ಸಾರಾಂಶ
ಯಲಬುರ್ಗಾ:
ನೀರಾವರಿ ಯೋಜನೆಯ ಆರ್ಥಿಕ ಹಾಗೂ ತಾಂತ್ರಿಕ ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದ ಕೆಲವರು ನೀರಾವರಿ ಮಾಡುತ್ತೇನೆ ಎನ್ನುತ್ತಾರೆ. ಅದೇಗೆ ಸಾಧ್ಯ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪ್ರಶ್ನಿಸಿದರು.ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೀರಾವರಿ ಬಗ್ಗೆ ಈ ಹಿಂದೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ಪ್ರಯತ್ನಿಸಲಿಲ್ಲ. ಇದು ಒಬ್ಬರಿಂದ ಆಗುವ ಕೆಲಸವಲ್ಲ. ಅಣೆಕಟ್ಟು ಎತ್ತರಿಸುವುದು, ಸಾವಿರಾರು ಎಕರೆ ಭೂಸ್ವಾಧೀನ, ಕಾಲುವೆ ನಿರ್ಮಾಣಕ್ಕೆ ಹಳ್ಳಿಗಳ ಮುಳುಗಡೆಯಾಗುವ ಕುರಿತು ವಿಚಾರ ಮಾಡದೆ ನೀರಾವರಿ ಮಾಡುತ್ತೇನೆ ಎಂದರೆ ಅದೇಗೆ ಆಡಳಿತ ಮಾಡುತ್ತಾರೊ ನಾ ಕಾಣೆ. ಕೃಷ್ಣ ಬಿಸ್ಕಿಂ ನೀರಾವರಿ ಕುರಿತು ವ್ಯಾಜ್ಯ ಸುಪ್ರೀಂಕೋರ್ಟ್‌ನಲ್ಲಿದೆ. ಪ್ರಧಾನಿ ಮಧ್ಯಸ್ಥಿಕೆ ವಹಿಸಿ, ಮೂರು ರಾಜ್ಯಗಳ ಸಿಎಂಗಳ ಸಭೆ ಕರೆಯಬೇಕು. ಅದೆಲ್ಲ ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಭಾಷಣ ಹೊಡೆದದ್ದೇ ಹೊಡೆತಾರೆ ಎಂದರು.ಕ್ಷೇತ್ರದಲ್ಲಿ ಈಗಾಗಲೇ ಕೆರೆಗಳಿಗೆ ನೀರು ತುಂಬಿಸಲಾಗಿದ್ದು, ಎರಡನೇ ಹಂತದ ೩೩ ಕೆರೆ ತುಂಬಿಸುವ ಕೆಲಸ ಪ್ರಾರಂಭವಾಗಲಿದೆ. ಅ. ೬ಕ್ಕೆ ಪಟ್ಟಣದಲ್ಲಿ ಬಿಎಸ್ಸಿ ನರ್ಸಿಂಗ್ ಕಾಲೇಜು ಆರಂಭವಾಗಲಿದೆ. ಕಲ್ಲೂರಿಗೆ ನಮ್ಮ ಕ್ಲಿನಿಕ್ ಮಂಜೂರು ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಉತ್ಸವ ತಾಲೂಕಿನಲ್ಲಿ ಅಭಿವೃದ್ಧಿಯ ಉತ್ಸವವಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ಉದ್ಯೋಗಾವಕಾಶ ದೊರೆಯಲು ೩೭೧-ಜೆ ಕಲಂಗೆ ತಿದ್ದುಪಡಿ ತಂದು, ಹೆಚ್ಚಿನ ಮೀಸಲಾತಿ ಕಲ್ಪಿಸಲಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ಸೇರಿದಂತೆ ಅನೇಕರ ಶ್ರಮದಿಂದ ಫಲಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಕ.ಕ. ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತಿವರ್ಷ ₹ ೫ ಸಾವಿರ ಕೋಟಿ ಬಿಡುಗಡೆ ಮಾಡುತ್ತಿದೆ. ಅಧಿಕಾರಿಗಳು ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸುವ ಮೂಲಕ ಕಳಪೆ ಕಾಮಗಾರಿ ತಡೆಯಲು ಮುಂದಾಗಬೇಕು ಎಂದರು. ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಧ್ವಜಾರೋಹಣ ನೆರವೇರಿಸಿ, ಸಂದೇಶ ಭಾಷಣ ಮಾಡಿದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಬಳಿಕ ಪಟ್ಟಣದ ವಿಜಯ ದುರ್ಗಾದೇವಿ ದೇವಾಲಯ ಎದುರಿಗೆ ಕೆಎಂಎಫ್‌ನ ನಂದಿನಿ ಮಿಲ್ಕ ಪಾರ್ಲರ್‌ನ್ನು ಶಾಸಕ ಬಸವರಾಜ ರಾಯರಡ್ಡಿ ಉದ್ಘಾಟಿಸಿದರು.ಈ ವೇಳೆ ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮುಖ್ಯಾಧಿಕಾರಿ ನಾಗೇಶ, ತಾಪಂ ಇಒ ಸಂತೋಷ ಪಾಟೀಲ್, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಬಿಇಒ ಅಶೋಕ ಗೌಡರ, ಬಿ. ಮಲ್ಲಿಕಾರ್ಜುನ, ನಿಂಗನಗೌಡ ಪಾಟೀಲ್, ಬೆಟದೇಶ ಮಾಳೆಕೊಪ್ಪ, ಗಣ್ಯರಾದ ಕೆರಿಬಸಪ್ಪ ನಿಡಗುಂದಿ, ಯಂಕಣ್ಣ ಯರಾಶಿ, ಡಾ. ನಂದಿತಾ ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಮಲ್ಲಿಕಾರ್ಜುನ ಜಕ್ಕಲಿ, ಹಂಪಯ್ಯಸ್ವಾಮಿ ಹಿರೇಮಠ, ಅಮರೇಶ ಹುಬ್ಬಳ್ಳಿ, ರಿಯಾಜ್ ಅಹ್ಮದ್ ಖಾಜಿ, ಹನುಮಂತ ಭಜಂತ್ರಿ, ಮಲ್ಲೇಶಗೌಡ ಮಾಲಿಪಾಟೀಲ್, ಸಿದ್ದಲಿಂಗಪ್ಪ ಶ್ಯಾಗೋಟಿ, ಎಸ್.ವಿ. ಧರಣಾ, ಎಂ. ದೇವರಡ್ಡಿ ಸೇರಿದಂತೆ ಮತ್ತಿತರರು ಇದ್ದರು.ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವನ್ನಾಳಿದ ಪರಕೀಯರಿಗೆ ದೇಶದ ಸಂಪತ್ತು ಲೂಟಿ ಮಾಡುವ ಉದ್ದೇಶವಿತ್ತೇ ವಿನಹ ಯಾರೂ ಜನ ಕಲ್ಯಾಣಕ್ಕಾಗಿ ಬರಲಿಲ್ಲ. ನಮ್ಮ ದೇಶದಲ್ಲಿ ಕೆಲವೇ ಕೆಲವು ಸಂಸ್ಥಾನಗಳು ಜನಪರ ಕೆಲಸ ಮಾಡಿವೆ. ಇನ್ನುಳಿದವರು ತಮ್ಮ ಸ್ವಾರ್ಥದ ಸಂಪತ್ತಿನ ಸಂಪಾದನೆಗಾಗಿ ಆಡಳಿತ ಮಾಡಿದ್ದಾರೆ. ಧಾರ್ಮಿಕ ಮತ್ತು ಜನವಿರೋಧಿ ನೀತಿ ಕೆಲಸ ಮಾಡಿದ್ದಾರೆ.
ಬಸವರಾಜ ರಾಯರಡ್ಡಿ ಶಾಸಕ