ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಜನಪರ ಯೋಜನೆಗಳಿಂದಾಗಿ ಭಾರತವು ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸುತ್ತಿದೆ.

ಕನ್ನಡಪ್ರಭ ವಾರ್ತೆ ಗದಗ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಜನಪರ ಯೋಜನೆಗಳಿಂದಾಗಿ ಭಾರತವು ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಎಪಿಎಂಸಿ ಯಾರ್ಡನಲ್ಲಿರುವ ಶ್ರೀಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬ-ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮಂತ್ರಾಲಯ ಭಾರತ ಸರಕಾರ ಏರ್ಪಡಿಸಿದ್ದ ಸಾಮಾಜಿಕ ಅಧಿಕಾರಿತ ಶಿಬಿರದ ಎಡಿಐಪಿ ಯೋಜನೆಯಲ್ಲಿ ವಿಶೇಷಚೇತನರಿಗೆ ಸಾಧನಾ-ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದಿವ್ಯಾಂಗರಿಗೆ ನೆರವಾಗುವ ನಿಟ್ಟಿನಲ್ಲಿ ಈ ಮಹತ್ವದ ಜನಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿವ್ಯಾಂಗರು ತಮ್ಮ ದೈನಂದಿನ ಜೀವನದಲ್ಲಿ ವಿವಿಧ ನ್ಯೂನ್ಯತೆಗಳು ಹಾಗೂ ತೊಂದರೆಗಳನ್ನು ಅನುಭವಿಸುತ್ತಿದ್ದರೂ, ಪ್ರತಿಯೊಬ್ಬರಲ್ಲೂ ವಿಶೇಷವಾದ ಪ್ರತಿಭೆ ಇರುತ್ತದೆ. ದೇವರು ಕೆಲವೊಮ್ಮೆ ಕೊರತೆಗಳನ್ನು ನೀಡಿದರೂ ಅದಕ್ಕೆ ಸರಿಹೊಂದುವಂತೆ ದೊಡ್ಡ ಪ್ರತಿಭೆಯನ್ನು ಕರುಣಿಸಿರುತ್ತಾನೆ ಎಂದರು.

ದಿವ್ಯಾಂಗರು ಯಾರಿಗೂ ಕಡಿಮೆ ಇಲ್ಲ. ಸಮಾಜದಲ್ಲಿ ನಿಮ್ಮನ್ನು ದೇವರ ಮಕ್ಕಳು ಎಂದು ಕರೆಯಲಾಗುತ್ತದೆ. ದಿವ್ಯಾಂಗರು ತಮ್ಮ ಆತ್ಮಸ್ಥೈರ್ಯವನ್ನು ಗಟ್ಟಿಯಾಗಿಟ್ಟುಕೊಂಡು ಮುನ್ನಡೆದರೆ ಬದುಕಿನಲ್ಲಿ ಬೆಳಕು, ಪ್ರಗತಿ ಮತ್ತು ಯಶಸ್ಸನ್ನು ಕಾಣಬಹುದು. ಸಮಾಜದ ಪರಿಪೂರ್ಣತೆಗೆ ದಿವ್ಯಾಂಗರ ಕೊಡುಗೆ ಅತ್ಯಮೂಲ್ಯವಾಗಿದ್ದು, ಯಾವುದೇ ಕಷ್ಟದ ಪರಿಸ್ಥಿತಿಯಲ್ಲೂ ಆತ್ಮವಿಶ್ವಾಸದಿಂದ ಬದುಕು ರೂಪಿಸಿಕೊಳ್ಳುವಂತೆ ಹೇಳಿದರು.

ದೇಶಾದ್ಯಂತ ಸುಮಾರು 4 ಕೋಟಿ ಮನೆಗಳ ನಿರ್ಮಾಣ ಮಾಡಲಾಗಿದೆ. 12 ಕೋಟಿ ಶೌಚಾಲಯಗಳ ನಿರ್ಮಾಣ ಕೈಗೊಳ್ಳಲಾಗಿದೆ. ಸುಮಾರು 60 ಕೋಟಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಉಜ್ವಲಾ ಯೋಜನೆ ಅಡಿಯಲ್ಲಿ ಎಲ್ಲಾ ಮನೆಗಳಿಗೆ ಎಲ್ಪಿಜಿ ಗ್ಯಾಸ್ ಸಂಪರ್ಕ ನೀಡುವ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಮೋದಿ ಸರ್ಕಾರದಡಿ 80 ಕೋಟಿ ಜನರಿಗೆ ತಲಾ 5 ಕೆಜಿ ಉಚಿತ ಅಕ್ಕಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಅನ್ನ, ನೀರು, ಆಹಾರ, ಆಶ್ರಯ ಮತ್ತು ಎಲ್ಲರಿಗೂ ಉದ್ಯೋಗ ಕಲ್ಪಿಸುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ. ಸರ್ಕಾರದ ಈ ಜನಪರ ಕಾರ್ಯಕ್ರಮಗಳ ಫಲವಾಗಿ ಸುಮಾರು 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ. ಪ್ರಸ್ತುತ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಶೇ.7.8ರಷ್ಟು ಬೆಳವಣಿಗೆಯೊಂದಿಗೆ ಮುಂಚೂಣಿಯಲ್ಲಿದೆ. ಹಿಂದೆ 11ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆಯು, ಪ್ರಧಾನಿ ಮೋದಿಯವರ ಆಡಳಿತದಲ್ಲಿ ಪ್ರಸ್ತುತ ವಿಶ್ವದ 4ನೇ ಸ್ಥಾನಕ್ಕೇರಿದೆ. ಮುಂಬರುವ ಎರಡು ವರ್ಷಗಳಲ್ಲಿ ಭಾರತವು ವಿಶ್ವದ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ವಿಪ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ಎಸ್.ಎನ್., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿ ಉಪ ನಿರ್ದೇಶಕಿ ರಾಧಾ ಮಣ್ಣೂರ ಸೇರಿ ಹಲವರು ಇದ್ದರು.