ಮನುಕುಲದ ಮೌಲ್ಯ ಅರ್ಥ ಮಾಡಿಕೊಳ್ಳಿ

| Published : Sep 06 2025, 01:01 AM IST

ಮನುಕುಲದ ಮೌಲ್ಯ ಅರ್ಥ ಮಾಡಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪೈಗಂಬರ್ ಜಯಂತಿ ಆಚರಣೆ ಮಾಡಿದರೆ ಸಾಲದು, ಅವರ ಸಂದೇಶ ಮೆಲಕು ಹಾಕಬೇಕು. ಜಯಂತಿ ಹೆಸರಲ್ಲಿ ಶಬ್ದ ಮಾಲಿನ್ಯಕ್ಕೆ ಕಾರಣವಾಗಬಾರದು, ಸಾರ್ವಜನಿಕವಾಗಿ ನೋಡುವಂತಾಗಬೇಕು.

ಕುಷ್ಟಗಿ:

ಪ್ರವಾದಿಗಳು, ದಾರ್ಶನಿಕರು ಸಮಾಜಕ್ಕೆ ನೀಡಿದ ಕೊಡುಗೆಯಿಂದ ಜೀವಂತವಾಗಿದ್ದಾರೆ. ಅವರ ಜಯಂತಿ ಜತೆಗೆ ಅವರ ತತ್ವಾದರ್ಶ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಅಭಿಪ್ರಾಯಪಟ್ಟರು.

ಪಟ್ಟಣದ ಹಜರತ್ ಹೈದರ್ ಅಲಿ ಕಮಿಟಿ ತೆಗ್ಗಿನ ಓಣಿ ಹಾಗೂ ಸಂಜೀವಿನಿ ರಕ್ತ ನಿಧಿ ಕೇಂದ್ರ ಸಹಯೋಗದೊಂದಿಗೆ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಪ್ರಯುಕ್ತ 5ನೇ ವರ್ಷದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮನುಕುಲದ ಮೌಲ್ಯ ಅರ್ಥ ಮಾಡಿಕೊಂಡು ಬದುಕಬೇಕು ಎಂದರು.ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ಪೈಗಂಬರ್ ಜಯಂತಿ ಆಚರಣೆ ಮಾಡಿದರೆ ಸಾಲದು, ಅವರ ಸಂದೇಶ ಮೆಲಕು ಹಾಕಬೇಕು. ಜಯಂತಿ ಹೆಸರಲ್ಲಿ ಶಬ್ದ ಮಾಲಿನ್ಯಕ್ಕೆ ಕಾರಣವಾಗಬಾರದು, ಸಾರ್ವಜನಿಕವಾಗಿ ನೋಡುವಂತಾಗಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಮಹಮ್ಮದ್ ಪೈಗಂಬರ್ ಅವರು ನಾನು ಎನ್ನದೆ ನಮ್ಮವರು ಎಂದು ಸಾರಿದರು. ಸೂಫಿ ಸಂತರು ನಾಡಿಗೆ ನೀಡಿದ ಸಂದೇಶ ಪಾಲಿಸಬೇಕು ಎಂದರು.

ಶಿಕ್ಷಕ ಜೀವನಸಾಬ್‌ ಬಿನ್ನಾಳ, ಮಹಮ್ಮದ್ ಪೈಗಂಬರ್ ಜೀವನದ ಮೌಲ್ಯಗಳ ಬಗ್ಗೆ ವಿವರಿಸಿದರು. ಸುಭಾನಿ ಆರ್‌.ಟಿ. ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್‌ ದೋಟಿಹಾಳ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಮಾಜಿ ಪುರಸಭೆ ಅಧ್ಯಕ್ಷ ಜಿ.ಕೆ. ಹಿರೇಮಠ, ಮೈನುದ್ದೀನ್‌ ಮುಲ್ಲಾ, ಉಮೇಶ ಮಂಗಳೂರು, ಅಹ್ಮದ್ ಹುಸೇನ, ರಾಜೇಸಾಬ್‌ ಮಾಟಲದಿನ್ನಿ ಸೇರಿದಂತೆ ಮುಸ್ಲಿಂ ಪಂಚ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಸವರಾಜ ಗಾಣಿಗೇರ ನಿರೂಪಿಸಿ, ವಂದಿಸಿದರು.

ಸನ್ಮಾನ:

ಇದೇ ವೇಳೆ ಸೇವಾಮನೋಭಾವನೆ ಉಳ್ಳವರಿಗೆ ಹಜರತ್ ಹೈದರಲಿ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು. ರಕ್ತದಾನ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನ ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಕಮಿಟಿ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.