ಸಾರಾಂಶ
ಉಡುಪಿ : ನಗರದ ಮುಖ್ಯರಸ್ತೆಯಲ್ಲಿ ಕಾರು ನಿಲ್ಲಿಸಿ ಅದರೊಳಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಜೋಡಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಇಲ್ಲಿನ ನಗರಸಭೆ ಪಕ್ಕದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿ ಕೆಂಪು ಬಣ್ಣದ ಕಾರಿನ ನಾಲ್ಕು ಗಾಜುಗಳಿಗೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಅಳವಡಿಸಿ, ಈ ಜೋಡಿ ಮೈಮರೆತಿತ್ತು. ಕಾರು ಅಲುಗಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಕಾರಿನ ಬಾಗಿಲು ಬಡಿದಿದ್ದಾರೆ. ನಂತರ ಒಳಗೆ ಜೋಡಿ ಇರುವುದು ಬೆಳಕಿಗೆ ಬಂದಿದೆ. ಅವರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸ್ಥಳದಲ್ಲಿ ಸಾರ್ವಜನಿಕರು ಸೇರುತ್ತಿದ್ದಂತೆ ಜೋಡಿಯೂ ಕಾರನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಉಡುಪಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರನ್ನು ವಶಕ್ಕೆ ಪಡೆದು ಠಾಣೆಗೆ ಒಯ್ದು ದೂರು ದಾಖಲಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಮಲ್ಪೆಯ ಹೂಡೆಯ ನಿವಾಸಿಯ ಕಾರು ಇದಾಗಿದೆ ಎಂದು ಹೇಳಲಾಗಿದೆ.
ಇದು ವೇಶ್ಯಾವಾಟಿಕೆಯೇ ?: ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಜನರು ಮುಖ್ಯರಸ್ತೆಯಲ್ಲಿಯೇ ಕಾರುಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಒಂದು ಕಡೆಯಾದರೇ, ಕಾರಿನೊಳಗೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಇನ್ನೊಂದು ಸಮಸ್ಯೆಯಾಗಿದೆ. ಕಳೆದೊಂದು ತಿಂಗಳಿನಿಂದ ಈ ಕಾರು ಈ ಸ್ಥಳದಲ್ಲಿ ನಿಲ್ಲುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದ್ದರಿಂದ ಇದೊಂದು ಮೊಬೈಲ್ ವೇಶ್ಯಾವಾಟಿಕೆಯಾಗಿರುವ ಸಾಧ್ಯತೆ ಇದೆ. ನಗರದ ಈ ಮುಖ್ಯ ರಸ್ತೆಯಲ್ಲಿಯೇ ಸಿಸಿಟಿವಿಯೂ ಇಲ್ಲದಿರುವುದು ಇಂತಹ ಕೃತ್ಯ ಎಸಗುವವರಿಗೆ ವರದಾನವಾಗಿದೆ ಎಂದು ಉಡುಪಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ತಿಳಿಸಿದರು.