ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಬಣವಾಗಿದ್ದು ಕೇಂದ್ರ ಸರ್ಕಾರ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಸುಳ್ಳು ಭರವಸೆ ನೀಡಿ ದೇಶದ ಯುವಕರಿಗೆ ಅನ್ಯಾಯ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅಸಮಧಾನ ವ್ಯಕ್ತಪಡಿಸಿದರು.
ರಟ್ಟೀಹಳ್ಳಿ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಬಣವಾಗಿದ್ದು ಕೇಂದ್ರ ಸರ್ಕಾರ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಸುಳ್ಳು ಭರವಸೆ ನೀಡಿ ದೇಶದ ಯುವಕರಿಗೆ ಅನ್ಯಾಯ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅಸಮಧಾನ ವ್ಯಕ್ತಪಡಿಸಿದರು.
ಪಟ್ಟಣದ ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ನಡೆದ ಪಶ್ಚಿಮ ಪದವೀಧರ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಸೃಷ್ಟಿಯಾಗಿ ಯುವಕರು ದಾರಿ ತಪ್ಪುತ್ತಿದ್ದಾರೆ. ಜೆನ್ಜಿಗಳು ವಿದ್ಯಾರ್ಥಿಗಳ ಪರ ಹಾಗೂ ನೀಟ್ ಸಮಸ್ಯೆಗಳ ಹೋರಾಟಗಳು ಹೆಚ್ಚಾಗಿದ್ದು, ನಿರುದ್ಯೋಗಿ ವಿದ್ಯಾವಂತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಕೇಂದ್ರ ಸರಕಾರ ತಳ್ಳಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರಕಾರ ಸದಾ ಜನಪರ ದೀನ ದಲಿತರ ಪರ ಚಿಂತನೆಗಳನ್ನಿಟ್ಟುಕೊಂಡು ಪ್ರಸ್ತುತ 72 ಸಾವಿರ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, 22 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ 2 ವರ್ಷಗಳ ಕಾಲಮಿತಿಯನ್ನು ಸಡಿಲಿಕೆ ಮಾಡಿ ಅರ್ಜಿ ಕರೆದಿದ್ದು ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ. ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.
ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಮಾತನಾಡಿ, ಅ. 23ರಂದು ನಡೆಯುವ ಚುನಾವಣೆಯಲ್ಲಿ ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು.ಶಾಸಕ ಯು.ಬಿ. ಬಣಕಾರ ಮಾತನಾಡಿ, ಕಾಂಗ್ರೆಸ್ ಸರಕಾರ ಸರ್ವಜನಾಂಗದ ಅಭಿವೃದ್ಧಿಗೆ ಸದಾ ಮುಂದಿದ್ದು, ಪಂಚ ಗ್ಯಾರಂಟಿ ಜೊತೆ ನಮ್ಮ ಸರಕಾರ ಅಭಿವೃದ್ಧಿ ಪಟ್ಟಿಯನ್ನಿಟ್ಟುಕೊಂಡು ಚುನಾವಣೆ ಮಾಡುತ್ತವೆ. ಆದರೆ ಎರಡು ಅವಧಿಗೆ ಆಯ್ಕೆಯಾದ ಸಂಕನೂರ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಎ.ಕೆ. ಪಾಟೀಲ್, ಪಕ್ಷದ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ಪ್ರಕಾಶ ಬನ್ನಿಕೋಡ, ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ರಮೇಶ ಮಡಿವಾಳರ, ಉಳಿವೆಪ್ಪ ಸಾಲಿ, ಮಂಜುನಾಥ ತಳವಾರ, ಸಂತೋಷ ಪಾಟೀಲ್, ಹನುಮಂತಪ್ಪ ಮರಗಡಿ, ಕಬೀರಸಾಬ್ ಹಲಗೇರಿ, ಬಾಬುಸಾಬ್ ಜಡದಿ, ಸುರೇಶ ಮಡಿವಾಳರ, ನಿಂಗಪ್ಪ ಚಳಗೇರಿ ಮುಂತಾದವರು ಇದ್ದರು.