ಸಾರಾಂಶ
ಬ್ಯಾಡಗಿ: ಬಫರ್ ಝೋನ್‌ನಲ್ಲಿ ಗೊಬ್ಬರ ಸಂಗ್ರಹಿಸಿ ಫೆಡರೇಶನ್‌ನಿಂದ ವಿಎಸ್ಎಸ್ ಸೊಸೈಟಿಗಳ ಮೂಲಕ ಗೊಬ್ಬರ ವಿತರಣೆ ಕೈಗೊಳ್ಳಬೇಕು ಹಾಗೂ ಡಿಎಪಿ ಜೊತೆಗೆ ನೀಡುತ್ತಿರುವ ಕಾಂಪ್ಲೆಕ್ಸ್ ಗೊಬ್ಬರ ವಿತರಣೆ ಕೈಬಿಡಬೇಕು. ಇಲ್ಲದೇ ಹೋದಲ್ಲಿ ರೈತ ಸಂಘವು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಎಚ್ಚರಿಸಿದರು.
ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷದ ಮುಂಗಾರು ಹಂಗಾಮಿನಲ್ಲಿ ಬೀಜ, ಗೊಬ್ಬರದ ಬಗ್ಗೆ ರೈತರು ಗೊಂದಲಕ್ಕೀಡಾಗುತ್ತಿದ್ದಾರೆ, ಈ ಮೊದಲು ವಿ.ಎಸ್.ಎಸ್. ಸೊಸೈಟಿ ಮೂಲಕ ರೈತರು ಗೊಬ್ಬರ ಪಡೆದು ನೆಮ್ಮದಿಯಾಗಿ ಕೃಷಿ ಚಟುವಟಿಕೆ ನಡೆಸುತ್ತಿದ್ದೆವು, ಆದರೆ ಸರ್ಕಾರ ಮಾಡಿದ ಗೊಂದಲದಿಂದ ರೈತರು ಮತ್ತೆ ಸಂಕಷ್ಟಕ್ಕೀಡಾಗುವಂತೆ ಮಾಡಿದೆ ಎಂದರು.ಕೃಷಿ ಸಚಿವ ರಾಜೀನಾಮೆಗೆ ಆಗ್ರಹ:ಗಂಗಣ್ಣ ಎಲಿ ಮಾತನಾಡಿ, ಕೃಷಿ ಸಚಿವ ಚಲುವರಾಯಸ್ವಾಮಿ ಒಬ್ಬ ಅನನುಭವಿ ಸಚಿವ, ಕೃಷಿ ಇಲಾಖೆಯಲ್ಲಿ ಅವೈಜ್ಞಾನಿಕವಾಗಿ ಆಡಳಿತ ನಡೆಸುತ್ತಿರುವುದಾಗಿ ಆರೋಪವಿದೆ. ಗೊಬ್ಬರ ವಿತರಣೆಗೆ ಸಮಸ್ಯೆ ಬಗ್ಗೆ ಮಾತನಾಡದೇ ಬಿತ್ತನೆ ಬೀಜದ ದರವನ್ನು ಎರಡು ಪಟ್ಟು ಹೆಚ್ಚುಗೊಳಿಸಿದ್ದು ಎಷ್ಟರಮಟ್ಟಿಗೆ ಸರಿ? ಕಳೆದ ವರ್ಷ ಮಳೆಯಿಲ್ಲದೇ ಬರಗಾಲ ಎದುರಿಸಿ ರೈತರು ತತ್ತರಿಸಿದ್ದಾರೆ. ಅದಕ್ಕೆ ಪೂರಕವಾಗಿ ರೈತರ ಸಂಕಷ್ಟಕ್ಕೆ ನಿಲ್ಲಬೇಕಾಗಿದ್ದ ಸರ್ಕಾರ ಡಿಎಪಿ ಜೊತೆಗೆ ಕಾಂಪ್ಲೆಕ್ಸ್ (ಮೈಕ್ರೋ ನ್ಯೂಟ್ರಿಯಂಟ್ಸ್) ಗೊಬ್ಬರ ಪಡೆಯುವಂತೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದರು.
10 ರಂದು ಬೃಹತ್ ಪ್ರತಿಭಟನೆ:ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿದ ಸರ್ಕಾರಗಳಿಂದ ರೈತರಿಗೆ ಯಾವುದೇ ಭರವಸೆ ಉಳಿದಿಲ್ಲ ಬರುವ ಜೂ.10ರಂದು ನಡೆಯುವ ರೈತರ ಹುತಾತ್ಮ ದಿನಾಚರಣೆ ವೇಳೆಗೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ರೈತರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದರು.ರುದ್ರಗೌಡ ಕಾಡನಗೌಡ್ರ ಮಾತನಾಡಿ, ಗೊಬ್ಬರದ ವಿಷಯದಲ್ಲಿ ನಮ್ಮ ಸಂಕಷ್ಟಗಳನ್ನು ನಮ್ಮ ಅಭಿಪ್ರಾಯ ಪಡೆಯದೇ ಗೊಬ್ಬರ ವಿಷಯದಲ್ಲಿ ಸರ್ಕಾರ ಏಕಾಏಕಿ ನಿರ್ಣಯ ಕೈಗೊಂಡಿದ್ದು ತಪ್ಪು, ಬೀಜ, ಗೊಬ್ಬರ ರೈತರ ಹಕ್ಕು ಇದನ್ನು ಹಣಕ್ಕಾಗಿ ಮಾರಿಕೊಳ್ಳುತ್ತಿರುವ ಸರ್ಕಾರಗಳಿಗೆ ಧಿಕ್ಕಾರವಿರಲಿ, ಇನ್ನಾದರೂ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೇ ರೈತರು ಪ್ರತಿಭಟನೆ ಮೂಲಕ ಎಚ್ಚರಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಂಕರ ಮರಗಾಲ, ಕೆ.ವಿ. ದೊಡ್ಡಗೌಡ್ರ, ಮಂಜು ತೋಟದ, ಮಲ್ಲೇಶಪ್ಪ ಡಂಬಳ, ಬಸಣ್ಣ ಬನ್ನಿಹಟ್ಟಿ, ಕಿರಣಕುಮಾರ ಗಡಿಗೋಳ, ಮೌನೇಶ ಕಮ್ಮಾರ, ನಿಂಗಪ್ಪ ಹೆಗ್ಗಣ್ಣನವರ, ಶಿವಪ್ಪ ಮತ್ತೂರು, ಶಿವರುದ್ರಪ್ಪ ಮೂಡೇರ, ಜಾನ್ ಪುನೀತ್, ಫಕ್ಕೀರೇಶ ಆಜಗೊಂಡರ, ನಾಗಪ್ಪ ಸಪ್ಪಣ್ಣನವರ, ಸಂಜೀವ ಬಿಕ್ಕಣ್ಣನವರ ಇನ್ನಿತರರಿದ್ದರು.