ಸಾರಾಂಶ
ತಾಲೂಕಿನ ಸುಂಬಡ ಗ್ರಾಮದಲ್ಲಿ ಇರುವ ವಿದ್ಯುತ್ ಕಂಬಗಳಿಗೆ ಗಿಡಗಂಟಿ, ಬಳ್ಳಿ ಸುತ್ತಿಕೊಂಡಿದ್ದರೂ ಏಕೆ ತೆರವು ಮಾಡುತ್ತಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಯಡ್ರಾಮಿ
ತಾಲೂಕಿನ ಸುಂಬಡ ಗ್ರಾಮದಲ್ಲಿ ಇರುವ ವಿದ್ಯುತ್ ಕಂಬಗಳಿಗೆ ಗಿಡಗಂಟಿ, ಬಳ್ಳಿ ಸುತ್ತಿಕೊಂಡಿದ್ದರೂ ಏಕೆ ತೆರವು ಮಾಡುತ್ತಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಕಂಬಗಳಿಗೆ ಗಿಡ-ಮರಗಳ ರಂಬೆ-ಕೊಂಬೆ ಸುತ್ತಿಕೊಂಡರೆ ಜೆಸ್ಕಾಂ ಸಿಬ್ಬಂದಿ ಕಟಾವು ಮಾಡಿ ಮುಂದಾಗುವ ವಿದ್ಯುತ್ ಅವಘಡ ತಪ್ಪಿಸಬೇಕು. ಆದರೆ ಸುಂಬಡ ಗ್ರಾಮದಲ್ಲಿ ಇರುವ ವಿದ್ಯುತ್ ಕಂಬಗಳಿಗೆ ಗಿಡಗಂಟಿ, ಬಳ್ಳಿ ಆವರಿಸಿಕೊಂಡಿದ್ದರೂ ನಮಗೂ, ಅದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.ಮುಂಗಾರು ಮಳೆಯಿಂದಾಗಿ ಗಿಡ-ಮರಗಳು ಸಮೃದ್ಧಿಯಾಗಿ ಬೆಳೆದಿವೆ. ಅದರಂತೆ ಸುಂಬಡ ಗ್ರಾಮದಿಂದ ಮಳ್ಳಿ ಗ್ರಾಮಕ್ಕೆ ಹೋಗುವ ಮುಖ್ಯ ಕೂಡು ರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬಗಳಿಗೆ ಗಿಡ- ಗಂಟೆ, ಬಳ್ಳಿಗಳು ಹಬ್ಬಿಕೊಂಡು ನಿಂತಿವೆ. ಈ ರಸ್ತೆಯಲ್ಲಿ ವಾಹನಗಳು, ಸಾರ್ವಜನಿಕರು ಪ್ರತಿನಿತ್ಯ ಓಡಾಡುತ್ತಿದ್ದಾರೆ. ಅಲ್ಲದೇ ಶಾಲಾ ಆವರಣದಲ್ಲಿ ವಿದ್ಯುತ್ ಪರಿವರ್ತಕ ಕಂಬಗಳು ಇರುವುದರಿಂದ ವಿದ್ಯುತ್ ಪೂರೈಕೆ ಸಂದರ್ಭದಲ್ಲಿ ಶಾರ್ಟ್‌ಕ್ಯೂರ್ಟ್ ಆಗಿ ಬೆಂಕಿಯ ಕಿಡಿಗಳು ಬೀಳುತ್ತಿದ್ದರೂ ಜೆಸ್ಕಾಂ ಸಿಬ್ಬಂದಿಗೆ ಕಾಣುತ್ತಿಲ್ಲವೇ ಎಂದು ಜನರು ಪ್ರಶ್ನಿಸಿದ್ದಾರೆ.
ಗ್ರಾಮದಲ್ಲಿ ವಿದ್ಯುತ್ ಕಂಬಗಳು ಇದ್ದು ಇಲ್ಲಿ ನಿತ್ಯ ಶಾಲಾ ಮಕ್ಕಳು, ಪೋಷಕರು ಶಾಲೆಗೆ ಬಂದು, ಹೋಗುತ್ತಾರೆ. ಆಕಸ್ಮಾತ್ ಜಾನುವಾರು, ಕುರಿಗಳು ಮೇಯಲು ಹೋದರೆ ಅಥವಾ ಶಾಲಾ ಮಕ್ಕಳು ಹೋದರೆ ವಿದ್ಯುತ್ ಅವಘಡದಿಂದ ಸಾವು- ನೋವು ಸಂಭವಿಸುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.