ದಾಖಲೆ ಇಲ್ಲದ ₹38.50 ಲಕ್ಷ ಮೌಲ್ಯದ ಚಿನ್ನ ವಶ

| Published : Mar 23 2024, 01:03 AM IST

ಸಾರಾಂಶ

ನಿಪ್ಪಾಣಿ–ಗಂಗಾವತಿ ಬಸ್ಸಿನಲ್ಲಿ ಸರಿಯಾದ ದಾಖಲೆ ಇಲ್ಲದ ₹38.50 ಲಕ್ಷ ಮೊತ್ತದ ಬಂಗಾರದ ಆಭರಣಗಳು ಪತ್ತೆಯಾಗಿದ್ದು, ಅವುಗಳನ್ನು ವಶ ಪಡಿಸಿಕೊಂಡು ಪೊಲೀಸ ಇಲಾಖೆ ದೂರು ದಾಖಲು ಮಾಡಿಕೊಂಡಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಇಲ್ಲಿಯ ತೇಗೂರ ಚೆಕ್ ಪೋಸ್ಟ್‌ನಲ್ಲಿ ಗುರುವಾರ ರಾತ್ರಿ ತಪಾಸಣೆಯಲ್ಲಿ ಕೆಎಸ್‌ಆರ್‌ಟಿಸಿಯ ನಿಪ್ಪಾಣಿ–ಗಂಗಾವತಿ ಬಸ್ಸಿನಲ್ಲಿ ಸರಿಯಾದ ದಾಖಲೆ ಇಲ್ಲದ ₹38.50 ಲಕ್ಷ ಮೊತ್ತದ ಬಂಗಾರದ ಆಭರಣಗಳು ಪತ್ತೆಯಾಗಿದ್ದು, ಅವುಗಳನ್ನು ವಶ ಪಡಿಸಿಕೊಂಡು ಪೊಲೀಸ ಇಲಾಖೆ ದೂರು ದಾಖಲು ಮಾಡಿಕೊಂಡಿದೆ.

ಗುರುವಾರ ರಾತ್ರಿ 11-35ಕ್ಕೆ ತೇಗೂರ ಚೆಕ್‌ ಪೋಸ್ಟ್‌ನಲ್ಲಿ ಬಸ್ ನಂ. ಕೆಎ-37-ಎಫ್-0748 (ನಿಪ್ಪಾಣಿ-ಗಂಗಾವತಿ) ಬಸ್ಸಿನಲ್ಲಿ ಆರೋಪಿ ಮಹಾರಾಷ್ಟ್ರ ಕೊಲ್ಲಾಪುರದ ಪ್ರಕಾಶಕುಮಾರ (47) ಹುಕುಮಜಿ ಮಾಲಿ ಎಂಬುವರು 778 ಗ್ರಾಂ ತೂಕದ ಬೋರಮಾಳ ಸರ, ಗುಂಡುಗಳು, ಲಾಕೆಟ್‌ ಇರುವ ಬಂಗಾರದ ಆಭರಣಗಳನ್ನು ಕೊಲ್ಲಾಪುರದಿಂದ ಸಿಂಧನೂರ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದರು. ತಪಾಸಣೆ ವೇಳೆ ತೋರಿಸಿದ ಬಿಲ್‌ಗಳಲ್ಲಿ ಇರುವ ಬಂಗಾರದ ಆಭರಣಗಳ ತೂಕಕ್ಕೂ ಹಾಗೂ ತಪಾಸಣೆಯಲ್ಲಿ ಸಿಕ್ಕ ಬಂಗಾರದ ಆಭರಣಗಳ ತೂಕಕ್ಕೂ ವ್ಯತ್ಯಾಸ ಇದ್ದು, ಸರಿಯಾದ ಮಾಹಿತಿಯನ್ನು ಬಿಲ್ಲುಗಳಲ್ಲಿ ನಮೂದಿಸದೇ ಮರೆಮಾಚಿದ್ದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಆರೋಪಿಗಳ ಮೇಲೆ ಕಲಂ 98 ಕೆ.ಪಿ. ಆ್ಯಕ್ಟ್‌ ಅಡಿಯಲ್ಲಿ ಗರಗ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ತನಿಖೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.8 ಲಕ್ಷ ಮೌಲ್ಯದ 480 ಮಿಕ್ಸರ್‌ ವಶಕ್ಕೆ: ಎಫ್‌ಐಆರ್‌ ದಾಖಲುಹುಬ್ಬಳ್ಳಿ: ದಾಖಲೆಗಳಿಲ್ಲದೇ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಸ್ವೀಕರಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಲ್ಲಿನ ರೈಲ್ವೆ ಪಾರ್ಸಲ್‌ ಕಚೇರಿಯಲ್ಲಿದ್ದ ₹8 ಲಕ್ಷ ಮೌಲ್ಯದ ಮಿಕ್ಸರ್‌ಗಳನ್ನು ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ ರೈಲ್ವೆ ನಿಲ್ದಾಣ ಪಾರ್ಸಲ್‌ ಕಚೇರಿಯಲ್ಲಿ ಅನಧಿಕೃತವಾಗಿ ದಾಖಲೆಗಳಿಲ್ಲದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಸ್ವೀಕರಿಸಲಾಗುತ್ತಿದೆ ಎಂಬ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ, ಪರಿಶೀಲನೆ ನಡೆಸಿ 24 ರಟ್ಟಿನ ಬಾಕ್ಸ್‌ನಲ್ಲಿ ₹8 ಲಕ್ಷ ಮೌಲ್ಯದ 480 ಮಿಕ್ಸರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.ಈ ವಸ್ತುಗಳನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಉಚಿತವಾಗಿ ಹಂಚುವ ಸಲುವಾಗಿ ತರಸಿರಬಹುದು ಎಂಬ ಸಂಶಯ ಉಂಟಾಗಿ ಈ ದಾ‍ಳಿ ನಡೆಸಲಾಗಿದೆ. ಈ ಕುರಿತು ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.