ಸಾರಾಂಶ
ಕಳೆದ ಒಂದು ವಾರದಿಂದ ತಾಲೂಕಿನ ಕ್ಯಾದಿಗುಪ್ಪ ಗ್ರಾಮದ ಜನರಲ್ಲಿ ಮೈ,ಕೈ ನೋವು ಹಾಗೂ ಜ್ವರದ ಲಕ್ಷಣಗಳು ಕಂಡು ಬರುತ್ತಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಜನರಲ್ಲಿ ಮೈ,ಕೈ ನೋವು, ಜ್ವರದ ಲಕ್ಷಣಗಳು । ಆರೋಗ್ಯ ಇಲಾಖೆಯ ನಿರ್ಲಕ್ಷ್ಯ
ಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕುಷ್ಟಗಿಕಳೆದ ಒಂದು ವಾರದಿಂದ ತಾಲೂಕಿನ ಕ್ಯಾದಿಗುಪ್ಪ ಗ್ರಾಮದ ಜನರಲ್ಲಿ ಮೈ,ಕೈ ನೋವು ಹಾಗೂ ಜ್ವರದ ಲಕ್ಷಣಗಳು ಕಂಡು ಬರುತ್ತಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ತಾಲೂಕು ಕೇಂದ್ರ ಕುಷ್ಟಗಿಯಿಂದ ಗ್ರಾಮವು ಸುಮಾರು 17 ಕಿಮೀ ದೂರದಲ್ಲಿದೆ. ಸುಮಾರು 2500ಕ್ಕೂ ಅಧಿಕ ಜನಸಂಖ್ಯೆಯನ್ನು ಗ್ರಾಮ ಹೊಂದಿದೆ. ಇಲ್ಲಿ ಅಸ್ವಚ್ಛತೆಯು ತಾಂಡವವಾಡುತ್ತಿದೆ. ಗ್ರಾಪಂ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ವಹಿಸಿದೆ. ಗ್ರಾಮದಲ್ಲಿ ಸೊಳ್ಳೆಗಳ ಹಾವಳಿ, ದುರ್ವಾಸನೆ ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ. ಗ್ರಾಪಂ ಅಧಿಕಾರಿಗಳು ಸ್ವಚ್ಛತೆಯ ಕುರಿತು ಗಮನ ವಹಿಸಿಲ್ಲ. ಇನ್ನು ಇತ್ತೀಚೆಗೆ ಕೆಲ ದಿನಗಳ ಹಿಂದೆ ಮಳೆ ಸುರಿದಿದ್ದರಿಂದ ಅಸ್ವಚ್ಛತೆ ಮತ್ತಷ್ಟು ಹೆಚ್ಚಾಗಿದೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಆತಂಕ ಎದುರಾಗಿದೆ. ಕನಿಷ್ಠ ಬ್ಲೀಚಿಂಗ್ ಪೌಡರ್ ಹಾಗೂ ಫಾಗಿಂಗ್ ಮಾಡುವುದನ್ನೂ ಸ್ಥಳೀಯ ಆಡಳಿತ ಮರೆತಿದೆ ಎಂದು ಗ್ರಾಮದ ನಿವಾಸಿಗಳು ಆರೋಪಿಸಿದ್ದಾರೆ.ಸುಮಾರು 20ಕ್ಕೂ ಅಧಿಕ ಜನರಿಗೆ ಜ್ವರದ ಲಕ್ಷಣ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ದೋಟಿಹಾಳ ಹಾಗೂ ಇಲಕಲ್ ನಗರದ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ.
ಗ್ರಾಮದಲ್ಲಿ ಅನೇಕ ಜನರಿಗೆ ಮೈಕೈ ನೋವು ಹಾಗೂ ಜ್ವರದ ಲಕ್ಷಣ ಕಂಡು ಬಂದರೂ ಸಹಿತ ಸಂಬಂಧಪಟ್ಟಂತಹ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರಾಗಿದೆ.ನಿವಾಸಿಗಳಲ್ಲಿ ಆತಂಕ:
ಮೈ,ಕೈ ನೋವು ಹಾಗೂ ಜ್ವರದ ಲಕ್ಷಣಗಳು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿರುವ ಹಿನ್ನೆಲೆ ಡೆಂಘೀ ಜ್ವರ ಇರಬಹುದೆಂದು ಅನುಮಾನ ವ್ಯಕ್ತವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಜ್ವರದ ಲಕ್ಷಣಗಳು ಇರುವಂತವರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ಮೂಲಕ ಗ್ರಾಮಸ್ಥರ ಆತಂಕ ನಿವಾರಿಸಬೇಕಾಗಿದೆ.ಕ್ಯಾದಿಗುಪ್ಪ ಗ್ರಾಮದಲ್ಲಿ ಜನರಿಗೆ ಜ್ವರ ಇರುವುದು ತಿಳಿದಿದ್ದು, ನಮ್ಮ ಇಲಾಖೆಯ ಸಿಬ್ಬಂದಿ ಲಾರ್ವಾ ಸರ್ವೆ ಮಾಡುತ್ತಿದ್ದಾರೆ. ಜ್ವರ ಮೆದುಳಿಗೆ ಏರಿ ಮಂಗಳವಾರ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಇಲಾಖೆಯು ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ ಎಂದು ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂತೋಷಕುಮಾರ ಬಿರಾದಾರ ತಿಳಿಸಿದ್ದಾರೆ.
ಕ್ಯಾದಿಗುಪ್ಪ ಗ್ರಾಮದ ಕೆಲ ಜನರಲ್ಲಿ ಜ್ವರದ ಲಕ್ಷಣಗಳು ಕಂಡು ಬಂದಿರುವುದು ಗಮನಕ್ಕೆ ಇದ್ದು, ಗ್ರಾಪಂ ವತಿಯಿಂದ ಬ್ಲೀಚಿಂಗ್ ಪೌಡರ್ ಹಾಗೂ ಫಾಗಿಂಗ್ ಮಾಡಲಾಗಿದೆ ಎಂದು ಕ್ಯಾದಿಗುಪ್ಪ ಗ್ರಾಪಂ ಪಿಡಿಒ ಶ್ರೀಶೈಲ ಪೋಲೇಸಿ ಹೇಳಿದ್ದಾರೆ.ತೀವ್ರ ಜ್ವರದಿಂದ ಬಾಲಕಿ ಸಾವು, ಗ್ರಾಮಸ್ಥರಲ್ಲಿ ಆತಂಕ:
ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ ಬಾಲಕಿ ತೀವ್ರ ಜ್ವರದಿಂದ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತನುಶ್ರೀ ಮಾನನಗೌಡ ಟೆಂಗುಂಟಿ (11) ಮೃತ ಬಾಲಕಿ.ಬಾಲಕಿಗೆ ಭಾನುವಾರ ಏಕಾಏಕಿ ಜ್ವರ ಕಾಣಿಸಿಕೊಂಡಿದ್ದು, ಇಳಕಲ್ಲ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ವಲ್ಪ ಗುಣಮುಖಳಾದ ಮೇಲೆ ಮನೆಗೆ ಕರೆದುಕೊಂಡು ಬಂದಿದ್ದಾರೆ. ಸೋಮವಾರ ಮತ್ತೆ ವಿಪರೀತ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ದೋಟಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದು, ವೈದ್ಯರು ಆರೋಗ್ಯದ ಸ್ಥಿತಿ ಪರಿಶೀಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಬಾಲಕಿಯ ಪಾಲಕರು ಇಳಕಲ್ ನಗರದ ಖಾಸಗಿ ಆಸ್ಪತ್ರೆಗೆ ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.ನನ್ನ ಮಗಳಿಗೆ ಏಕಾಏಕಿಯಾಗಿ ಬಂದ ಜ್ವರದಿಂದ ಎರಡು ದಿನಗಳಲ್ಲಿಯೇ ಮೃತಪಟ್ಟಿದ್ದು, ನನಗೆ ಏನೂ ತಿಳಿಯದಂತಾಗಿದೆ ಎಂದು ಬಾಲಕಿ ತಂದೆ ಮಾನನಗೌಡ ಟೆಂಗುಂಟಿ ಅಳಲು ತೋಡಿಕೊಂಡರು.23ಕೆಎಸ್‌ಟಿ2 ಬಾಲಕಿ ತನುಶ್ರೀ.