ರಸ್ತೆ ಇಕ್ಕೆಲದಲ್ಲಿ ಬೆಳೆದು ನಿಂತ ಗಿಡಗಂಟಿ: ಸಂಚಾರಕ್ಕೆ ಸಂಚಕಾರ

| Published : Jun 14 2024, 01:00 AM IST

ರಸ್ತೆ ಇಕ್ಕೆಲದಲ್ಲಿ ಬೆಳೆದು ನಿಂತ ಗಿಡಗಂಟಿ: ಸಂಚಾರಕ್ಕೆ ಸಂಚಕಾರ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಸರಿಯಾಗಿ ಕಾಣದೇ ನಿತ್ಯ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ.

ಬಿ.ಎಚ್.ಎಂ.ಅಮರನಾಥ ಶಾಸ್ತ್ರಿ

ಕಂಪ್ಲಿ: ತಾಲೂಕಿನ ರಾಮಸಾಗರ ಗ್ರಾಮದಲ್ಲಿನ ರಸ್ತೆ ಪಕ್ಕದಲ್ಲಿ ಗಿಡ-ಗಂಟಿಗಳು ಬೆಳೆದು ರಸ್ತೆ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಈ ಕುರಿತು ಅಧಿಕಾರಿಗಳು ಗಮನಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಾಮಸಾಗರ ಗ್ರಾಮದಿಂದ ಹಿಡಿದು ಬುಕ್ಕಸಾಗರ ಗ್ರಾಮದವರೆಗೂ ಸುಮಾರು 5 ಕಿ.ಮೀ. ರಸ್ತೆಯ ಪಕ್ಕದಲ್ಲಿ ಜಾಲಿ ಗಿಡಗಳು ಸೇರಿದಂತೆ ಇತರೆ ಗಿಡ-ಗಂಟಿಗಳು ಬೆಳೆದು ರಸ್ತೆಯುದ್ದಕ್ಕೂ ಚಾಚಿಕೊಂಡಿವೆ. ರಸ್ತೆ ಸರಿಯಾಗಿ ಕಾಣದೇ ನಿತ್ಯ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. ಇನ್ನು ಈ ರಸ್ತೆ ಗುಡ್ಡಗಾಡು ಪ್ರದೇಶದಲ್ಲಿದ್ದು, ಹಲವು ತಿರುವುಗಳನ್ನು ಒಳಗೊಂಡಿದೆ. ರಸ್ತೆಯುದ್ದಕ್ಕೂ ಚಾಚಿ ಬೆಳೆದುಕೊಂಡಿರುವ ಗಿಡಗಳಿಂದಾಗಿ ರಸ್ತೆ ತಿರುವಿನ ನಾಮಫಲಕಗಳು, ಗ್ರಾಮದ ಹೆಸರಿನ ನಾಮಫಲಕ ಹಾಗೂ ಕಿ.ಮೀ. ಕಲ್ಲು ಕಾಣದಂತಾಗಿದೆ.

ಈಚೆಗೆ ರಸ್ತೆ ತಿರುವು ಕಾಣದೇ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಸವಾರನೊಬ್ಬ ಮೃತಪಟ್ಟ ಘಟನೆ ಹಾಗೂ ಬಸ್ ಹಾಗೂ ಕಾರಿನ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾದಂತಹ ಘಟನೆಗಳು ಸಂಭವಿಸಿವೆ. ಇನ್ನು ಇದೇ ರೀತಿ ಹಲವು ಬಾರಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವಿದ್ದು ಅನೇಕರು ಕೈ ಕಾಲು ಮುರಿದುಕೊಂಡಿದ್ದಾರೆ. ನಿತ್ಯ ಈ ರಸ್ತೆಯಲ್ಲಿ ದೊಡ್ಡ ಗಾತ್ರದ ಲಾರಿ, ಬಸ್ ಗಳ ಸಂಚಾರವು ದಟ್ಟವಾಗಿದೆ. ರಸ್ತೆ ತಿರುವು ಕಾಣದೇ ದೊಡ್ಡ ಪ್ರಮಾಣದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಈ ಕುರಿತು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ಪಿಡಬ್ಲುಡಿ ಇಲಾಖೆ ಅಧಿಕಾರಿಗಳು ಗಮನಹರಿಸಿ ರಸ್ತೆ ಪಕ್ಕದಲ್ಲಿ ದಟ್ಟವಾಗಿ ಬೆಳೆದ ಗಿಡ-ಗಂಟಿಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವ ಮೂಲಕ ಎದುರಾಗಬಹುದಾದ ಅಪಘಾತಗಳನ್ನು ನಿಲ್ಲಿಸಲು ಮುಂದಾಗಬೇಕು. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ರಾಮಸಾಗರ ಗ್ರಾಮದಿಂದ ಬುಕ್ಕಸಾಗರ ಮಾರ್ಗವಾಗಿ 5 ಕಿ.ಮೀ. ರಸ್ತೆಯ ಪಕ್ಕದಲ್ಲಿನ ಗಿಡ-ಗಂಟಿ ಬೆಳೆದು ರಸ್ತೆಯುದ್ದಕ್ಕೂ ಚಾಚಿಕೊಂಡಿವೆ. ಇದರಿಂದ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಹೀಗಾಗಿ ಅನೇಕ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥ ಗುರುರಾಜ್.