ಸೌಲಭ್ಯ ವಂಚಿತ ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರ

| Published : Jun 20 2024, 01:03 AM IST

ಸಾರಾಂಶ

ಕೊಟ್ಟೂರು ಪಟ್ಟಣ, ತಾಲೂಕಿನ ಗ್ರಾಮಗಳ ಜನತೆ ಹಲವು ಕಾರಣಗಳಿಗಾಗಿ ಸಮುದಾಯ ಆರೋಗ್ಯ ಕೇಂದ್ರವನ್ನೇ ನೆಚ್ಚಿಕೊಳ್ಳುವಂತಾಗಿದೆ.

ಜಿ.ಸೋಮಶೇಖರ

ಕೊಟ್ಟೂರು: ಸರ್ಕಾರ ಎರಡು ದಶಕಗಳ ಹಿಂದೆ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಆದೇಶಿಸಿದ್ದು ಬಿಟ್ಟರೆ ಯಾವುದೇ ತಜ್ಞವೈದ್ಯ ಸೇರಿದಂತೆ ಸಿಬ್ಬಂದಿ ನೇಮಕಕ್ಕೆ ಇದುವರೆಗೂ ಮುಂದಾಗಿಲ್ಲ. ತಾಲೂಕು ಕೇಂದ್ರವಾದ ಕೊಟ್ಟೂರು ಸರ್ಕಾರಿ ಆಸ್ಪತ್ರೆ ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಸೀಮಿತ ಸೇವೆ ಸಲ್ಲಿಸುತ್ತಿದೆ.ಸಮುದಾಯ ಆರೋಗ್ಯ ಕೇಂದ್ರ ಕೇವಲ ಗೋಡೆಬರಹಕ್ಕೆ ಸೀಮಿತವಾಗಿದೆ. ತಜ್ಞ ವೈದ್ಯರ ಹುದ್ದೆಗಳು ಭರ್ತಿಯಾಗದಿರುವುದರಿಂದ ಸೇವೆಯಲ್ಲಿರುವ ವೈದ್ಯರಿಂದ ಸಣ್ಣ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ ಪಡೆಯುವಂತಾಗಿದೆ. ಅಪಘಾತಕ್ಕೀಡಾದವರು ಮತ್ತು ತೀವ್ರ ಅನಾರೋಗ್ಯಕ್ಕೀಡಾದವರು ದೂರದ ನಗರಗಳ ಆಸ್ಪತ್ರೆಗೆ ದೌಡಾಯಿಸುವಂತಾಗಿದೆ.

ಕೊಟ್ಟೂರು ಪಟ್ಟಣ, ತಾಲೂಕಿನ ಗ್ರಾಮಗಳ ಜನತೆ ಹಲವು ಕಾರಣಗಳಿಗಾಗಿ ಸಮುದಾಯ ಆರೋಗ್ಯ ಕೇಂದ್ರವನ್ನೇ ನೆಚ್ಚಿಕೊಳ್ಳುವಂತಾಗಿದೆ. ದಿನಕ್ಕೆ 200ರಿಂದ 300 ಜನ ಆರೋಗ್ಯ ತಪಾಸಣೆಗೆ ಇಲ್ಲಿನ ಸಮುದಾಯ ಕೇಂದ್ರಕ್ಕೆ ಬರುತ್ತಾರೆ. ಜ್ವರ, ನೆಗಡಿ, ಕೆಮ್ಮಿನಂತಹ ಕಾಯಿಲೆಗಳಿಗೆ ಮಾತ್ರ ಇಲ್ಲಿ ಔಷಧೋಪಚಾರ ಸಿಗುತ್ತದೆ. ಗಂಭೀರ ಕಾಯಲೆ ಇರುವವರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಪತ್ರ ಪಡೆದು ಇತರ ನಗರಗಳ ಆಸ್ಪತ್ರೆಗಳಿಗೆ ಹೋಗುವುದು ನಿರಂತರ ಸಾಗಿದೆ.

ಸಮುದಾಯ ಆರೋಗ್ಯ ಕೇಂದ್ರಗಳಿಗೆ ಇರಬಹುದಾದ ಯಾವುದೇ ಹೆಚ್ಚುವರಿ ಹಾಸಿಗೆಗಳು ಇಲ್ಲ. ಪ್ರಯೋಗಾಲಯ, ಕ್ಷ-ಕಿರಣ, ಇತರ ಕೆಲ ಸೀಮಿತ ಸೌಲಭ್ಯ ಮಾತ್ರ ಇವೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಸದ್ಯ ಒಬ್ಬ ವೈದ್ಯಾಧಿಕಾರಿ, ಗುತ್ತಿಗೆ ಆಧಾರಿತ ವೈದ್ಯರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ.

ಅನುದಾನ ವಾಪಸ್‌:

ಕೊಟ್ಟೂರು ತಾಲೂಕು ಕೇಂದ್ರ ಎಂಬ ಕಾರಣಕ್ಕಾಗಿ ಕಳೆದ ಸಾಲಿನಲ್ಲಿ ಡಿಎಂಎಫ್ ಅನುದಾನದಿಂದ ₹20 ಕೋಟಿಯನ್ನು ಆಸ್ಪತ್ರೆ ನಿರ್ಮಾಣಕ್ಕೆಂದು ಅಂದಿನ ಶಾಶಕ ಭೀಮಾನಾಯ್ಕ ಮತ್ತು ಜಿಲ್ಲಾಧಿಕಾರಿ ಯೋಜನೆ ರೂಪಿಸಿ ಹಾಲಿ ಸರ್ಕಾರಿ ಆಸ್ಪತ್ರೆಯ ಸ್ಥಳ ಪರಿಶೀಲಿಸಿದ್ದರು. ಆದರೆ, ಈ ಅನುದಾನ ಜಾರಿಗೆಯಾಗದೇ ವಾಪಸ್ ಪಡೆಯಲಾಗಿದೆ. ಈ ಅನುದಾನದಿಂದ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡುವ ಆಶಯ ಕಮರಿ ಹೋಗಿದೆ.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಾದ ಅರವಳಿಕೆ, ಮಕ್ಕಳ ಸ್ತ್ರೀರೋಗ ತಜ್ಞರ ಹುದ್ದೆಗಳು ಖಾಲಿ ಇವೆ. ದಂತ ವೈದ್ಯರ ಹುದ್ದೆಗೆ ಮಾತ್ರ ತಜ್ಞರು ಇದ್ದಾರೆ. ಆರು ಶುಶ್ರೂಷಕರ ಪೈಕಿ ಒಬ್ಬರು, ಎರಡು ಕಿರಿಯ ಫಾರ್ಮಸಿಸ್ಟ್ ಹುದ್ದೆಗಳ ಪೈಕಿ ಒಬ್ಬರು, ಇಬ್ಬರು ವಾಹನ ಚಾಲಕರ ಪೈಕಿ ಒಂದು ಹುದ್ದೆಗೆ ಚಾಲಕ ನೇಮಕವಾಗಿದೆ. ಕೇಂದ್ರಕ್ಕೆ 12 ಗ್ರೂಪ್ ಬಿ ನೌಕರರ ಅವಶ್ಯವಿದ್ದರೂ ಕೇವಲ ಮೂವರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. ಜಿಲ್ಲಾ ಆರೋಗ್ಯ ಕೇಂದ್ರದಿಂದ ಸರಬರಾಜು ಮಾಡುವ ಮಾತ್ರೆಗ‍ಳಿವೆ. ಇಲ್ಲಿ ಸಿಗದ ಮಾತ್ರೆಗಳನ್ನು ಆಸ್ಪತ್ರೆ ನಿಧಿಯಿಂದ ಖರೀದಿಸಿ ರೋಗಿಗಳಿಗೆ ನೀಡುತ್ತಿದ್ದೇವೆ ಎನ್ನುತ್ತಾರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪಿ.ಬದ್ಯಾನಾಯ್ಕ.