ಸಾರಾಂಶ
ವಾರ್ಷಿಕೋತ್ಸವ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವ ಅವಿಸ್ಮರಣೀಯ ದಿನವಾಗಿದೆ ಎಂದು ವಿರಾಜಪೇಟೆ ತಹಸೀಲ್ಷಾರ್ ರಾಮಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಾರ್ಷಿಕೋತ್ಸವ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವ ಅವಿಸ್ಮರಣೀಯ ದಿನವಾಗಿದ್ದು, ಪೋಷಕರು ಶಿಕ್ಷಕರೊಂದಿಗೆ ಹೊಂದಿಕೊಂಡು ತಮ್ಮ ಮಕ್ಕಳ ಧನಾತ್ಮಕ ಬೆಳವಣಿಗೆಗೆ ಪೂರಕವಾಗಿ ನಿಲ್ಲಬೇಕು ಎಂದು ವಿರಾಜಪೇಟೆ ತಹಸೀಲ್ದಾರ್ ರಾಮಚಂದ್ರ ಅಭಿಪ್ರಾಯಪಟ್ಟರು.ಅವರು ವಿರಾಜಪೇಟೆಯ ಸಂತ ಅನ್ನಮ್ಮ ಸಭಾಭವನದಲ್ಲಿ ಶನಿವಾರ ನಡೆದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಕ್ರಿಯಾಶೀಲತೆಯೊಂದಿಗೆ ಭಾಗವಹಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಕೇವಲ ಶೈಕ್ಷಣಿಕ ಮಾತ್ರವಲ್ಲ ಶೈಕ್ಷಣಿಕೇತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿ ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ ಎಂದರು.ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಮಾತನಾಡಿ, ಆರಂಭಿಕ ಹಂತದಲ್ಲಿ ವಿದ್ಯಾರ್ಥಿಗಳನ್ನು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸಂಸ್ಥೆಯ ಮುಖ್ಯಸ್ಥ ಪೂಜಾ ಸಜೇಶ್ ಅಧ್ಯಕ್ಷತೆ ವಹಿಸಿದ್ದರು.ಅರಮೇರಿ ಕಳಂಚೇರಿ ಮಠದ ಮಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಸಂತ ಅನ್ನಮ್ಮ ಚರ್ಚ್ ಪ್ರಧಾನ ಗುರು ರೆ.ಫಾ. ಜೇಮ್ಸ್ ಡೊಮಿನಿಕ್, ಪುರಸಭಾ ಸದಸ್ಯ ಮಹಮ್ಮದ್ ರಫಿ, ವಿರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ಸಿ.ಆರ್.ಪಿ.ಗಳಾದ ಸಿಂಧು, ಸುಷ್ಮಾ, ಲಿಟಲ್ ಸ್ಕಾಲರ್ ಅಕಾಡೆಮಿಯ ಮುಖ್ಯಶಿಕ್ಷಕಿ ಮೀರಾ ಪೂಣಚ್ಚ, ಚೊಂದಮ್ಮ ಪ್ರದೀಪ್ ಇದ್ದರು.