ಸಾರಾಂಶ
ತೀರ್ಥಹಳ್ಳಿ: ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಪಟ್ಟಣ ಪಂಚಾಯ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ನಿಂತ ನೀರಾಗಿದ್ದು ಅಧ್ಯಕ್ಷರು ಪಕ್ಷಪಾತ ಧೋರಣೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಕೆಲಸಗಳೂ ಸುಗಮವಾಗಿ ನಡೆಯುತ್ತಿಲ್ಲಾ ಎಂದು ಆರೋಪಿಸಿ ಮಂಗಳವಾರ ಬಿಜೆಪಿ ಸದಸ್ಯರು ಪಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಪಪಂಯ ಹಿರಿಯ ಸದಸ್ಯ ಸಂದೇಶ್ ಜವಳಿ, ಪಟ್ಟಣದ ಜನತೆಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಪಪಂಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸಲಾಗುತ್ತಿದೆ. ಕಳೆದ 22 ವರ್ಷಗಳ ಕಾಲ ನಿರಂತರವಾಗಿ ಬಿಜೆಪಿ ಆಡಳಿತ ನಡೆಸಿದ್ದು, ಜನರು ಬದಲಾವಣೆಯನ್ನು ಬಯಸಿದ ಕಾರಣ ಅಧಿಕಾರಕ್ಕೆ ಬಂದಿರುವ ಈ ಕೌನ್ಸಿಲ್‍ನ ಅಧ್ಯಕ್ಷರು ಪ್ರತಿಪಕ್ಷದ ಸದಸ್ಯರು ಪ್ರತಿನಿಧಿಸುವ ವಾರ್ಡ್‍ಗಳನ್ನು ಕಡೆಗಣಿಸುತ್ತಿದ್ದಾರೆ. ಈ ಧೋರಣೆಯನ್ನು ಬದಲಿಸಿಕೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು. ಕಳೆದ ಮೂರು ವರ್ಷಗಳಿಂದ ಅಬಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದ್ದು, ರಾಜ್ಯ ಸರ್ಕಾರದಿಂಲೂ ಈ ವರೆಗೆ ಯಾವುದೇ ಅನುದಾನ ಬಂದಿಲ್ಲಾ. ಸ್ಥಳೀಯವಾಗಿ ಸಂಗ್ರಹವಾಗುವ ಸುಮಾರು ಐದು ಕೋಟಿ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸದೆ ಅನಗತ್ಯವಾಗಿ ವೆಚ್ಚ ಮಾಡಲಾಗುತ್ತಿದೆ. ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ದೂರಿದರು. ಪಪಂ ಕಚೇರಿಯಲ್ಲಿ ಅಧ್ಯಕ್ಷರ ಗಮನಕ್ಕೆ ಬಾರದೇ ಸಾರ್ವಜನಿಕರ ಯಾವುದೇ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲಾ. ನೀರಿನ ತೆರಿಗೆ ಸಂಗ್ರಹದಲ್ಲಿ ಸೋರಿಕೆಯಾಗುತ್ತಿದ್ದರೂ ಈ ಗಮನ ಹರಿಸುತ್ತಿಲ್ಲಾ. ರಂಗಮಂದಿರ ನಿರ್ವಹಣೆ ಇಲ್ಲದೇ ಗಬ್ಬೆದ್ದು ಹೋಗಿದೆ. ಕೌನ್ಸಿಲ್ ಒಪ್ಪಿಗೆ ಪಡೆಯದೇ ಸಾವಿರಾರು ರುಗಳನ್ನು ಅನಗತ್ಯ ಕಾರ್ಯಗಳಿಗೆ ವೆಚ್ಚ ಮಾಡಲಾಗುತ್ತಿದೆ. ಟೆಂಡರ್ ಕರೆಯದೇ ತಮ್ಮವರಿಗೆ ಕೆಲಸ ನೀಡಲಾಗುತ್ತಿದ್ದು ಅಧಿಕಾರಿಗಳು ಕೂಡಾ ಭಯದಿಂದ ಕೆಲಸ ಮಾಡುವಂತಾಗಿದೆ ಎಂದೂ ಆರೋಪಿಸಿದರು.ಪಪಂಯ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿ, ಅಧ್ಯಕ್ಷರು ಕೇವಲ ಪ್ರಚಾರ ಪ್ರಿಯರಾಗಿದ್ದು ಪಪಂಯಲ್ಲಿ ಯಾವುದೇ ಕೆಲಸವೂ ನಡೀತಿಲ್ಲಾ. ಹೀಗಾಗಿ ಜನ ನಮ್ಮನ್ನು ಸತ್ತಿದೀರಾ ಅಂತ ಕೇಳ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸದಸ್ಯ ನವೀನ್ ಯತಿರಾಜ್, ಸ್ವಚ್ಛ ಪಟ್ಟಣ ಖ್ಯಾತಿಗೇ ಕುಂದು ಬರುವಂತಾಗಿದೆ. ಬೆಟ್ಟಮಕ್ಕಿಯಲ್ಲಿ ಕಳೆ ತೆಗೆದು ತಿಂಗಳಾದರೂ ಈ ವರೆಗೂ ಕ್ಲೀನ್ ಮಾಡಿಲ್ಲಾ. ಎಚ್‍ಐ ಫೋನ್ ಎತ್ತಲ್ಲಾ. ಈವರೆಗೆ ಒಂದೇ ಒಂದು ಒಳ್ಳೆ ಕೆಲಸ ಪಪಂ ಕಡೆಯಿಂದ ಆಗಿಲ್ಲಾ ಎಂದು ದೂರಿದರು.ಜ್ಯೋತಿ ಮೋಹನ್ ಮತ್ತು ಜ್ಯೋತಿ ಗಣೇಶ್, ರವೀಶ್ ಭಟ್, ಬಿಜೆಪಿ ಜಿಲ್ಲಾ ಯುವ ಮೊರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ ಮಾತನಾಡಿದರು.
ಪಪಂ ಮಾಜಿ ಸದಸ್ಯರುಗಳಾದ ವೆಂಕಟೇಶ ಪಟವರ್ಧನ್, ಟಿ.ಎನ್.ಅನಿಲ್, ರಾಜೀವನ್ ಮುಂತಾದವರು ಇದ್ದರು.