ಉಂಡಿ ತಿಂದು, ಜೋಕಾಲಿ ಜೀಕಿ ನಾಗರ ಪಂಚಮಿ ಸಂಭ್ರಮ

| Published : Jul 29 2025, 01:02 AM IST

ಸಾರಾಂಶ

ನಾಗಪ್ಪನನ್ನು ಮಣ್ಣಿನ ಮೂರ್ತಿ ಮಾಡಿ ಪೂಜೆ ಮಾಡುವುದಲ್ಲದೇ, ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ ಮಹಿಳೆಯರು ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡರು.

ಧಾರವಾಡ: ನಾಗರ ಪಂಚಮಿ ಬಂತೆಂದರೆ ಸಾಕು ಉಂಡಿ ತಿಂದು, ಜೋಕಾಲಿ ಜೀಕುವುದು ಸಾಮಾನ್ಯ. ಅಂತೆಯೇ, ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಬಂದಾಗಿದ್ದು, ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ಈ ಹಬ್ಬವನ್ನು ಧಾರವಾಡದ ಜನತೆ ಸೋಮವಾರ ಸಂಪ್ರದಾಯಿಕವಾಗಿ ಆಚರಿಸಿದರು.

ನಾಗಪ್ಪನನ್ನು ಮಣ್ಣಿನ ಮೂರ್ತಿ ಮಾಡಿ ಪೂಜೆ ಮಾಡುವುದಲ್ಲದೇ, ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ ಮಹಿಳೆಯರು ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡರು. ಈ ಸಮಯದಲ್ಲಿ ಮನೆಯ ಸದಸ್ಯರ ಹೆಸರಿನಲ್ಲಿ ನಾಗಪ್ಪನ ಮೂರ್ತಿಗೆ ಹಾಲೆರೆದು ಪೂಜೆ ಮಾಡಲಾಗುತ್ತದೆ. ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.

ನಾಗ ಪಂಚಮಿಯಲ್ಲಿ ತರಹೇವಾರಿ ಉಂಡಿಗಳನ್ನು ಮಾಡುವುದು ಪದ್ಧತಿ. ಅಂತೆಯೇ ಬಹುತೇಕರ ಮನೆಯಲ್ಲಿ ಶೇಂಗಾ ಉಂಡಿ, ಬುಂದಿ ಉಂಡಿ, ಎಳ್ಳು, ಚುರುಮರಿ, ರವಾ, ಖಾರದಾನಿ ಉಂಡಿ, ಗುಳ್ಳಡಕಿ ಉಂಡಿ, ಹೆಸರುಂಡಿ, ಬೇಸನ್‌ ಉಂಡಿ ಅಂತಹ ತರಹೇವಾರಿ ಉಂಡಿಗಳನ್ನು ಸಿದ್ಧಪಡಿಸಲಾಗಿದ್ದು, ಸಂಬಂಧಿಕರ ಮನೆಗಳಿಗೂ ನೀಡಲಾಗುತ್ತದೆ. ಉಂಡಿಗಳ ಜತೆಗೆ ನಾಗಪ್ಪನಿಗೆ ನೈವೈದ್ಯಕ್ಕಾಗಿ ಅಳ್ಳಿಟ್ಟು, ಕಡಲೆಕಾಳು ಉಸುಳಿ, ಕೊಬ್ಬರಿ ಹಾಗೂ ಜೋಳದ ಅಳ್ಳು ಹುರಿಯಲಾಗುತ್ತದೆ. ಈ ಮೊದಲು ತಾವೇ ಮನೆಯಲ್ಲಿಯೇ ತಯಾರಿಸುತ್ತಿದ್ದ ಜನರು ಇತ್ತೀಚಿನ ವರ್ಷಗಳಲ್ಲಿ ಕೆಲವರು ಅಂಗಡಿಗಳಿಂದ ಖರೀದಿಸಿ ತರಲಾಗುತ್ತಿದೆ.

ಈ ಹಬ್ಬದ ಇನ್ನೊಂದು ವಿಶೇಷ ಜೋಕಾಲಿ. ಗ್ರಾಮೀಣ ಭಾಗದಲ್ಲಿ ಹುಣಸೆ, ಬೇವಿನ ಮರಕ್ಕೆ ಜೋಕಾಲಿ ಕಟ್ಟಿ ಜೀಕಿ ಖುಷಿ ಪಡುವುದು. ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು ಈ ಜೋಕಾಲಿ, ಉಂಡಿ ಹಬ್ಬವನ್ನು ಅನುಭವಿಸುವುದು ಸಾಮಾನ್ಯ. ಕೆಲವು ಕಡೆಗಳಲ್ಲಿ ಸೋಮವಾರವೇ ಪಂಚಮಿ ಮಾಡಿದ್ದು, ಇನ್ನು ಕೆಲವರು ಮಂಗಳವಾರ ಸಹ ಹಬ್ಬವನ್ನು ಆಚರಿಸಲು ಸಿದ್ಧರಾಗಿದ್ದಾರೆ.