ನೆಲದ ಕಾನೂನಿನ ಗ್ರಹಿಕೆ, ಅರಿವು ಅಗತ್ಯ: ದಯಾನಂದ

| Published : May 04 2024, 01:30 AM IST

ಸಾರಾಂಶ

ನಗರದ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ತಂತ್ರಜ್ಞಾನ, ಸಾಂಸ್ಕೃತಿಕ ಉತ್ಸವ ''ಅನಾದ್ಯಂತ-2024'

ಕನ್ನಡಪ್ರಭ ವಾರ್ತೆ ಯಲಹಂಕ

ನಮ್ಮ ನೆಲದ ಕಾನೂನಿನ ಸೂಕ್ತ ಗ್ರಹಿಕೆ ಮತ್ತು ಅರಿವು ಪ್ರತಿಯೊಬ್ಬ ನಾಗರಿಕರಲ್ಲೂ ಇರಬೇಕು. ಅದರಲ್ಲೂ ನಮ್ಮ ಯುವ ಜನಾಂಗ ಈ ದಿಸೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಸಮಾಜದ ಉಳಿದ ಬಂಧುಗಳಿಗೆ ಆತ್ಮವಿಶ್ವಾಸ ಮೂಡಿಸಬೇಕು ಎಂದು ಬೆಂ.ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅಭಿಪ್ರಾಯಪಟ್ಟರು.

ನಗರದ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ತಂತ್ರಜ್ಞಾನ, ಸಾಂಸ್ಕೃತಿಕ ಉತ್ಸವ ''''ಅನಾದ್ಯಂತ-2024'''' ಉದ್ಘಾಟಿಸಿ ಮಾತನಾಡಿದ ಅವರು, ನಮ್ಮನ್ನು ಆಳುವುದು, ನಿಗ್ರಹಿಸುವುದು ಮತ್ತು ಪ್ರೋತ್ಸಾಹಿಸುವುದು ನಮ್ಮ ನೆಲದ ಕಾನೂನು ಮಾತ್ರವೇ. ನಮ್ಮ ಸರ್ಕಾರಗಳು ಕಾರ್ಯನಿರ್ವಹಿಸುವುದು ಸಹ ಕಾನೂನಿನ ಚೌಕಟ್ಟಿನಲ್ಲಿ ಎಂಬುದನ್ನು ಮನಗಾಣಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಿನ ಅರಿವು ಬಹಳ ಮುಖ್ಯವಾಗಿರುತ್ತದೆ. ಕಾನೂನಿನ ಪರಿಜ್ಞಾನವಿಲ್ಲದ ಕೆಲವು ಯುವಜನರು ತಮಗೇ ತಿಳಿಯದಂತೆ ಅಪರಾಧಗಳ ಸುಳಿಗೆ ಸಿಲುಕಿ ಸಂಕಷ್ಟ ಎದುರಿಸುತ್ತಾರೆ. ಕಾನೂನಿನ ಅರಿವು ವ್ಯಕ್ತಿಯನ್ನು ಅಕ್ರಮಗಳ ಸುಳಿಗೆ ಸಿಲುಕದಂತೆ ತಡೆಯುವುದರ ಜತೆಗೆ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗುವುದನ್ನು ತಪ್ಪಿಸುತ್ತದೆ ಎಂದರು.

ಚಿತ್ರನಟಿ ಸಪ್ತಮಿಗೌಡ ಮಾತನಾಡಿ, ''''ಅನಾದ್ಯಂತ-2024'''' ತಂತ್ರಜ್ಞಾನ, ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಂಡಿರುವುದು ಸಂತಸ ಉಂಟುಮಾಡಿದೆ. ವಿದ್ಯಾರ್ಥಿಗಳು ಎಷ್ಟೇ ನಿರಾಸಕ್ತಿ ತೋರಿದರೂ ಅವರನ್ನು ತರಗತಿಗಳಲ್ಲಿ ಕೂರಿಸಿ, ಪಾಠ ಹೇಳಿ, ಜ್ಞಾನದ ಬಗ್ಗೆ ಅರಿವು ಮೂಡಿಸುವ ಅಧ್ಯಾಪಕರು ನಿಜಕ್ಕೂ ದೇವರ ಸಮಾನ. ವಿದ್ಯಾರ್ಥಿಗಳು ಅವರನ್ನು ಗೌರವಿಸುವ ಪರಿಪಾಠ ಬೆಳೆಸಿಕೊಂಡರೆ ಶೈಕ್ಷಣಿಕ ಬದುಕು ಸಾರ್ಥಕವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಪ್ರೊ.ಸಂದೀಪ್ ಶಾಸ್ತ್ರಿ ವಹಿಸಿದ್ದು, ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಚ್.ಸಿ.ನಾಗರಾಜ್, ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜಾ, ಶೈಕ್ಷಣಿಕ ಮುಖ್ಯಸ್ಥ ಡಾ.ವಿ. ಶ್ರೀಧರ್, ಶಿಕ್ಷಕ ಸಂಯೋಜಕರಾದ ಡಾ.ಎನ್. ನಳಿನಿ, ಡಾ.ಸುಧೀರ್ ರೆಡ್ಡಿ ಸೇರಿದಂತೆ ಇನ್ನಿತರರಿದ್ದರು.

ಕಾರ್ಯಕ್ರಮದಲ್ಲಿ ಐಡಿಯಾಥಾನ್ 5.0, ಕೋಡ್ ಸ್ಪ್ರಿಂಟ್ 2.0, ಸಿಮ್ ರೇಸಿಂಗ್, ಬಗ್ ಬ್ಯಾಶ್ ಬೊನಾಂಜ, ಫ್ಯಾಶನ್ ಶೋ, ಕ್ವಿಜ್, ಚರ್ಚಾಸ್ಪರ್ಧೆ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ಅನಾದ್ಯಂತ-2024 ಸಾಂಸ್ಕೃತಿಕ ಉತ್ಸವದಲ್ಲಿ ದೇಶದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳನ್ನು ಪ್ರತಿನಿಧಿಸಿದ್ದ ಸಹಸ್ರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.