ಸಂಖ್ಯಾಶಾಸ್ತ್ರದ ತಂತ್ರ ಅರ್ಥಮಾಡಿಕೊಳ್ಳಿ

| Published : May 25 2025, 02:22 AM IST

ಸಾರಾಂಶ

ಭಾರತೀಯ ಆರ್ಥಿಕತೆ ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತ ತನ್ನ ವೇಗದ ಆರ್ಥಿಕ ಬೆಳವಣಿಗೆಯಿಂದ ವಿಶ್ವದ ಗಮನ ಸೆಳೆದಿದೆ

ನವಲಗುಂದ: ಆಧುನಿಕ ಆರ್ಥಿಕ ವಿಶ್ಲೇಷಣೆಯಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಬಹುಮುಖ್ಯವಾಗಿದೆ, ವಿದ್ಯಾರ್ಥಿಗಳು ಸಂಖ್ಯಾಶಾಸ್ತ್ರದ ತಂತ್ರ ಅರ್ಥ ಮಾಡಿಕೊಳ್ಳುವುದರ ಮೂಲಕ ತಜ್ಞರಾಗಿ ಬೆಳೆದರೆ ಮುಂದಿನ ಆರ್ಥಿಕ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಅಗ್ರಸ್ಥಾನದಲ್ಲಿರಲು ಸಾಧ್ಯ ಎಂದು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಸರಸ್ವತಿ ವಿ.ಪಾಟೀಲ್ ಹೇಳಿದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶನಿವಾರ ಅರ್ಥಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ ಆರ್ಥಿಕ ವಿಶ್ಲೇಷಣೆಗೆ ಸಂಖ್ಯಾಶಾಸ್ತ್ರೀಯ ಆಧಾರಗಳು: ಸಹಸಂಬಂಧ ಮತ್ತು ಪ್ರತಿಗಮನ ಮಾದರಿಗಳು ವಿಷಯ ಕುರಿತು ಆಯೋಜಿಸಲಾದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಬಿ. ಬಾಗಡಿ ಮಾತನಾಡಿ, ಭಾರತೀಯ ಆರ್ಥಿಕತೆ ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತ ತನ್ನ ವೇಗದ ಆರ್ಥಿಕ ಬೆಳವಣಿಗೆಯಿಂದ ವಿಶ್ವದ ಗಮನ ಸೆಳೆದಿದೆ. ಇದರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆರ್ಥಿಕ ವಿಶ್ಲೇಷಣೆಯ ತಂತ್ರ ಅರ್ಥಮಾಡಿಕೊಳ್ಳಬೇಕು ಎಂದರು.

ಐ.ಕ್ಯೂ.ಎ.ಸಿ ಸಂಚಾಲಕ ಸಂತೋಷ್ ಹುಬ್ಬಳ್ಳಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಸನ್ನ ಪಂಢರಿ ಮತ್ತು ಬಿ.ಎಸ್. ಕುಡ್ಲಣ್ಣವರ, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಗಾಯತ್ರಿ ಹಿರೆಣ್ಣವರ ಪ್ರಾರ್ಥಿಸಿದರು. ಸೌಮ್ಯ ಸೂರಿನ ಸ್ವಾಗತಿಸಿದರು. ಶೈಲಾ ಯಡ್ರಾವಿ ವಂದಿಸಿದರು. ನಾಗಮ್ಮ ಅರಹುಣಸಿ ನಿರೂಪಿಸಿದರು.