ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ಜಿಲ್ಲಾಡಳಿತ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡಿದ್ದು, ಜಿಲ್ಲೆಯ ತಿಪಟೂರು ಹೊರತು ಪಡಿಸಿ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದ್ದರೂ ಇದುವರೆಗೂ ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ಜಿಲ್ಲಾಡಳಿತ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಲ್ಲದ ಕಾರಣ ಜಿಲ್ಲೆಯ ಶೇ 70 ರಷ್ಟು ಭೂಮಿಯಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ಮಾಡಿದ ಶೇ 30 ರಷ್ಟು ಭೂಮಿಯಲ್ಲಿನ ಫಸಲು ಸಹ ಸಕಾಲಕ್ಕೆ ಮಳೆಯಿಲ್ಲದೆ ಒಣಗಿದ್ದು, ದಿನದಿಂದ ದಿನಕ್ಕೆ ಅಂತರ್ಜಲ ಕುಸಿಯುತ್ತಿದ್ದು,ಮುಂದಿನ 15-20 ದಿನಗಳಲ್ಲಿ ತೀವ್ರ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ತಕ್ಷಣವೇ ಕುಡಿಯುವ ನೀರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೆಯೇ ಜಾನುವಾರುಗಳ ಮೇವಿಗೆ ಗೋಶಾಲೆ ತೆರೆಯುವುದು. ಎಕರೆಗೆ ತಲಾ 50 ಸಾವಿರ ಬೆಳೆ ಪರಿಹಾರ,ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರು ಗುಳೆ ಹೋಗದಂತೆ ವಿಬಿಜಿ ರಾಮಜಿಅಡಿಯಲ್ಲಿ ಕೆಲಸ ನೀಡಿಜನರ ನೆರವಿಗೆ ಬರಬೇಕೆಂದು ಆಗ್ರಹಿಸಿದರು. ಈ ಬಾರಿ ಹೇಮಾವತಿ ಜಲಾಶಯದಲ್ಲಿ ಶೇ 75 ರಷ್ಟು ನೀರಿನ ಸಂಗ್ರಹವಿತ್ತು. ಆಗ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರುಗಳು ಎಚ್ಚೆತ್ತುಕೊಂಡು ನಮ್ಮಕೆರೆ, ಕೆಟ್ಟೆಗಳಿಗೆ ನೀರು ಹರಿಸಿಕೊಂಡಿದ್ದರೆ ಅಂತರ್ಜಲ ಕುಸಿತ ತಡೆಯಬಹುದಿತ್ತು. ನಮ್ಮ ತೋಟ, ತುಡಿಕೆಗಳು ಒಣಗಿ, ರೈತರು ಕಂಗಾಲಾಗಿದ್ದಾರೆ. ಈಗಲಾದರೂ ಜಿಲ್ಲಾಡಳಿತ ಎಲ್ಲಾಕೆರೆ, ಕಟ್ಟೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು ಎಂದು ನುಡಿದರು.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಮಾತನಾಡಿ, ಬರದಿಂದ ಬೆಳೆ ನಷ್ಟದಿಂದ ಜನರು ಸಂಕಷ್ಟದಲ್ಲಿದ್ದು, ಸರ್ಕಾರ ಕೇರಳ ಮಾದರಿಯಲ್ಲಿ ಪಡಿತರ ಅಕ್ಕಿಯ ಜೊತೆಗೆ, ಬೇಳೆ, ಬೆಲ್ಲ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ರಿಯಾಯತಿ ದರದಲ್ಲಿ ನೀಡಬೇಕು. ಹಾಗೆಯೇ ಪಶುಸಂಗೋಪನೆಗೆ ಪೂರಕವಾಗಿ ಬೂಸ್ ಮತ್ತು ಹಿಂಡಿಯನ್ನು ಶೇ50ರ ರಿಯಾಯಿತಿ ದರದಲ್ಲಿ ನೀಡಬೇಕು. ಲೀಟರ್ ಹಾಲಿಗೆ 40 ರು. ನೀಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ವಿವಿಧ ತಾಲೂಕುಗಳ ಅಧ್ಯಕ್ಷರಾದ ಚಿಕ್ಕಬೋರೇಗೌಡ, ಲೋಕೇಶ್, ರಂಗಹನುಮಯ್ಯ, ಷಬ್ಬೀರ್ ಪಾಷ, ಯುವಘಟಕದ ಮಂಜುನಾಥ್, ಜಟ್ಟಿ, ತಿಮ್ಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.