ಸಾರಾಂಶ
ಹುಬ್ಬಳ್ಳಿ: ವೈದ್ಯಕೀಯ ವೃತ್ತಿ ಬರೀ ಸ್ಥಾನಮಾನದ ಸಂಕೇತವಲ್ಲ. ಅದು ಸಮಾಜದಲ್ಲೇ ದೊಡ್ಡ ಜವಾಬ್ದಾರಿಯ ವೃತ್ತಿ ಎಂಬುದನ್ನು ಯುವ ವೈದ್ಯರು ಅರಿತುಕೊಳ್ಳಬೇಕು ಎಂದು ಅಖಿಲ ಭಾರತ ಶಸ್ತ್ರಚಿಕಿತ್ಸಕರ ಸಂಘದ ಅಧ್ಯಕ್ಷ ಡಾ. ಪ್ರವೀಣ ಸೂರ್ಯವಂಶಿ ಸಲಹೆ ನೀಡಿದರು.
ನಗರದ ಕೆಎಂಸಿ ಆರ್‌ಐ 63ನೇ (2019ರ) ಬ್ಯಾಚ್‌ನ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.ವೈದ್ಯಕೀಯ ವೃತ್ತಿಯಲ್ಲಿನ ಶ್ರೇಷ್ಠತೆ ಮತ್ತು ಹೆಚ್ಚಿನ ಬದ್ಧತೆಯ ಸಂಕೇತ ಬಿಳಿ ಕೋಟು. ವೈದ್ಯರಾದವರು ಈ ಶ್ರೇಷ್ಠ, ಬದ್ಧತೆಯನ್ನು ಉಳಿಸಿಕೊಂಡು ಹೋಗಬೇಕು. ಹಾಗೆ ಮಾಡಬೇಕೆಂದರೆ ರೋಗಿಗಳ ಸೇವೆಯನ್ನು ನಿಸ್ವಾರ್ಥದಿಂದ ಮಾಡಬೇಕು ಎಂದರು.
ವೈದ್ಯರು ಸಮಾಜ ಮತ್ತು ರೋಗಿಗಳ ಜತೆ ಸಂಯಮ, ಸೌಜನ್ಯದಿಂದ ನಡೆದುಕೊಳ್ಳಬೇಕು. ಸ್ನಾತ್ತಕೋತ್ತರ ಸ್ಪೇಷೆಲೈಜೇಶನ್‌ದಲ್ಲೂ ಹೆಚ್ಚು ಸ್ಪರ್ಧಾತ್ಮಕತೆ ಕೂಡಿದೆ. ಪ್ರತಿ ಹಂತದಲ್ಲೂ ಕಠಿಣ ಸನ್ನಿವೇಶ ಎದುರಿಸುವ ಸ್ಥಿತಿ ಇದೆ. ಈ ಸನ್ನಿವೇಶಗಳನ್ನು ಎದುರಿಸಿದಲ್ಲಿ ವೃತ್ತಿಯಲ್ಲಿ ಯಶಸ್ಸು ಸಾಧಿಸಬಹುದು ಎಂದರು.ಪದವಿ ಬಳಿಕ ಸ್ನಾತಕೋತ್ತರ ಪದವಿಯೊಂದಿಗೆ ಸ್ಪೇಷಲಿಸ್ಟ್ ಡಾಕ್ಟರ್ ಎನಿಸಿಕೊಳ್ಳಬಹುದು. ಆದರೆ, ಪದವಿಯಲ್ಲಿನ ಕ್ಲಿನಿಕಲ್ ಪ್ರ್ಯಾಕ್ಟಿಸ್ ಅನ್ನು ಎಂದೂ ಮರೆಯಬಾರದು. ಎಂಆರ್‌ಐ, ಸಿಟಿಸ್ಕ್ಯಾನ್ ತಪ್ಪು ದಾರಿಗೆ ಎಳೆಯಬಹುದು. ಕ್ಲಿನಿಕಲ್ ಪ್ರ್ಯಾಕ್ಟಿಸ್ ಎಂದೂ ಮೋಸ ಮಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇತ್ತೀಚಿನ ವರ್ಷದಲ್ಲಿ ವೈದ್ಯಕೀಯದಲ್ಲಿ ತಂತ್ರಜ್ಞಾನ ವ್ಯಾಪಕವಾಗಿದೆ. ಅದನ್ನು ಅಳವಡಿಸಿಕೊಳ್ಳುವುದು ತಪ್ಪಲ್ಲ. ಆದರೆ, ಅದುವೇ ಎಲ್ಲವೂ ಆಗಬಾರದು. ಆರೋಗ್ಯ ಸೇವೆಗಳ ವೆಚ್ಚವನ್ನು ನಿಯಂತ್ರಿಸಲು ತಂತ್ರಜ್ಞಾನವನ್ನು ವಿವೇಚನೆಯಿಂದ ಬಳಸುವಂತೆ ಸಲಹೆ ಮಾಡಿದರು.
ಇತ್ತೀಚೆಗೆ ವೈದ್ಯಕೀಯದಲ್ಲಿ ರೋಬೋಟ್ ಬಳಕೆಯಾಗುತ್ತಿದೆ. ಇದು ಮನುಷ್ಯರಿಗಿಂತ ಹೆಚ್ಚು ನಿಖರ ಮತ್ತು ಹೆಚ್ಚು ಸ್ಥಿರವಾಗಿರುತ್ತದೆ. ಇದರ ಅವಲಂಬನೆ ಹೆಚ್ಚಿದಂತೆಲ್ಲ ಮಾನವೀಯತೆ ಮತ್ತು ಮನುಷ್ಯನ ಗುಣಗಳಿಂದ ವಿಮುಖರನ್ನಾಗಿಸುತ್ತದೆ. ವೈದ್ಯಕೀಯ ವೃತ್ತಿಯ ಮಾನವೀಯ ಗುಣಗಳು, ಸಹಾನುಭೂತಿ ಹಾಗೂ ನೈತಿಕತೆಯನ್ನು ಹೊಂದಿರಬೇಕು ಎಂದರು.ಬೆಳಗಾವಿ ಜೆಎನ್‌ಎಂಸಿ ಕಾಹೆರ್ ವಿವಿಯ ನಿವೃತ್ತ ಡೀನ್ ಡಾ. ಅಶೋಕ ಗೋ ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿ ಬೆಳೆಯಲು ಬಯಸಿದರೆ, ಕಷ್ಟಕರ ಸವಾಲುಗಳನ್ನು ಎದುರಿಸಬೇಕು. ಸವಾಲುಗಳಿಗೆ ಹೆದರಿ ಓಡಿಹೋಗಬೇಡಿ. ಅದಕ್ಕಾಗಿ ಸ್ವಂತ ಸಾಮರ್ಥ್ಯ ಪ್ರದರ್ಶಿಸಲೇಬೇಕು. ಇದರಿಂದ ನಿಧಾನವಾಗಿ ನೀವು ಜೀವನದಲ್ಲಿ ಬೆಳೆಯುತ್ತಲೇ ಇರುತ್ತೀರಿ ಎಂದು ಹೇಳಿದರು.
ಸಮಾಜವು ನಮ್ಮಿಂದ ಏನಾಗಬೇಕೆಂದು ಬಯಸುತ್ತದೆ. ವೈದ್ಯನಾಗಿ ಮತ್ತು ಸಮಾಜದ ಜವಾಬ್ದಾರಿಯುತ ವ್ಯಕ್ತಿಯಾಗಿ ನಿರ್ವಹಿಸಬೇಕು ಎಂದರು.ಅಧ್ಯಕ್ಷತೆಯನ್ನು ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ವಹಿಸಿದ್ದರು. ಕೆಎಂಸಿ ನಿವೃತ್ತ ವೈದ್ಯಕೀಯ ಅಧೀಕ್ಷಕಿ ಡಾ. ಅನ್ನಪೂರ್ಣ, ಹಾಲಿ ಅಧೀಕ್ಷಕ ಡಾ. ಈಶ್ವರ ಹಸಬಿ, ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ, ಡಾ. ಕೆ.ಎಫ್. ಕಮ್ಮಾರ, ಡಾ. ಹೇಮಲತಾ ಹಾಗೂ ವಿಭಾಗಗಳ ಮುಖ್ಯಸ್ಥರು ಇದ್ದರು.
194 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಎಂಬಿಬಿಎಸ್ ಪದವಿ ಪಡೆದ ಮಕ್ಕಳ ಪದವಿ ಪ್ರದಾನ ಸ್ವೀಕರಿಸುವ ಸಂಭ್ರಮಕ್ಕೆ ಸಾವಿರಾರು ಪೋಷಕರು ಸಾಕ್ಷಿಯಾದರು. 2019ರ ಬ್ಯಾಚ್‌ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ 194 ವಿದ್ಯಾರ್ಥಿಗಳಿಗೆ ವೈದ್ಯ ಪದವಿ ಪ್ರದಾನ ಮಾಡಲಾಯಿತು. ಡಾ. ಅಪರ್ಣಾ ಮುಳಗುಂದ ಅವರಿಗೆ ಸರ್ವೋತ್ತಮ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಡಾ. ಅನುಷಾ ಮೇಟಿ ಅವರಿಗೆ ಅಕಾಡೆಮಿಕ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.