ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸಿದ ಎಲ್ಲಾ ಪಕ್ಷಗಳ ಸರ್ಕಾರಗಳು ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳು- ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಎಲ್ಲ ಸರ್ಕಾರಗಳು ಬಂಡವಾಳಶಾಹಿ ಪರವಾದ ಸರ್ಕಾರಗಳಾಗಿವೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ರಾಜಿ ರಹಿತ ಒಗ್ಗಟ್ಟಿನ ಹೋರಾಟವೊಂದೇ ದಾರಿ ಎಂದು ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕೆ. ಉಮಾ ಕರೆ ನೀಡಿದ್ದಾರೆ.ಕಲಬುರಗಿಯಲ್ಲಿ ಶುಕ್ರವಾರ ಎಐಯುಟಿಯುಸಿಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಬಳಿಕ ಸಾರ್ವಜನಿಕ ಉದ್ಯಾನವನ ಮೈದಾನದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ಕೊರೋನಾ ಸೇರಿದಂತೆ ಹಲವು ಸಂದರ್ಭಗಳಲ್ಲಿನ ಆಶಾ ಸೇವೆ ಸ್ಮರಿಸಿದರು.
ಎಲ್ಲಾ ಪಕ್ಷಗಳ ಸರ್ಕಾರಗಳು ಇದೇ ಬಂಡವಾಳಶಾಹಿಗಳ ಕೃಪಾಕಟಾಕ್ಷದಿಂದ ಅಧಿಕಾರಕ್ಕೆ ಬಂದು ಅವರ ಲಾಭವನ್ನು ಹೆಚ್ಚಿಸಲು ನೀತಿಗಳನ್ನು ತರುತ್ತಿವೆ ಮತ್ತು ದುಡಿಯುವ ಜನತೆಯ ಹಕ್ಕುಗಳನ್ನು ಕಸಿಯುತ್ತಿವೆ. ಆದ್ದರಿಂದ ಆಶಾ ಕಾರ್ಯಕರ್ತೆಯರು ಮತ್ತು ಕಾರ್ಮಿಕ ವರ್ಗ ಈ ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಸಜ್ಜಾಗಬೇಕೆಂದರು.ಆಶಾ ಕಾರ್ಯಕರ್ತೆಯರನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು, ಅಲ್ಲಿಯವರೆಗೆ ಅವರನ್ನು ಕಾರ್ಮಿಕರೆಂದು ಪರಿಗಣಿಸಬೇಕು, ಸೇವಾ ಭದ್ರತೆ ನೀಡಬೇಕು, ಸಾರ್ವಜನಿಕ ಆರೋಗ್ಯದ ಬಜೆಟ್‌ನ್ನು ಹೆಚ್ಚಿಸಬೇಕು. ಸರ್ಕಾರಗಳ ಕೇವಲ ಹೊಗಳಿಕೆಯಿಂದ ಅವರ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದರು.
ಮೆಡಿಕಲ್ ಸರ್ವಿಸ್ ಸೆಂಟರ್‌ನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಸುಧಾ ಕಾಮತ್ ಮಾತನಾಡುತ್ತಾ, ಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ತಾತ್ಕಾಲಿಕ ಭರ್ತಿ, ಈ ಕ್ಷೇತ್ರದಲ್ಲಿ ದುಡಿಯುವ ಎಲ್ಲರಿಗೂ ಆರ್ಥಿಕ-ಸಾಮಾಜಿಕ ಭದ್ರತೆ ಜೊತೆಗೆ ಬದುಕಿನ ಭದ್ರತೆ ಒದಗಿಸಬೇಕಾಗಿದೆ ಎಂದು ಸರ್ಕಾರಗಳನ್ನು ಆಗ್ರಹಿಸಿದರು.ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್ ಮಾತನಾಡಿದರು.
ಸಮ್ಮೇಳನದ ಅಂಗವಾಗಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಗುಲಾಬಿ ಯೋಧರಾದ ಆಶಾ ಕಾರ್ಯಕರ್ತೆಯರ ಬೃಹತ್ ಮೆರವಣಿಗೆಯು ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಸಾಗಿ, ವೀರಶೈವ ಕಲ್ಯಾಣ ಮಂಟಪದ ಎದುರಿನ ಪಾರ್ಕ್‌ನ ಮೈದಾನದವರೆಗೆ ನಡೆಯಿತು.ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ, ಸಂಘದ ರಾಜ್ಯ ಉಪಾಧ್ಯಕ್ಷರಾದ ರಮಾ ಟಿ.ಸಿ ಆಶಾ ಕಾರ್ಯಕರ್ತೆಯರಿಗೆ ಕ್ರಾಂತಿಕಾರಿ ಶುಭಾಷಯ ಹೇಳುತ್ತಾ ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷರಾದ ಕಾ.ಕೆ.ರಾಧಾಕೃಷ್ಣ ಅವರು ಕ್ರಾಂತಿಕಾರಿ ಶುಭಾಷಯ ಕೋರಿದ ಸಂದೇಶ ಓದಿದರು.
ಸಂಘದ ರಾಜ್ಯ ಕಾರ್ಯದರ್ಶಿಗಳಾದ ಡಿ. ನಾಗಲಕ್ಷ್ಮಿಯವರು ಬಹಿರಂಗ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿ ಬಹಿರಂಗ ಅಧಿವೇಶನದ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯ ಮೇಲೆ ಎಐಎಂಎಸ್‌ಎಸ್ ಮಹಿಳಾ ಸಂಘದ ರಾಜ್ಯ ಕಾರ್ಯದರ್ಶಿ ಶೋಭಾ ಎಸ್ ,ಸಂಘದ ರಾಜ್ಯ ಸಮಿತಿಯ ಇತರೆ ಸದಸ್ಯರು ಉಪಸ್ಥಿತರಿದ್ದರು. 2 ದಿನಗಳ ಕಾಲ ಸಂಘಟನೆಯ ವಿಚಾರ ಸಂಕಿರಣ ಕಲಬುರಗಿಯಲ್ಲಿ ನಡೆಯಲಿದೆ.