ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಡಿಸೆಂಬರ್ 23ರಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಸಕಲೇಶಪುರ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ ತಿಳಿಸಿದರು.ನಮ್ಮ ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಕೇಂದ್ರ ಸರ್ಕಾರದ ಯೋಜನೆಗಳಾದ ರಾಷ್ಟ್ರೀಯ ಹೆದ್ದಾರಿ 75ರ ಅವೈಜ್ಞಾನಿಕ ಕಾಮಗಾರಿ ಹಾಗೂ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಚೌಲಗೆರೆ ಟೋಲ್ ಪ್ಲಾಜಾದಲ್ಲಿ ಸುಂಕ ವಸೂಲಾತಿಗೆ ಮುಂದಾಗಿರುವ ಸಂಬಂಧ ಹಾಗೂ ಆಲೂರು ತಾಲೂಕು ಕೇಂದ್ರದಲ್ಲಿ ರೈಲು ನಿಲುಗಡೆಯೂ ರದ್ದಾಗಿರುವ ವಿಷಯಗಳ ಕುರಿತಾಗಿ ಗಮನ ಸೆಳೆದು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಮನವಿ ಸಲ್ಲಿಸಲಾಗುವುದು ಎಂದು ಎಚ್.ಕೆ ಕುಮಾರಸ್ವಾಮಿ ತಿಳಿಸಿದರು.
ಆಲೂರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದ್ದು ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮೀಣ ರಸ್ತೆಗಳಿಗೆ ತೆರಳಲು ಸರಿಯಾದ ವ್ಯವಸ್ಥೆ ಹಾಗೂ ಸೂಚನಾ ಫಲಕಗಳನ್ನು ಅಳವಡಿಸದೆ ಹಾಗೂ ಐದರಿಂದ ಆರು ಕಿಲೋಮೀಟರ್ ದೂರಕ್ಕೆ ಒಂದರಂತೆ ಡಿವೈಡರ್‌ನಲ್ಲಿ ಟೋಟಲ್ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿದೆ ಹಾಗೂ ಹಾಸನದಿಂದ ಮಾರನಹಳ್ಳಿಯ ವರೆಗೆ ರಸ್ತೆಯನ್ನು ಸಂಪೂರ್ಣ ಪೂರ್ಣಗೊಳಿಸದೆ ಬೈರಾಪುರದ ಬಳಿಯ ಚೌಲಗೆರೆ ಗ್ರಾಮದ ಹತ್ತಿರ ಸುಂಕ ವಸೂಲಾತಿ ಕೇಂದ್ರವನ್ನು ನಿರ್ಮಿಸಿ ಕಳೆದ ಸೋಮವಾರ ಅಂದರೆ ಡಿಸೆಂಬರ್ 16ರಿಂದ ಸುಂಕ ವಸೂಲಾತಿಯನ್ನು ಪ್ರಾರಂಭಿಸಿರುವುದು ಕಾನೂನು ಬಾಹಿರವಾಗಿದ್ದು, ಇದಕ್ಕೆ ಜಿಲ್ಲಾಧಿಕಾರಿಗಳು ಮಂಗಳವಾರ ನಡೆದ ಸಭೆಯಲ್ಲಿ ಸುಂಕ ವಸೂಲಾತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶ ಮಾಡಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವಾಗಿದೆ ಎಂದರು.ಅದೇ ರೀತಿ ಹಾಸನದಿಂದ ಸಕಲೇಶಪುರದವರೆಗೆ 40 ಕಿಲೋ ಮೀಟರ್ ಅಂತರವಿದ್ದು ಅದರ ಮಧ್ಯದಲ್ಲಿ ಆಲೂರು ತಾಲೂಕು ಕೇಂದ್ರವಾಗಿದ್ದು ಈ ಇಂದಿನ ಸಂಸದರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ನಮ್ಮ ಶ್ರಮದಿಂದ ಆಲೂರು ನಿಲ್ದಾಣದಲ್ಲಿ ಇಲ್ಲಿಯವರೆಗೆ ನಿಲುಗಡೆಗೆ ಅವಕಾಶವಿದ್ದ ರೈಲಿನ ನಿಲುಗಡೆಯನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಏಕಾಏಕಿ ರದ್ದುಗೊಳಿಸಿದ್ದು, ಈ ನಿರ್ಧಾರವು ಖಂಡನೀಯವಾಗಿದೆ. ರೈಲ್ವೆ ಇಲಾಖೆ ಒಂದು ಸೇವಾ ವಲಯವಾಗಿದ್ದು ಇಲ್ಲಿ ಆದಾಯವನ್ನು ನಿರೀಕ್ಷಿಸದೇ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತೆ ಆಲೂರು ತಾಲೂಕು ಕೇಂದ್ರದಲ್ಲಿ ರೈಲು ಗಾಡಿಗಳ ನಿಲುಗಡೆಗೆ ಮರು ಆದೇಶ ಮಾಡುವಂತೆ ಆಗ್ರಹಿಸಿದರು.
ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಸಂಬಂಧ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 25 ಕೋಟಿ ರು. ಗಳ ಅನುದಾನವನ್ನು ಮಂಜೂರು ಮಾಡಿಸಿದ್ದು ನನ್ನ ಅವಧಿಯಲ್ಲಿಯೇ ಜಾಗವನ್ನು ಮಂಜೂರು ಮಾಡಿ ಶೇ.20ರಷ್ಟು ಕಾಮಗಾರಿಯೂ ಕೂಡ ಪ್ರಾರಂಭವಾಗಿತ್ತು ಆದರೆ ಕಳೆದ 2 ವರ್ಷದಿಂದ ಈಚೇಗೆ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಮಲೆನಾಡು ಭಾಗದ ಅದರಲ್ಲೂ ಆನೆ ಹಾವಳಿ ಇರುವ ಪ್ರದೇಶದ ಬಡವರ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೇಲ್ಕಂಡ ಶಾಲೆಯನ್ನ ಮಂಜೂರು ಮಾಡಿಸಿದ್ದೇನು ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ಮುಂಜೂರಾತಿ ಜಾಗರಣೆ ಬಿಟ್ಟು ಬದಲಿ ಜಾಗದಲ್ಲಿ ಶಾಲೆ ನಿರ್ಮಿಸುವಂತೆ ಒತ್ತಡಗಳು ಇದೆ ಎಂಬುದು ತಿಳಿದು ಬಂದಿದೆ. ಈ ವಿಷಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಮಂಜೂರಾಗಿರುವ ಜಾಗವನ್ನು ಬಿಟ್ಟು ಬೇರೆ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಪರಿಣಾಮ ಬೇರೆಯದ್ದಾಗಿರುತ್ತದೆ ಎಂದು ಎಚ್ಚರಿಸಿದರು.ತಾಲೂಕಿನ ಹಲವು ಸಮಸ್ಯೆಗಳು ಹಾಗೂ ವಿಚಾರಗಳ ಬಗ್ಗೆ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್ ಮಂಜೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್ ಮಂಜೇಗೌಡ ತಾ.ಪಂ ಮಾಜಿ ಸದಸ್ಯ ನಟರಾಜು ನಾಕಲಗೂಡು, ಜೆಡಿಎಸ್ ಮುಖಂಡರುಗಳಾದ ಕೆ.ವಿ ಮಲ್ಲಿಕಾರ್ಜುನ, ಗೇಕರಾವಳ್ಳಿ ಬಸವರಾಜು, ಅರಸಪ್ಪ, ಇತರರು ಉಪಸ್ಥಿತರಿದ್ದರು.