಿಕ್ಷಕರಿಗೆ ನೀಡುವ ಎಲ್ಲಾ ಸೌಲಭ್ಯ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್.ಹಳಗೇರಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಕಾರ್ಯದರ್ಶಿ ಬಸವರಾಜ ಗಾಣಿಗೇರ, ಸಚಿನ ತಿಪ್ಪಾ, ಉಪಕಾರ್ಯದರ್ಶಿ ಸಿ.ಎಂ.ಕಲ್ಲೂರ, ರಾಜ್ಯ ಪರಿಷತ್ ಸದಸ್ಯೆ ಬಸಮ್ಮಾ ನರಸಾಪೂರ, ಸಹಕಾರ್ಯದರ್ಶಿ ಮಹೇಶ ಕೋಟನಕರ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎ.ಪಿ.ಮೇಟಿ ಸೇರಿದಂತೆ ಎಲ್ಲ ನಿರ್ದೇಶಕರು, ಸಹಶಿಕ್ಷಕರು ಇದ್ದರು.