ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ ಬಜೆಟ್‌ನಲ್ಲಿ ಬೃಹತ್ ಕಾಮಗಾರಿಗಳ ಜತೆಗೆ, ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದವ ವರ್ಗದವರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಘೋಷಿಸಲಾಗಿದೆ. ಬ್ರ್ಯಾಂಡ್ ಬೆಂಗಳೂರಿ ನೆರಳಲ್ಲೇ ಬಿಬಿಎಂಪಿ ಬಜೆಟ್ ಮೂಲಕ ಲೋಕಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ಸಾಕಷ್ಟು ಒತ್ತು ನೀಡಲಾಗಿದೆ.ಚುನಾವಣೆ ಹತ್ತಿರದಲ್ಲಿಟ್ಟುಕೊಂಡು ಮಂಡಿಸಲಾಗುವ ಯಾವುದೇ ಬಜೆಟ್ ಮತದಾರರಿಗೆ ಹತ್ತಿರವಾಗುವಂತಹ ಯೋಜನೆಗಳನ್ನು ಘೋಷಿಸಲಾಗುತ್ತದೆ. ಬಿಬಿಎಂಪಿ ಬಜೆಟ್‌ನಲ್ಲೂ ಅದು ಮರುಕಳಿಸಿದ್ದು, ಮತದಾರರಿಗೆ ಹತ್ತಿರವಾಗುವಂತಹ ಯೋಜನೆಗಳನ್ನು ಘೋಷಿಸಲಾಗಿದೆ. ಸಾರ್ವಜನಿಕ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವುದರ ಜತೆಗೆ, ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಹಾಗೆಯೇ, ಸುರಂಗ ರಸ್ತೆ, ಸ್ಕೈಡೆಕ್, ವೈಟ್ ಟಾಪಿಂಗ್‌ನಂತಹ ಬೃಹತ್ ಯೋಜನೆಗಳನ್ನು ಘೋಷಿಸಲಾಗಿದೆ. ಆಸ್ತಿ ತೆರಿಗೆ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾದಂತಹ ಯೋಜನೆ ಘೋಷಿಸಿ 15 ಲಕ್ಷ ಆಸ್ತಿದಾರರನ್ನು ಸೆಳೆಯುವ ಕೆಲಸವನ್ನೂ ಮಾಡಲಾಗಿದೆ.ಪಾಲಿಕೆಗೆ ನಷ್ಟ ಮಾಡಿಕೊಂಡು ದಂಡ ಮತ್ತು ಬಡ್ಡಿ ಮನ್ನಾ
ಆಸ್ತಿ ತೆರಿಗೆ ಬಾಕಿ ಹಾಗೂ ಸ್ವಯಂಘೋಷಿತ ಆಸ್ತಿ ಪದ್ಧತಿ (ಎಸ್‌ಎಎಸ್) ಅಡಿಯಲ್ಲಿ ತಪ್ಪು ಮಾಹಿತಿ ನೀಡಿದವರಿಗೆ ಬಿಬಿಎಂಪಿಯಿಂದ ದುಬಾರಿ ದಂಡ ಮತ್ತು ಬಡ್ಡಿ ವಿಧಿಸಲಾಗುತ್ತಿತ್ತು. ಇದಕ್ಕೆ ನಗರದ ಆಸ್ತಿ ಮಾಲೀಕರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ದಂಡ ಮತ್ತು ಬಡ್ಡಿ ಮನ್ನಾ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಬಿಬಿಎಂಪಿ ಕಾಯ್ದೆಗೆ ತಿದ್ದುಪಡಿಯನ್ನೂ ತಂದಿತ್ತು. ಆ ಕ್ರಮವನ್ನು ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಅದರಿಂದ 15 ಲಕ್ಷ ಆಸ್ತಿಗಳ ತೆರಿಗೆ ಬಾಕಿದಾರರಿಗೆ ಅನುಕೂಲವಾಗಲಿದೆ.ಆದರೆ, ಬಿಬಿಎಂಪಿಗೆ ಮಾತ್ರ ₹2,500 ಕೋಟಿ ಆದಾಯ ಖೋತಾ ಆಗಲಿದೆ. ಅದರ ಜತೆಗೆ ಮಾರ್ಗಸೂಚಿ ದರದಂತೆ ಆಸ್ತಿಗಳ ವಲಯ ವರ್ಗೀಕರಣದಂತಹ ಕ್ರಮದ ಮೂಲಕ ಆಸ್ತಿಗಳ ಮೌಲ್ಯ ಹೆಚ್ಚುವಂತೆಯೂ ಮಾಡಲಾಗಿದೆ. ಹೀಗೆ ನಗರದಲ್ಲಿನ 20 ಲಕ್ಷಕ್ಕೂ ಹೆಚ್ಚಿನ ಆಸ್ತಿ ಮಾಲೀಕರನ್ನು ಸೆಳೆಯಲು ಬೇಕಾಗುವ ಕ್ರಮಗಳನ್ನು ಘೋಷಿಸಲಾಗಿದೆ.ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು
ಚುನಾವಣೆ ಸಂದರ್ಭದಲ್ಲಿ ರಸ್ತೆ ದುರಸ್ತಿಗೆ ಒತ್ತು ನೀಡಲಾಗಿದೆ. ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳ ಅಡಿಯಲ್ಲಿ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಜತೆಗೆ ವಾರ್ಡ್ ರಸ್ತೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗಾಗಿಯೇ ಬಜೆಟ್‌ನಲ್ಲಿ ₹7280 ಕೋಟಿ ಮೀಸಲಿರಿಸಲಾಗಿದ್ದು, ಅದರಲ್ಲಿ ಆಡಳಿತಾತ್ಮಕ ವೆಚ್ಚವನ್ನು ಹೊರತುಪಡಿಸಿ ₹6,661 ಕೋಟಿಗಳನ್ನು ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಳಸಲಾಗುವುದು ಎಂದು ಹೇಳಲಾಗಿದೆ.ಬೃಹತ್ ಯೋಜನೆಗಳು,ಕಲ್ಯಾಣ ಕಾರ್ಯಕ್ರಮ
ನಗರ ಪ್ರಮುಖ ಸಮಸ್ಯೆಯಾದ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ, ವೈಟ್‌ಟಾಪಿಂಗ್‌ನಂತಹ ಬೃಹತ್ ಯೋಜನೆಗಳನ್ನು ಘೋಷಿಸುವ ಜತೆಜತೆಗೆ ಪೌರಕಾರ್ಮಿಕರಿಗೆ ಪಿಂಚಣಿ ವ್ಯವಸ್ಥೆ ಜಾರಿಯಂತಹ ಕಲ್ಯಾಣ ಕಾರ್ಯಕ್ರಮವನ್ನೂ ಘೋಷಿಸಲಾಗಿದೆ. ಆ ಮೂಲಕ ಮಧ್ಯಮ ಮತ್ತು ಶ್ರೀಮಂತ ವರ್ಗದವರಿಗೆ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂಬ ಭರವಸೆ ಮೂಡುವಂತೆ ಮಾಡಲಾಗಿದೆ. ಹಾಗೆಯೇ, ಪೌರಕಾರ್ಮಿಕರಿಗೆ ಪಿಂಚಣಿ ವ್ಯವಸ್ಥೆ, ಬೀದಿಬದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ರಿಕ್ಷಾ ಖರೀದಿಗೆ ಸಬ್ಸಿಡಿ, ಮಂಗಳಮುಖಿಯರಿಗೆ ವಾಹನ ಖರೀದಿಗೆ ನೆರವು, 50 ಹೊಸ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ ಹೀಗೆ ಹಲವು ಕಾರ್ಯಕ್ರಮಗಳನ್ನು ಘೋಷಿಸಿದ್ದು, ಬಡ ವ್ಯಾಪಾರಿ ವಲಯವನ್ನು ಸೆಳೆಯುವ ಕೆಲಸ ಮಾಡಲಾಗಿದೆ.