ಮಂಡ್ಯ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸಲು ಕೇಂದ್ರ ಸಚಿವ ಕುಮಾರಸ್ವಾಮಿ ಚಿಂತನೆ

| Published : Jul 09 2024, 12:46 AM IST

ಮಂಡ್ಯ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸಲು ಕೇಂದ್ರ ಸಚಿವ ಕುಮಾರಸ್ವಾಮಿ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ರಾಜಕಾರಣವೇ ಬೇಡ ಎನ್ನುವ ಮನಸ್ಥಿತಿಗೆ ಬಂದಿದೆ. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಕ್ಷೇತ್ರದ ಮತದಾರರು ನನ್ನ ಮನವಿಯಂತೆ ಮತ ನೀಡಿದರು. ಇದು ನನ್ನೆಲ್ಲ ನೋವನ್ನು ಮರೆಸಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರೈತರಿಗೆ ಅನುಕೂಲವಾಗುವ, ನಿರುದ್ಯೋಗ ಯುವಕರು ಹಾಗೂ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಉದ್ಯಮಗಳ ಬಗ್ಗೆ ಚರ್ಚಿಸಿ ಮಂಡ್ಯ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸಲು ಚಿಂತನೆ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಮಂಡ್ಯದ ಸಂಸದರು ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜು.14ರಂದು ಅಭಿನಂದನಾ ಸಮಾರಂಭ ನಡೆಸುವ ಕುರಿತು ಆಯೋಜಿಸಿದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ದೇಶದ ಪ್ರಧಾನಿ ಮೋದಿ ಅವರು ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ವಿಶ್ವಾಸವಿಟ್ಟು ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಿದ್ದಾರೆ. ಜತೆಗೆ ಪ್ರಧಾನಮಂತ್ರಿಯವರ ಸಮಿತಿಯಲ್ಲೂ ಸ್ಥಾನ ನೀಡಿದ್ದು ಇದು ರಾಜ್ಯಕ್ಕೆ ನೀಡಿದ ಗೌರವವಾಗಿದೆ ಎಂದು ಬಣ್ಣಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ರಾಜಕಾರಣವೇ ಬೇಡ ಎನ್ನುವ ಮನಸ್ಥಿತಿಗೆ ಬಂದಿದೆ. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಕ್ಷೇತ್ರದ ಮತದಾರರು ನನ್ನ ಮನವಿಯಂತೆ ಮತ ನೀಡಿದರು. ಇದು ನನ್ನೆಲ್ಲ ನೋವನ್ನು ಮರೆಸಿತು ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನ್ನನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಹತ್ತಾರು ಸಭೆ ನಡೆಸಿದ್ದರು. ನಾನು ಆಯ್ಕೆಯಾಗಿದ್ದರೆ ಕೇವಲ ಸಂಸದನಾಗಿರುತ್ತಿದೆಯಷ್ಟೇ. ನಾನು ಕುಮಾರಸ್ವಾಮಿ ಅವರೇ ಅಭ್ಯರ್ಥಿ ಎಂದು ಘೋಷಿಸಿದ್ದೆ. ಎಚ್‌ಡಿಕೆ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿರುವುದು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಜಿಲ್ಲೆ ಹಾಗೂ ರಾಜ್ಯದ ರೈತರ ಸಮಸ್ಯೆ, ಮೈಸೂರಿನಿಂದ ತುಮಕೂರಿಗೆ ರೈಲ್ವೆ ಮಾರ್ಗ, ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸುವುದು ಹಾಗೂ ಜಿಲ್ಲೆಗೆ ಅಗತ್ಯವಿರುವ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ತಮ್ಮ ಅಧಿಕಾರವನ್ನು ಜನ ಸಾಮಾನ್ಯರಿಗೆ ಉಪಯೋಗವಂತೆ ಸದ್ಬಳಕೆ ಮಾಡಿಕೊಂಡು ಅನೇಕ ಕಾರ್ಯಕ್ರಮಗಳನ್ನು ಎಚ್‌ಡಿಕೆ ಅನುಷ್ಠಾನಗೊಳಿಸಲಿದ್ದಾರೆ. ನಾನು ಅವರ ಬೆನ್ನಿಗೆ ಬೆನ್ನಾಗಿ ನಿಂತು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರು ಒಂದು ಕಣ್ಣು ದೇಶಕ್ಕೆ ಒಂದು ಕಣ್ಣು ಮಂಡ್ಯಕ್ಕೆ ಎನ್ನುವ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ. ಅಭಿವೃದ್ಧಿಯಲ್ಲಿ ಹಿಂದೆ ಬೀಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಚಾಟಿ ಹಿಡಿದು ಅಧಿಕಾರಿಗಳಿಂದ ಕೆಲಸ ಮಾಡಿಸಬೇಕಾಗುತ್ತದೆ ಎಂದರು.

ಜುಲೈ14ರಂದು ಅಭಿನಂದನಾ ಸಮಾರಂಭ:

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮನಸ್ಸಿನ ತುಡಿತದಂತೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದಲೇ ಪ್ರಥಮವಾಗಿ ಜು.14ರಂದು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದರು.

ಸಮಾರಂಭದಲ್ಲಿ 30 ರಿಂದ 40 ಸಾವಿರ ಜನ ಭಾಗವಹಿಸಲಿದ್ದಾರೆ. ಅಂದು ಡಾ.ರಾಜ್‌ಕುಮಾರ್ ವೃತ್ತದಿಂದ ಪಾಂಡವ ಕ್ರೀಡಾಂಗಣದ ಬಳಿಯ ವೇದಿಕೆವರೆಗೂ ಕುಮಾರಸ್ವಾಮಿ ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆತರಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಸಸ್ಯಹಾರಿ ಮತ್ತು ಬಾಡೂಟ ಏರ್ಪಡಿಲಾಗಿದೆ. ಊಟದ ವ್ಯವಸ್ಥೆ, ಮೆರವಣಿಗೆ, ವೇದಿಕೆ ನಿರ್ಮಾಣ ಹಾಗೂ ಜನರನ್ನು ಕರೆತರುವ ವಿಚಾರ ಎಲ್ಲದಕ್ಕೂ ಸಮಿತಿ ರಚಿಸುವ ಮೂಲಕ ಕಾರ್ಯಕ್ರಮ ಶಿಸ್ತಿನಿಂದ ಜರುಗುವಂತೆ ನೋಡಿಕೊಳ್ಳಲಾಗುವುದು ಎಂದು ವಿವರಿಸಿದರು.

ಕಾಂಗ್ರೆಸ್‌ನಿಂದ ದ್ವೇಷದ ರಾಜಕಾರಣ:

ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜುಲೈ 5 ರಂದು ಮಂಡ್ಯದಲ್ಲಿ ಆಯೋಜಿಸಿದ್ದ ಜನತಾದರ್ಶನಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸದಂತೆ ಅಡ್ಡಿಪಡಿಸುವ ಮೂಲಕ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.

ಲೋಕಸಭಾ ಚುನಾವಣೆಯಲ್ಲಿ ಎಚ್‌ಡಿಕೆ ಗೆಲುವು ಜೆಡಿಎಸ್ ಕಾರ್ಯಕರ್ತರಿಗೆ ಟಾನಿಕ್ ನೀಡಿದಂತಾಗಿದೆ. ಹಿಂದಿನ ಸೋಲು, ಹತಾಶೆ, ನಿರಾಶೆ ಎಲ್ಲವನ್ನು ಈ ಗೆಲುವು ಮರೆಸಿದೆ. ಗೆಲುವಿನ ಯಶಸ್ಸು ಮತ್ತು ಉತ್ಸಾಹವನ್ನು ಮುಂದಿನ ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೂ ಮುಂದುವರೆಸಬೇಕಿದೆ ಎಂದರು.

ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಬಿಜೆಪಿ ಅಧ್ಯಕ್ಷ ಧನಂಜಯ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಲಿಂಗರಾಜು(ಗುಣ), ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಳಾ ನವೀನ್, ಮುಖಂಡರಾದ ಎಚ್.ಎನ್.ಮಂಜುನಾಥ್, ಎಲ್.ಅಶೋಕ್, ಪುರಸಭೆ ಸದಸ್ಯರಾದ ಆರ್.ಸೋಮಶೇಖರ್ ಹಲವರಿದ್ದರು.