ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮಂಡ್ಯ ಹೊರ ವರ್ತುಲ ರಸ್ತೆ ಅಭಿವೃದ್ಧಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಮನವಿ

| Published : Jan 09 2025, 12:48 AM IST / Updated: Jan 09 2025, 11:54 AM IST

HD Kumaraswamy
ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮಂಡ್ಯ ಹೊರ ವರ್ತುಲ ರಸ್ತೆ ಅಭಿವೃದ್ಧಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಹೆದ್ದಾರಿಯ ಬೈಪಾಸ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಹಳ್ಳದಿಣ್ಣೆ ಬಿದ್ದು ವಾಹನ ಸವಾರರಿಗೆ ಬಹಳಷ್ಟು ತೊಂದರೆ ಆಗಿದೆ. ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡುವುದು ಅಪಾಯಕಾರಿ ಆಗಿದೆ ಎಂದು ಗಡ್ಕರಿ ಅವರಿಗೆ ಕುಮಾರಸ್ವಾಮಿ ಅವರು ಮನವರಿಕೆ ಮಾಡಿಕೊಟ್ಟರು.

 ಮಂಡ್ಯ :  ಮಂಡ್ಯ ಹೆದ್ದಾರಿಯ ಬೈಪಾಸ್ ರಸ್ತೆ ಅಗಲೀಕರಣ, ಅದರ ವೈಟ್ ಟ್ಯಾಪಿಂಗ್ ಹಾಗೂ ಎನ್‌ಎಚ್‌-275ರಲ್ಲಿರುವ ಮಂಡ್ಯ ನಗರದ ಎಲ್ಲಾ ಜಂಕ್ಷನ್‌ಗಳು, ಪಾದಚಾರಿ ಮಾರ್ಗಗಳನ್ನೂ ಅಭಿವೃದ್ಧಿ ಮಾಡಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದರು.

ನವದೆಹಲಿಯಲ್ಲಿ ಬುಧವಾರ ಬೆಳಗ್ಗೆ ನಿತಿನ್ ಗಡ್ಕರಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಕುಮಾರಸ್ವಾಮಿ ಅವರು ಹಲವಾರು ಮನವಿಗಳನ್ನು ಸಲ್ಲಿಸಿ ಆದಷ್ಟು ಬೇಗ ಕ್ರಮ ವಹಿಸುವಂತೆ ಕೋರಿದರು.

ಮಂಡ್ಯ ಹೆದ್ದಾರಿಯ ಬೈಪಾಸ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಹಳ್ಳದಿಣ್ಣೆ ಬಿದ್ದು ವಾಹನ ಸವಾರರಿಗೆ ಬಹಳಷ್ಟು ತೊಂದರೆ ಆಗಿದೆ. ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡುವುದು ಅಪಾಯಕಾರಿ ಆಗಿದೆ ಎಂದು ಗಡ್ಕರಿ ಅವರಿಗೆ ಕುಮಾರಸ್ವಾಮಿ ಅವರು ಮನವರಿಕೆ ಮಾಡಿಕೊಟ್ಟರು.

ಜೇವರ್ಗಿ- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಪಾಂಡವಪುರ ಪಟ್ಟಣ, ಕಿರಂಗೂರು ಬಳಿಯ ಹೆದ್ದಾರಿ ಅಭಿವೃದ್ಧಿ ಮಾಡುವ ಬಗ್ಗೆಯೂ ಸಚಿವರು ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಹಲವಾರು ಹೆದ್ದಾರಿ ಯೋಜನೆಗಳ ಅಭಿವೃದ್ಧಿ ಆಗಬೇಕಿದ್ದು, ಆ ಬಗ್ಗೆ ಕ್ರಮ ವಹಿಸಬೇಕು ಎಂದು ಹತ್ತಕ್ಕೂ ಹೆಚ್ಚು ಯೋಜನೆಗಳ ಮನವಿ ಪತ್ರಗಳನ್ನು ಸಲ್ಲಿಸಿದರು. ಈ ಪೈಕಿ ಕೆಲ ಯೋಜನೆಗಳ ಬಗ್ಗೆ ತಕ್ಷಣವೇ ಖುದ್ದಾಗಿ ಗಮನ ಹರಿಸುವುದಾಗಿ ಗಡ್ಕರಿ ಅವರು ಭರವಸೆ ನೀಡಿದರು.

ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು ಮುಂತಾದ ಜಿಲ್ಲೆಗಳ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ಸಾರಿಗೆ ಸಚಿವರ ಜತೆ ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸಿದರು.

ಕುಮಾರಸ್ವಾಮಿ ಅವರ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಾರಿಗೆ ಸಚಿವರು ಎಲ್ಲಾ ಯೋಜನೆಗಳ ಬಗ್ಗೆ ಖುದ್ದು ಗಮನ ಹರಿಸುವುದಾಗಿ ಗಡ್ಕರಿ ಅವರು ಭರವಸೆ ನೀಡಿದರು ಎಂಬುದಾಗಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.