ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಬಜೆಟ್ ಮೇಲೆ ಮಂಡ್ಯ ಜಿಲ್ಲೆ ಏನನ್ನೂ ನಿರೀಕ್ಷಿಸಲಾಗದಿದ್ದರೂ ಜಿಲ್ಲೆಯ ಸಂಸದರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಂಪುಟದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿರುವುದರಿಂದ ಮಂಡ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಏನಾದರೂ ಮಹತ್ವದ ಕೊಡುಗೆ ಸಿಗಬಹುದೆಂಬ ಆಶಾಭಾವನೆ ಜನರಲ್ಲಿದೆ.ಮೈಷುಗರ್ ಕಾರ್ಖಾನೆಗೆ ಕೇಂದ್ರದಿಂದ ಆರ್ಥಿಕವಾಗಿ ಈವರೆಗೆ ನಯಾಪೈಸೆ ನೆರವು ಸಿಕ್ಕಿಲ್ಲ. ಎಥೆನಾಲ್ ಘಟಕ ಸ್ಥಾಪನೆಗೆ ಅನುಮೋದನೆಯನ್ನೂ ಕೊಟ್ಟಿಲ್ಲ. ಜಿಲ್ಲೆಗೆ ಯಾವುದೇ ಮಾದರಿಯ ಕೈಗಾರಿಕೆಗಳ ಸ್ಥಾಪನೆಗೆ ಒಲವನ್ನೂ ತೋರಿಲ್ಲ. ಕಳೆದ ಬಾರಿ ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗಿ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನದಲ್ಲಿದ್ದರೂ ಮಂಡ್ಯಕ್ಕೆ ಸಿಕ್ಕ ಕೊಡುಗೆ ಶೂನ್ಯವಾಗಿತ್ತು. ಇದು ಜಿಲ್ಲೆಯ ಜನರಲ್ಲಿ ತೀವ್ರ ನಿರಾಸೆ ಮೂಡಿಸಿತ್ತು. ಈ ಬಾರಿಯಾದರೂ ಕೇಂದ್ರದಿಂದ ಮಂಡ್ಯ ಜಿಲ್ಲೆಗೆ ಉದ್ಯೋಗಾಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಎಚ್‌ಡಿಕೆ ಒಲವು ತೋರುವರೇ ಎಂಬ ನಿರೀಕ್ಷೆ ಹೊಂದಲಾಗಿದೆ.
ಎರಡು ದಶಕಗಳ ಹಿಂದಿನ ಹೆಜ್ಜಾಲ- ಚಾಮರಾಜನಗರ ರೈಲ್ವೆ ಯೋಜನೆಯನ್ನು ಬಜೆಟ್‌ಗೆ ಸೇರಿಸುವುದಾಗಿ ಕಳೆದ ವರ್ಷದ ಬಜೆಟ್ ಸಮಯದಲ್ಲೇ ಕುಮಾರಸ್ವಾಮಿ ಅವರಿಂದ ಭರವಸೆ ಸಿಕ್ಕಿತ್ತು. ಆನಂತರ ಆ ಯೋಜನೆ ಏನಾಯಿತೆಂಬುದೇ ಬಜೆಟ್ ನಲ್ಲಿ ಕಾಣಲಿಲ್ಲ. ಯೋಜನೆಗೆ ಹಣಕಾಸನ್ನೂ ಕಾಯ್ದಿರಿಸಲಿಲ್ಲ. ಹೀಗಾಗಿ ಜಿಲ್ಲೆಗೆ ಹೊಸ ರೈಲು ಮಾರ್ಗದ ಕನಸು ಕನಸಾಗಿಯೇ ಉಳಿದಿದೆ. ಈ ರೈಲು ಮಾರ್ಗಕ್ಕೆ ಶನಿವಾರ (ಫೆ.1) ಮಂಡನೆಯಾಗುವ ಬಜೆಟ್‌ನಲ್ಲಿ ಹಸಿರು ನಿಶಾನೆ ಸಿಗಬಹುದೇ ಎಂಬ ಆಶಾಭಾವನೆ ಇದೆ.ಉದ್ಯೋಗ ಸೃಷ್ಟಿಗೆ ಪೂರಕವಾಗಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಕೆ.ಆರ್.ಪೇಟೆ, ನಾಗಮಂಗಲ, ಮಳವಳ್ಳಿ, ಮದ್ದೂರು ಸೇರಿದಂತೆ ಹಲವೆಡೆ ಜಾಗಗಳೂ ಇವೆ. ಚುನಾವಣೆಯಲ್ಲಿ ಗೆದ್ದ ಬಳಿಕ ಜಿಲ್ಲೆಯಲ್ಲಿ ಯಾವ ಯಾವ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದೆ ಎಂಬ ಕುರಿತಂತೆ ಅಧಿಕಾರಿಗಳಿಂದ ಕುಮಾರಸ್ವಾಮಿ ಅವರು ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಅದನ್ನು ಆಧರಿಸಿ ಉದ್ಯೋಗಾಧಾರಿತ ಕೈಗಾರಿಕೆಗಳ ಸ್ಥಾಪನೆಯಾದರೆ ಸಾವಿರಾರು ಯುವಕ- ಯುವತಿಯರು ನಗರ ಪ್ರದೇಶಗಳಿಗೆ ಉದ್ಯೋಗವನ್ನರಸಿ ವಲಸೆ ಹೋಗುವುದು ತಪ್ಪಲಿದೆ ಎಂಬುದು ಈ ಭಾಗದ ಜನರ ಅನಿಸಿಕೆಯಾಗಿದೆ.
ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡಬೇಕೆಂಬ ಆಸೆ ನನಗೂ ಇದೆ. ಆದರೆ, ರಾಜ್ಯಸರ್ಕಾರ ನನಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಯಾರೂ ನನ್ನನ್ನು ಭೇಟಿಯಾಗುತ್ತಿಲ್ಲ ಎನ್ನುವುದು ಕುಮಾರಸ್ವಾಮಿ ಅವರ ಆರೋಪವಾಗಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಎನ್.ಚಲುವರಾಯಸ್ವಾಮಿ ಅವರು, ಮೊದಲು ಕುಮಾರಸ್ವಾಮಿ ಕೇಂದ್ರದಿಂದ ಯಾವ ಕೈಗಾರಿಕೆಗಳನ್ನು ತರುತ್ತಿದ್ದಾರೆ, ಅದಕ್ಕೆ ಎಷ್ಟು ಎಕರೆ ಜಾಗ ಬೇಕು, ಎಷ್ಟು ಉದ್ಯೋಗ ಸೃಷ್ಟಿ ಮಾಡುವರು ಎಂಬ ಮಾಹಿತಿಯನ್ನು ನೀಡಲಿ. ಆನಂತರ ಅದಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಡುವುದಕ್ಕೆ ಸಿದ್ಧರಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.ಕಾವೇರಿ ಜಲವಿವಾದಕ್ಕೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಮೇಕೆದಾಟು ಅಣೆಕಟ್ಟೆಗೆ ಸರ್ಕಾರದಿಂದ ಅನುಮತಿ ದೊರಕಿಸುವುದು ಕುಮಾರಸ್ವಾಮಿ ಅವರ ಜವಾಬ್ದಾರಿಯಾಗಿದೆ. ಕಳೆದ ಲೋಕಸಭಾ ಚುನಾವಣಾ ಸಮಯದಲ್ಲಿ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವ ಭರವಸೆ ನೀಡಿದ್ದರು. ಮೇಕೆದಾಟು ಅಣೆಕಟ್ಟೆಗೆ ಮೋದಿ ಅವರಿಂದ ಅನುಮತಿ ದೊರಕಿಸಲು ಬದ್ಧ ಎಂದಿದ್ದರು. ಚುನಾವಣಾ ಆವೇಶದಲ್ಲಿ ಆಡಿದ ಮಾತುಗಳಿಗೆ ಕುಮಾರಸ್ವಾಮಿ ಬದ್ಧರಾಗಿ ನಿಲ್ಲಬೇಕಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.
ಪಾಂಡವಪುರ- ಚನ್ನರಾಯಪಟ್ಟಣ ರೈಲು ಮಾರ್ಗ ನಿರ್ಮಾಣ, ಕಬ್ಬು ತೋಟಗಾರಿಕೆ ಬೆಳೆಯಾಗಿದ್ದು, ಕಬ್ಬು ಬೆಳೆಗಾರರನ್ನು ನರೇಗಾ ವ್ಯಾಪ್ತಿಗೆ ತರುವುದು, ಸೋಮನಹಳ್ಳಿ, ಗೆಜ್ಜಲಗೆರೆ, ತೂಬಿನಕೆರೆ ಕೈಗಾರಿಕಾ ಪ್ರದೇಶಗಳ ಮಾದರಿಯಲ್ಲಿ ಜಿಲ್ಲೆಯ ವಿವಿಧೆಡೆ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಆಸಕ್ತಿ ತೋರಿಸಬೇಕಿದೆ. ಕೃಷಿಗೆ ಪೂರಕವಾಗುವಂತೆ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದನ್ನು ಪ್ರಧಾನ ಆದ್ಯತೆಯಾಗಿ ಕುಮಾರಸ್ವಾಮಿ ಅವರು ಪರಿಗಣಿಸುವರೇ. ಇದಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಯಾವ ರೀತಿ ಸ್ಪಂದಿಸಬಹುದು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಸುಮಾರು 2.85 ಲಕ್ಷ ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆಯಾದ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಆಸಕ್ತಿ, ಬದ್ಧತೆಯನ್ನು ಪ್ರದರ್ಶಿಸಬೇಕಿದೆ. ಅಭಿವೃದ್ಧಿ ದೃಷ್ಟಿಯಿಂದ ಮಂಡ್ಯ ಜಿಲ್ಲೆ ತೀವ್ರವಾಗಿ ಕಡೆಗಣಿಸಲ್ಪಟ್ಟಿದೆ. ನಟಿ ರಮ್ಯಾ ಅವರು ಕೇವಲ 6 ತಿಂಗಳ ಸಂಸದೆಯಾಗಿದ್ದರೂ ಕೇಂದ್ರೀಯ ವಿದ್ಯಾಲಯ, 45 ಕೋಟಿ ರು. ವೆಚ್ಚದ ಫೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆ, ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಪ್ರಯತ್ನಿಸುವುದರೊಂದಿಗೆ ಎಲ್ಲರ ಗಮನಸೆಳೆದಿದ್ದರು. ಸಾಮಾನ್ಯ ಸಂಸದೆಯಾಗಿ ಅತಿ ಕಡಿಮೆ ಅವಧಿಯಲ್ಲಿ ಅಭಿವೃದ್ಧಿ ಬಗ್ಗೆ ತೋರಿದ ಇಚ್ಛಾಶಕ್ತಿ, ಬದ್ಧತೆಯನ್ನು ನಂತರ ಬಂದವರು ಪ್ರದರ್ಶಿಸಲಿಲ್ಲ.
ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿ ಸ್ಥಾನದಲ್ಲಿರುವ ಕಾರಣಕ್ಕೆ ಅವರ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಮಂಡ್ಯ ಜಿಲ್ಲೆಯ ಜನರ ಋಣ ತೀರಿಸುವ ನಿಟ್ಟಿನಲ್ಲಿ ಯಾವ ಕೊಡುಗೆ ನೀಡಬಹುದು ಎಂಬುದನ್ನು ಜಿಲ್ಲೆಯ ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.