ಹಂಪಿ ವಿರೂಪಾಕ್ಷೇಶ್ವರ ದರ್ಶನ ಪಡೆದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

| Published : Oct 16 2025, 02:01 AM IST

ಹಂಪಿ ವಿರೂಪಾಕ್ಷೇಶ್ವರ ದರ್ಶನ ಪಡೆದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರುಕಳಿಸುವ ಕಾರ್ಯವನ್ನು ಎಲ್ಲರೂ ಒಗ್ಗೂಡಿ ಮಾಡಬೇಕಿದೆ.

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಭೇಟಿ ನೀಡಿ ವಿರೂಪಾಕ್ಷೇಶ್ವರ, ಶ್ರೀ ಪಂಪಾಂಬಿಕೆ ದೇವಿ ಮತ್ತು ನಾಡದೇವತೆ ಶ್ರೀ ಭುವನೇಶ್ವರಿ ದೇವಿ ದರ್ಶನ ಪಡೆದರು.

ಹಂಪಿಯ ವಿರೂಪಾಕ್ಷ ಗೋಪುರದ ಮುಖ್ಯದ್ವಾರದಲ್ಲಿ ದೇಗುಲದ ಆನೆ ಲಕ್ಷ್ಮಿ ಮಾಲಾರ್ಪಣೆ ಮಾಡುವ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸ್ವಾಗತಿಸಿತು. ದೇಗುಲದೊಳಗೆ ಪುರೋಹಿತ ಮೋಹನ್ ಚಿಕ್ಕಭಟ್ ಜೋಶಿ ವಿಜಯನಗರದ ಧಾರ್ಮಿಕ ಕೇಂದ್ರಗಳ ಮಹತ್ವ, ಸಾಮ್ರಾಜ್ಯದ ಅರಸರ ಕೊಡುಗೆಗಳು ಮತ್ತು ಐತಿಹಾಸಿಕ ಸ್ಮಾರಕಗಳ ಬಗ್ಗೆ ಸಚಿವರಿಗೆ ವಿವರಿಸಿದರು.

ಹಂಪಿ ಗತ ವೈಭವ ಮರುಕಳಿಸೋಣ:

ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರುಕಳಿಸುವ ಕಾರ್ಯವನ್ನು ಎಲ್ಲರೂ ಒಗ್ಗೂಡಿ ಮಾಡಬೇಕಿದೆ. ವಿಜಯನಗರ ಸಾಮ್ರಾಜ್ಯದ ಆಡಳಿತ, ಕಲೆ, ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು ಇದು ವಿಶ್ವ ಪಾರಂಪರಿಕ ತಾಣವಾಗಿದೆ. ಇಲ್ಲಿನ ಸ್ಮಾರಕಗಳನ್ನು ಸಂರಕ್ಷಣೆ ಮಾಡುವ ಮೂಲಕ ಗತವೈಭವವನ್ನು ಮರುಸ್ಥಾಪಿಸುವ ಕೆಲಸ ಮಾಡೋಣ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ದೇವಾಲಯದಲ್ಲಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿ ಬಾಲ್ಯದಿಂದಲೂ ನನಗೆ ಪರಂಪರೆ ಕುರಿತು ಶಿಕ್ಷಣ ನೀಡಿದೆ. ಹಂಪಿ ಸ್ಮಾರಕಗಳು ಹಾಳಾಗಿರುವುದನ್ನು ಕಂಡು ನನಗೆ ಘಾಸಿಯಾಗುತ್ತಿತ್ತು. ಆದರೆ, ಭಾರತೀಯ ಪುರಾತತ್ವ ಇಲಾಖೆ ಶ್ರಮದಿಂದ ಹಂಪಿ ಯುನೆಸ್ಕೊ ಪಾರಂಪರಿಕ ತಾಣವಾಗಿದೆ. ವಿಜಯನಗರದ ಪ್ರಮುಖ ಅರಸ ಶ್ರೀಕೃಷ್ಣದೇವರಾಯರ ಆಡಳಿತ ನಮಗೆಲ್ಲ ಮಾದರಿ ಆಗಿದೆ. ಈಗಿನ ಆಧುನಿಕ ಯುಗಕ್ಕೂ ಅವರ ಆಡಳಿತ ಮಾದರಿ ಆಗಿದ್ದು, ಅವರು ಸಾಮ್ರಾಜ್ಯ ಕಟ್ಟಿದ ಬಗೆ, ಪ್ರಜೆಗಳ ಜೊತೆಗೆ ಅವರ ಓಡನಾಟ, ಅವರು ಈ ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಅವರು ಕಟ್ಟಿದ ಸಾಮ್ರಾಜ್ಯ ನಮಗೆಲ್ಲರಿಗೂ ಕೈಗನ್ನಡಿ ಆಗಿದೆ. ನಾವೆಲ್ಲರೂ ಒಗ್ಗೂಡಿ ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರು ಕಳಿಸಬೇಕಿದೆ ಎಂದರು.

ಹಂಪಿ ವಿದ್ಯಾರಣ್ಯ ಆಶ್ರಮದ ಪೀಠಾಧಿಪತಿ ಶ್ರೀವಿದ್ಯಾರಣ್ಯ ಭಾರತಿ ಸ್ವಾಮೀಜಿ, ಸಂಸದ ಈ.ತುಕಾರಾಂ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ಅಕ್ರಂ ಅಲಿ ಷಾ, ಎಸ್ಪಿ ಎಸ್.ಜಾಹ್ನವಿ, ಸಹಾಯಕ ಆಯುಕ್ತ ಪಿ.ವಿವೇಕಾನಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ಎಸ್.ತಳಕೇರಿ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ನಿರ್ದೇಶಕ ಹನುಮಂತಪ್ಪ ಮತ್ತಿತರರಿದ್ದರು.