ಕೇಂದ್ರ ಸಚಿವ ಎಚ್ಡಿಕೆಗೆ ಇಂದು ಅಭಿನಂದನಾ ಸಮಾರಂಭ

| Published : Jul 14 2024, 01:41 AM IST

ಕೇಂದ್ರ ಸಚಿವ ಎಚ್ಡಿಕೆಗೆ ಇಂದು ಅಭಿನಂದನಾ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಅಭಿನಂದನಾ ಕಾರ್ಯಕ್ರಮ ಯಶಸ್ವಿಗೆ ತಡೆಯೊಡ್ಡಲು ವಿರೋಧಿಗಳು ಅಪಪ್ರಚಾರಕ್ಕೆ ಹುನ್ನಾರ ನಡೆಸಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಕೆಲವರಿಗೆ ಮದ್ಯ ಹಂಚಿಕೆ ಮಾಡಿ ಕೆಟ್ಟ ಹೆಸರು ತರಲು ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ನಮ್ಮ ಪಕ್ಷದ ಯುವ ಸಮುದಾಯ ಮತ್ತು ಕಾರ್ಯಕರ್ತರು ಶಿಸ್ತಿನಿಂದ ವರ್ತಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಅಬಕಾರಿ ಇಲಾಖೆಗೆ ಸೂಚನೆ ನೀಡಿ ಕಟ್ಟುನಿಟ್ಟಿನ ಕ್ರಮ ವಹಿಸಲು ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಭಾನುವಾರ ಮಂಡ್ಯ ಸಂಸದರೂ ಆದ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತೆ ಸಮಾರಂಭ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಅಭಿನಂದನಾ ಸಮಾರಂಭದ ವೇದಿಕೆ ಸಿದ್ಧತೆ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ನಂತರ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಮತದಾರರಿಗೆ ಕೃತಜ್ಞತೆ ಸಮರ್ಪಿಸಬೇಕು ಎಂಬುದು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಅಭಿಪ್ರಾಯವಾಗಿದೆ ಎಂದರು.

ಅದರಂತೆ ಪ್ರಪ್ರಥಮ ಬಾರಿಗೆ ಪಟ್ಟಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜುಲೈ 14ರಂದು ಬೆಳಗ್ಗೆ 11.30ಕ್ಕೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದ ಬೃಹತ್ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದರು.

ಸಮಾರಂಭ ಯಶಸ್ವಿಯಾಗಿ ನಡೆಸಲು ಎಲ್ಲಾ ಸಿದ್ಧತೆ ಕೈಗೊಂಡಿದ್ದು, ಎಚ್ಡಿಕೆ ಅಭಿನಂದನೆ ಕಾರ್ಯಕ್ರಮದಲ್ಲಿ 30 ರಿಂದ 40 ಸಾವಿರ ಜನರು ಭಾಗವಹಿಸುವರು. ಎಲ್ಲರಿಗೂ ಮಾಂಸಾಹಾರ, ಸಸ್ಯಹಾರ ಊಟ ಏರ್ಪಡಿಲಾಗಿದೆ ಎಂದರು.

ಸಮಾರಂಭಕ್ಕೂ ಮುನ್ನ ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಿಂದ ಪಾಂಡವ ಕ್ರೀಡಾಂಗಣದ ಬಳಿಯ ವೇದಿಕೆವರೆಗೂ ಸಚಿವ ಕುಮಾರಸ್ವಾಮಿ ಅವರನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಗುವುದು ಎಂದು ವಿವರಿಸಿದರು.

ವಿರೋಧಿಗಳಿಂದ ಅಪಪ್ರಚಾರಕ್ಕೆ ಸಂಚು:

ಅಭಿನಂದನಾ ಕಾರ್ಯಕ್ರಮ ಯಶಸ್ವಿಗೆ ತಡೆಯೊಡ್ಡಲು ವಿರೋಧಿಗಳು ಅಪಪ್ರಚಾರಕ್ಕೆ ಹುನ್ನಾರ ನಡೆಸಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಕೆಲವರಿಗೆ ಮದ್ಯ ಹಂಚಿಕೆ ಮಾಡಿ ಕೆಟ್ಟ ಹೆಸರು ತರಲು ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ನಮ್ಮ ಪಕ್ಷದ ಯುವ ಸಮುದಾಯ ಮತ್ತು ಕಾರ್ಯಕರ್ತರು ಶಿಸ್ತಿನಿಂದ ವರ್ತಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಅಬಕಾರಿ ಇಲಾಖೆಗೆ ಸೂಚನೆ ನೀಡಿ ಕಟ್ಟುನಿಟ್ಟಿನ ಕ್ರಮ ವಹಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಾಜಿ ಶಾಸಕ ಅನ್ನದಾನಿ, ಜಿಪಂ ಮಾಜಿ ಸದಸ್ಯರಾದ ಸಿ.ಅಶೋಕ್, ಎಚ್.ಮಂಜುನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಮುಖಂಡರಾದ ನಂಜೇಗೌಡ, ಪುರಸಭೆ ಸದಸ್ಯರಾದ ಆರ್.ಸೋಮಶೇಖರ್, ಎಂ.ಗಿರೀಶ್, ಚಂದ್ರು, ದಿಲೀಪ್, ಆರ್‍ಮುಗಂ, ಮಾಣಿಕ್ಯನಹಳ್ಳಿ ಅಶೋಕ ಇದ್ದರು.