ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿರುಗೇಟು ನೀಡಿದ್ದು, ಪಾದಯಾತ್ರೆ ಅಥವಾ ಸಾರ್ವಜನಿಕವಾಗಿ ಹೋರಾಟ ಮಾಡುವುದು ಅವರ ಸ್ವಾತಂತ್ರ್ಯ ಎಂದಿದ್ದಾರೆ.
ಮಡಿಕೇರಿ: ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿರುಗೇಟು ನೀಡಿದ್ದು, ಪಾದಯಾತ್ರೆ ಅಥವಾ ಸಾರ್ವಜನಿಕವಾಗಿ ಹೋರಾಟ ಮಾಡುವುದು ಅವರ ಸ್ವಾತಂತ್ರ್ಯ ಎಂದಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ರಾಜಕೀಯ ಪಕ್ಷವಾಗಿ ಅವರದ್ದೊಂದು ನಿಲುವು ಇರುತ್ತದೆ, ಅವರು ಮಾಡಲಿ. ಅದಕ್ಕೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಸದನದಲ್ಲಿ ಯಾಕೆ ಚರ್ಚೆಗೆ ಬರುತ್ತಿಲ್ಲ? ಎಂದು ಪ್ರಶ್ನಿಸಿದರು.‘ಮುಖ್ಯಮಂತ್ರಿಗಳು ನಾಗೇಂದ್ರ ಅವರನ್ನು ಯಾಕೆ ಮತ್ತೆ ಸಂಪುಟಕ್ಕೆ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ಉತ್ತರ ಸಿಗಬೇಕಲ್ಲವೇ? ಆ ಉತ್ತರ ಬಂದರೆ ಬಿಜೆಪಿಯವರು ಬೆತ್ತಲಾಗುತ್ತಾರೆ ಎಂಬ ಭಯದಿಂದಲೇ ಅವರಿಗೆ ಸದನದಲ್ಲಿ ಚರ್ಚೆ ಬೇಡವಾಗಿದೆ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ರಾಜ್ಯಪಾಲರಿಗೆ ಪತ್ರ ಬರೆದಿರುವುದು ಸಾಧಾರಣ ಪ್ರಕ್ರಿಯೆ ಎಂದು ಪೊನ್ನಣ್ಣ ಹೇಳಿದರು.‘ಸಿಬಿಐ ತನಿಖೆ ಮಾಡಿ ಚಾರ್ಜ್‌ಶೀಟ್‌ನಲ್ಲಿ ನಾಗೇಂದ್ರ ಅವರನ್ನು ಆರೋಪಿ ಎಂದು ಮಾಡಿದೆ. ಈಗ ಸ್ಯಾಂಕ್ಷನ್ ಕೇಳಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 19(3) ಅಡಿಯಲ್ಲಿ ಸ್ಯಾಂಕ್ಷನ್ ಇಲ್ಲದೆ ಕೋರ್ಟ್ ಮುಂದುವರಿಯಲು ಆಗುವುದಿಲ್ಲ. ಯಾಕೆಂದರೆ ಅವರು ಮಂತ್ರಿಯಾಗಿದ್ದಾರೆ. ಆದರೆ ಸರ್ಕಾರದ ಸಲಹೆ ಇಲ್ಲದೆ ರಾಜ್ಯಪಾಲರು ಒಪ್ಪಿಗೆ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ಅದು ಪೂರ್ಣವಾಗಿ ರಾಜ್ಯಪಾಲರಿಗೆ ಬಿಟ್ಟ ವಿಚಾರ ಎಂದರು.
ತನಿಖೆ ಆರಂಭವಾದಾಗ ಮುಕ್ತವಾಗಿ ತನಿಖೆ ಆಗಬೇಕು ಎಂದು ನಾಗೇಂದ್ರ ಅವರು ರಾಜೀನಾಮೆ ನೀಡಿದ್ದರು. ದೋಷಮುಕ್ತರಾದ ಮೇಲೂ ಅವರನ್ನು ಸಂಪುಟಕ್ಕೆ ಸೇರಿಸಬಾರದು ಎಂದರೆ ಹೇಗೆ? ನೀವು ಮಾಡುವ ತನಿಖೆ ಕೋರ್ಟಿನಲ್ಲಿ ತೀರ್ಮಾನ ಆಗುವವರೆಗೆ ಕಾಯಬೇಕಾ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಸದನದಲ್ಲಿ ಚರ್ಚೆಗೆ ನಾವು ರೆಡಿ ಇದ್ದೇವೆ ಎಂದರು.