ಭೂಗತ ಕೇಬಲ್ ಅಳವಡಿಕೆ ಕಾಮಗಾರಿಗೆ ಚಾಲನೆ

| Published : Jan 04 2025, 12:33 AM IST

ಸಾರಾಂಶ

ಹೊಸಕೋಟೆ: ರಾಜ್ಯದಲ್ಲೇ ಪ್ರಥಮ ಬಾರಿಗೆ 100 ಕೋಟಿ ರು. ವೆಚ್ಚದಲ್ಲಿ 67 ಮೆಗಾವ್ಯಾಟ್‌ ವಿದ್ಯುತ್ ಸರಬರಾಜು ಸಾಮರ್ಥ್ಯದ ಭೂಗತ ಕೇಬಲ್ ಅಳವಡಿಸಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ: ರಾಜ್ಯದಲ್ಲೇ ಪ್ರಥಮ ಬಾರಿಗೆ 100 ಕೋಟಿ ರು. ವೆಚ್ಚದಲ್ಲಿ 67 ಮೆಗಾವ್ಯಾಟ್‌ ವಿದ್ಯುತ್ ಸರಬರಾಜು ಸಾಮರ್ಥ್ಯದ ಭೂಗತ ಕೇಬಲ್ ಅಳವಡಿಸಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲಿಂಗ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಸ್ತುತ ಹೊಸಕೋಟೆ ನಗರದಲ್ಲಿ 34 ಮೆಗಾವ್ಯಾಟ್ ವಿದ್ಯುತ್ ಸರಬರಾಜಿನ ಬೇಡಿಕೆ ಇದ್ದು, 30 ಮೆಗಾ ವ್ಯಾಟ್‌ ಸಾಮರ್ಥ್ಯದ ಕೇಬಲ್ ಅಳವಡಿಸಿರುವ ಪರಿಣಾಮ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಗಳು ಉಂಟಾಗುತ್ತಿತ್ತು. ಆದರೆ ಈಗ ಮುಂದಿನ 20 ವರ್ಷಗಳ ಅವಧಿಯ ವಿದ್ಯುತ್ ಸರಬರಾಜಿನ ಆದ್ಯತೆಯನ್ನು ಪರಿಗಣಿಸಿ 67 ಮೆಗಾವ್ಯಾಟ್ ವಿದ್ಯುತ್ ಸರಬರಾಜಿನ ಸಾಮರ್ಥ್ಯದ ಭೂಗತ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ನನ್ನ ಮನವಿ ಮೇರೆಗೆ ಇಂಧನ ಸಚಿವ ಕೆಜೆ ಜಾರ್ಚ್ ಅವರು 100 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ. ಜೊತೆಗೆ 220 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸುತ್ತಿದ್ದೇವೆ. ಅಡಚಣೆ ರಹಿತ ವಿದ್ಯುತ್ ಪ್ರಸರಣದ ಜೊತೆಗೆ ಸೋರಿಕೆ ತಡೆಯುವುದು, ವಿದ್ಯುತ್ ಅಪಘಾತಗಳನ್ನು ತಡೆಯುವುದು ಹಾಗೂ ಮರದ ಕೊಂಬೆಗಳಿಗೆ ವಿದ್ಯುತ್ ತಂತಿಗಳು ತಾಗುವ ಪ್ರಮೇಯಗಳಿರುವುದಿಲ್ಲ ಎಂದು ಹೇಳಿದರು.

ಸರ್ಕಾರದ ಖಜಾನೆ ಖಾಲಿ ಆಗಿಲ್ಲ:

ರಾಜ್ಯದಲ್ಲಿ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಬಿಜೆಪಿಯವರು ಟೀಕೆ ಮಾಡುತಿದ್ದು ಸತ್ಯಕ್ಕೆ ದೂರವಾದ ಮಾತು. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ನಂತರ ತಾಲೂಕಿನ ಕೆರೆಗಳಿಗೆ 43 ಎಂಎಲ್‌ಡಿ ನೀರು ಹರಿಸುವ ಯೋಜನೆ ಜಾರಿ, 40 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆ, ಅದರ ಪಕ್ಕದಲ್ಲಿ 40 ಕೋಟಿ ವೆಚ್ಚದಲ್ಲಿ ನೂರು ಬೆಡ್‌ಗಳ ಜಿಲ್ಲಾಸ್ಪತ್ರೆಗೆ ಭೂಮಿಪೂಜೆ ನೆರವೇರಿಸಬೇಕಿದೆ. ಕೊರಳೂರು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 100 ಕೋಟಿ ಸಂಪುಟ ಅನುಮೋದನೆ ದೊರೆತಿದೆ. 25 ಎಕರೆ ಜಾಗದಲ್ಲಿ ಎಪಿಎಂಸಿ ನಿರ್ಮಾಣ, 10 ಕೋಟಿ ವೆಚ್ಚದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ನಿರ್ಮಾಣ, 12 ಕೋಟಿ ವೆಚ್ಚದಲ್ಲಿ ಸ್ಥಗಿತಗೊಂಡಿದ್ದ ದೇವನಗುಂದಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭ, 40 ಕೋಟಿ ವೆಚ್ಚದಲ್ಲಿ ಚಿಂತಾಮಣಿ ರಸ್ತೆ ಹಾಗೂ 20 ಕೋಟಿ ವೆಚ್ಚದಲ್ಲಿ ನಗರೇನಹಳ್ಳಿ ರಸ್ತೆ ಅಭಿವೃದ್ದಿ, ನಗರದಲ್ಲಿ ಅರ್ಧಕ್ಕೆ ನಿಂತಿದ್ದ ಒಳಚರಂಡಿ ಕಾಮಗಾರಿ ಮುಂದುವರಿಕೆಗೆ 30 ಕೋಟಿ ಹಾಗೂ ಎ ದರ್ಜೆಯ ತಾಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ 20 ಕೋಟಿ. ಹೀಗೆ ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿದೆ. ಅಲ್ಲದೆ ಪಂಚ ಭಾಗ್ಯಗಳಿಂದ 2023-24ರ ಸೆಪ್ಟಂಬರ್‌ವರೆಗೆ ಪಂಚ ಭಾಗ್ಯ ಯೋಜನೆಯಲ್ಲಿ ತಾಲೂಕಿನ ಫಲಾನುಭವಿಗಳಿಗೆ 250 ಕೋಟಿ ವೆಚ್ಚದ ಸವಲತ್ತು ನೀಡಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ಮಾತನಾಡಿ, ಯಾವುದೇ ಯೋಜನೆಗಳು ಸಾಕಾರವಾಗಬೇಕಾದರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಮನ್ವಯತೆ ಸಹಕಾರ ಅಗತ್ಯ. ಅದೇ ರೀತಿ ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಯಾವ ಜಿಲ್ಲಾ ಕೇಂದ್ರಗಳಲ್ಲೂ ಇನ್ನೂ ಭೂಗತ ಕೇಬಲ್ ಅಳವಡಿಕೆ ಸಂಪೂರ್ಣವಾಗಿಲ್ಲ. ಇದರ ನಡುವೆ ಶಾಸಕ ಶರತ್ ಬಚ್ಚೇಗೌಡರು ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಸಾಧಿಸಿ ಸರ್ಕಾರದ ಮಟ್ಟದಲ್ಲಿ 100 ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಮರ್ಪಕ ವಿದ್ಯುತ್ ಸರಬರಾಜಿನಲ್ಲಿ ಹೊಸಕೋಟೆ ಮಾದರಿಯಾಗಲಿದೆ ಎಂದು ತಿಳಿಸಿದರು.

ಈ ವೇಳೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್ ಮೂರ್ತಿ, ನಿರ್ದೇಶಕರಾದ ಡಾ.ಎಚ್.ಎಂ ಸುಬ್ಬರಾಜ್, ಕೊರಳೂರು ಸುರೇಶ್, ನಗರಸಭೆ ಸದಸ್ಯ ಗೌತಮ್, ಮುಖಂಡರಾದ ಬಿ.ವಿ.ಬೈರೇಗೌಡ, ರುದ್ರಾರಾದ್ಯ, ಟಿ.ಎಸ್.ರಾಜಶೇಖರ್, ಸಿ ಮುನಿಯಪ್ಪ, ಎಇಇ ಪುಟ್ಟಸ್ವಾಮಿ ಇತರರು ಹಾಜರಿದ್ದರು.

ಫೋಟೋ: 3 ಹೆಚ್‌ಎಸ್‌ಕೆ 1

ಹೊಸಕೋಟೆಯ ನಗರದ ವಿದ್ಯುತ್ ವಿತರಣಾ ಕೇಂದ್ರದ ಅವರಣದಲಿ ್ಲನೂರು ಕೋಟಿ ರೂ ವೆಚ್ಚದಲ್ಲಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.