ಕೇಂದ್ರ ಸರ್ಕಾರದ ಸಾಧನೆ ತಿಳಿಸಲು ಕಾರ್ಯಕರ್ತರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರೆ

| Published : Mar 24 2024, 01:31 AM IST / Updated: Mar 24 2024, 04:07 PM IST

ಕೇಂದ್ರ ಸರ್ಕಾರದ ಸಾಧನೆ ತಿಳಿಸಲು ಕಾರ್ಯಕರ್ತರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯಲ್ಲಿ ದಾಖಲೆ ಮತಗಳಿಂದ ಗೆಲ್ಲುತ್ತೇವೆ ಎಂದು ಭರವಸೆ ನೀಡಿದರೆ ಸಾಲದು, ಅದಕ್ಕಾಗಿ ಪ್ರತಿಯೊಬ್ಬ ಕಾರ್ಯಕರ್ತನೂ ಕಠಿಣ ಪರಿಶ್ರಮ ಪಡಬೇಕು ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಪಕ್ಷದ ಮುಖಂಡರು, ಕಾರ್ಯಕರ್ತರು ಕ್ಷೇತ್ರದ ಪ್ರತಿ ಮನೆಮನೆಗೆ ತೆರಳಿ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನದಟ್ಟು ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಲಹೆ ನೀಡಿದರು.

ಶನಿವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಕುಂದಗೋಳ ತಾಲೂಕಿನ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು, ಮುಖಂಡರು ಜನರ ಮನೆಗೆ ನೇರವಾಗಿ ತೆರಳಿ ಕೇಂದ್ರದ ಯೋಜನೆಗಳ ಬಗ್ಗೆ ವಿವರಿಸಬೇಕು. 

ಬೂತ್ ಮಟ್ಟದಲ್ಲಿ ಎಲ್ಲ ಜಾತಿ, ವರ್ಗದ ಪ್ರಮುಖರ ಹಾಗೂ ಫಲಾನುಭವಿಗಳ ಸಭೆ ನಡೆಸಿ ಕೇಂದ್ರದ ಯೋಜನೆಗಳ ಕುರಿತು ಮನವರಿಕೆ ಮಾಡಬೇಕು. 

ಚುನಾವಣೆಯಲ್ಲಿ ದಾಖಲೆ ಮತಗಳಿಂದ ಗೆಲ್ಲುತ್ತೇವೆ ಎಂದು ಭರವಸೆ ನೀಡಿದರೆ ಸಾಲದು, ಅದಕ್ಕಾಗಿ ಪ್ರತಿಯೊಬ್ಬ ಕಾರ್ಯಕರ್ತನೂ ಕಠಿಣ ಪರಿಶ್ರಮ ಪಡಬೇಕು. ಅಂದಾಗ ಮಾತ್ರ ನಾವು ಅಂದುಕೊಂಡ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಗಲಿದೆ ಎಂದರು.

ಕುಂದಗೋಳ ನನಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಕೊಟ್ಟ ಕ್ಷೇತ್ರ. ಯಾವ ಪಕ್ಷದವರೂ ಕೇಂದ್ರ ಸಚಿವ ಜೋಶಿ ಕೆಲಸ ಮಾಡಿಲ್ಲ ಎಂದು ವಿರೋಧಿಸಲು ಸಾಧ್ಯವಿಲ್ಲ. 

ಅಷ್ಟರ ಮಟ್ಟಿಗೆ ಕ್ಷೇತ್ರವ್ಯಾಪಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ತುಷ್ಟೀಕರಣದ ರಾಜಕಾರಣ ಮಾಡುವ ಕಾಂಗ್ರೆಸ್ ನಮ್ಮನ್ನು ಸಹಜವಾಗಿಯೇ ವಿರೋಧಿಸುತ್ತದೆ. ಬಿಟ್ಟರೆ ಬೇರೆ ಯಾವ ವಿಷಯಗಳೂ ಕಾಂಗ್ರೆಸ್ ಬಳಿ ಇಲ್ಲ ಎಂದರು.

ಕುಂದಗೋಳ ಕ್ಷೇತ್ರದ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಿಟ್ಟಿ ಗ್ಯಾರಂಟಿ ಯೋಜನೆ ಪೂರೈಕೆಯಲ್ಲಿ ಕಾಲ ಕಳೆಯುತ್ತಿದೆ. 

ಹೀಗಾಗಿ ಕಾಂಗ್ರೆಸ್‌ನ ಬಹುತೇಕ ಶಾಸಕರು ತಮ್ಮ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗದೇ ತೊಳಲಾಡುತ್ತಿದ್ದು, ಜನರ ಶಾಪಕ್ಕೆ ಗುರಿಯಾಗುತ್ತಿದ್ದಾರೆ ಎಂದರು.

ಧಾರವಾಡ ಜಿಲ್ಲಾ ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಲಿಂಗಪ್ಪ ಸುತಗಟ್ಟಿ, ಕುಂದಗೋಳ ವಿಧಾನಸಭಾ ಕ್ಷೇತ್ರದ ಪ್ರಭಾರಿ ಶಶಿ ಕುಲಕರ್ಣಿ, ಭರಮಪ್ಪ ದ್ಯಾಮನಗೌಡರ, ರವಿಗೌಡ ಪಾಟೀಲ, ಮಹಾಂತೇಶ ಶ್ಯಾಗೋಟಿ, ಡಿ.ವೈ. ಲಕ್ಕಣ್ಣಗೌಡರ, ಯಲ್ಲಮ್ಮ ಗಾಣಿಗೇರ, ಶಿವಾ ಹಿರೇಗೌಡರ ಇದ್ದರು.